ಬಾಗಲಕೋಟೆ ಸಮಗ್ರ ಅಭಿವೃದ್ದಿಗೆ ಸಹಕರಿಸಿ : ಡಿಸಿಎಂ ಕಾರಜೋಳ

ಬಾಗಲಕೋಟೆ: ಆಗಸ್ಟ 17 ( ಹಾಸನಸೀಮೆ.ಇನ್ ) : ಬಾಗಲಕೋಟೆ ನಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ದಿ ಪಡಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
  ನಗರದ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ಹಕ್ಕು ಪತ್ರ ವಿತರಣಾ ಸಮಾರಂಭದಲ್ಲಿ ಯುನಿಟ್-2ರ ವ್ಯಾಪ್ತಿಯ ಬಾಡಿಗೆದಾರರು ಹಾಗೂ ಇತರೆ ಸಂತ್ರಸ್ಥರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು ಬಾಗಲಕೋಟೆ ನವನಗರವನ್ನು ಚಂಡಿಗಡ ಮಾದರಿ ಮಾಡುವ ಕನಸನ್ನು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಹೊಂದಿದ್ದರು. ಅವರ ಕನಸನ್ನು ನನಸಾಗಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
  ಬಾಗಲಕೋಟೆ ಪಟ್ಟಣ ಅಭಿವೃಧ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿರುವ ಶಾಸಕ ವೀರಣ್ಣ ಚರಂತಿಮಠ ಅವರು ಯುಕೆಪಿಯ ಪುನರ್ವಸತಿ, ಪುನರ್ ನಿರ್ಮಾಣದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ನಿವೇಶನ ಪಡೆದ ಸಂತ್ರಸ್ಥರು ತಮ್ಮ ನಿವೇಶನವನ್ನು ಮಾರಾಟ ಮಾಡದೇ ಬೇರೆ ಬೇರೆ ಉದ್ದೇಶಗಳಿಗೆ ಬಳಕೆಯಾದೇ ಮುಂದಿನ ಜನಾಂಗಕ್ಕೆ ಆಸ್ತಿಯಾಗಿ ಉಳಿಯಬೇಕು ಎಂದರು. 
  ಕೋವಿಡ್ ಹಿನ್ನಲೆಯಲ್ಲಿ ಯುಕೆಪಿಯ ಅಭಿವೃಧ್ದಿ ಕಾಮಗಾರಿಗಳು ಹಿನ್ನಡೆಯಾಗಿದ್ದು, ಇಲ್ಲದಿದ್ದರೆ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡು ಈ ಭಾಗದ ಸ್ವರೂಪವೇ ಬದಲಾಗುತ್ತಿತ್ತು ಎಂದರು. ಮುಳುಗಡೆ ನಗರ ಸುಂದರವಾಗಿ ಇರಬೇಕು. ಪ್ರಾಧಿಕಾರದ ಸದಸ್ಯರು ವಿದ್ಯಾವಂತರಾಗಿದ್ದಾರೆ. ಈ ನಿಟ್ಟಿನಲ್ಲಿ ಅಭಿವೃಧ್ದಿ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕಾರಜೋಳ ತಿಳಿಸಿದರು.
  ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಪುನರ್ವಸತಿ, ಪುನರ್ ನಿರ್ಮಾಣ ಯೋಜನೆಯಡಿಯಲ್ಲಿ ಯುನಿಟ್-2ರ ವ್ಯಾಪ್ತಿಯ ಬಾಡಿಗೆದಾರರು ಹಾಗೂ ಇತರೆ ಸಂತ್ರಸ್ಥರು ಸೇರಿ ಒಟ್ಟು 71 ವಿವಿಧ ಸಂತ್ರಸ್ಥರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಹಕ್ಕು ಪತ್ರ ಪಡೆದವರು ಅದನ್ನು ಮಾರಾಟ ಮಾಡುವಂತಿಲ್ಲ. ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡುವಂತಿಲ್ಲವೆಂದರು. ಯಾವ ಉದೇಶಕ್ಕೆ ನೀಡಲಾಗಿದೆ ಅದೇ ಉದ್ದೇಶಕ್ಕೆ ಬಳಕೆಯಾಗಬೇಕು ಎಂದರು.
       ಆ ಭಾಗದಲ್ಲಿ ಬದಲಾವಣೆ ಆಗಬೇಕು. ಯುನಿಟ್-3ರ ಸಂತ್ರಸ್ಥರಿಗೂ ಸಹ ಹಕ್ಕು ಪತ್ರ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ನ್ಯಾಯಾಲಯದ ಮೆಟ್ಟಿಲೇರಿದ ಕೆಲವು ಸಂತ್ರಸ್ಥರನ್ನು ಮನವಲಿಸಲಾಗಿದೆ. ಯುನಿಟ್-3ರ ವ್ಯಾಪ್ತಿಯ ಲೇಔಟ್ ಅನುಮೋದನೆಗೊಂಡಿರುವುದಾಗಿ ತಿಳಿಸಿದರು. ಅಲ್ಲದೇ ಸಂತ್ರಸ್ಥರು ಪ್ರಾಧಿಕಾರಕ್ಕೆ ಅಲೆದಾಡುವ ಕೆಲಸವಾಗಬಾರದು. ಸಂತ್ರಸ್ಥರ ಕೂಗು ಕೇಳಬಾರದು. ಅಭಿವೃಧ್ದಿ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
        ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಪ್ರಾಧಿಕಾರದ ಸದ್ಯಸರಾದ ಶಿವಾನಂದ ತವಳಿ, ಮೋಹನ ನಾಡಗೌಡರ, ಕುಮಾರ ಎಳ್ಳಿಗುತ್ತಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಬಿಟಿಡಿಎ ಮುಖ್ಯ ಅಭಿಯಂತರ ವಾಸನದ, ಪುನರ್‍ರ್ವಸತಿ ಅಧಿಕಾರಿ ಗಣಪತಿ ಪಾಟೀಲ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

Previous Post Next Post