ಸಕಲೇಶಪುರ: ಕಳೆದ ಆಗಸ್ಟ್ 3 ರಿಂದ 8ರ ವರೆಗೆ ತಾಲ್ಲೂಕಿನಾಧ್ಯಂತ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಹೊಡೆತಕ್ಕೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸು, ಅಡಿಕೆ, ಬಾಳೆ ಹಾಗೂ ಶುಂಠಿ ಬೆಳೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಾಫಿ ಹಾಗೂ ಕಾಳು ಮೆಣಸು ಬೆಲೆ ಕುಸಿತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯ ನಡುವೆಯೇ 5 ದಿನಗಳಲ್ಲಿ ಸುರಿದ ಸರಾಸರಿ 850 ಮಿ.ಮೀ. ದಾಖಲೆ ಮಳೆ ಜೊತೆಗೆ ಭಾರೀ ವೇಗವಾಗಿ ಬೀಸಿದ ಗಾಳಿಯ ಹೊಡೆತ ಬೆಳೆಗಾರರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಒಂದು ಎಕರೆ ಕಾಫಿ ತೋಟದಲ್ಲಿ ಕನಿಷ್ಠ 10 ಮರಗಳು ಧರೆಗುರುಳಿದ್ದು, ಬಿದ್ದ 8 ಮರಗಳಲ್ಲಿ ಕಾಳು ಮೆಣಸು ಬಳ್ಳಿಗಳು ಇದ್ದವು.
ಒಂದು ಮರ ಬಿದ್ದರೆ ಸರಾಸರಿ ರೊಬಸ್ಟಾ 7 ಗಿಡಗಳು, ಅರೇಬಿಕಾ 15 ಗಿಡಗಳು ಮುರಿದು ಬಿದ್ದು ಶಾಶ್ವತವಾಗಿ ನಾಶವಾಗಿವೆ. ಹೀಗೆ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳಲ್ಲಿ ಇತ್ತೀಚಿನ ಸರ್ವೆ ಪ್ರಕಾರ 25500 ಹೆಕ್ಟೇರ್ ಪ್ರದೇಶದಲ್ಲಿ ರೊಬಾಸ್ಟಾ ಕಾಫಿ, 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತದೆ. 3.6 ಲಕ್ಷಕ್ಕೂ ಹೆಚ್ಚು ಮರಗಳು, ಸುಮಾರು 30 ಲಕ್ಷಕ್ಕೂ ಹೆಚ್ಚು ಕಾಫಿ ಗಿಡಗಳು ನಾಶವಾಗಿವೆ. ಜೊತೆಗೆ ಕಾರ್ಮಿಕರಿಗಾಗಿ ನಿರ್ಮಾಣ ಮಾಡಿರುವ ವಸತಿಗಳು, ಕಾಫಿ ಸಂಸ್ಕರಣಾ ಘಟಕ ಕಟ್ಟಡಗಳು ಸಹ ಹಾನಿಗೊಂಡಿವೆ ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ಹೇಳಿದರು.
ಒಂದು ಕಾಫಿ ಗಿಡ ನೆಟ್ಟು ಫಸಲು ನೀಡುವ 5 ವರ್ಷದ ವರೆಗೆ ಕನಿಷ್ಟ 2.5 ಸಾವಿರ ರೂಪಾಯಿ ಖರ್ಚಾಗುತ್ತದೆ. 30 ಲಕ್ಷ ಕಾಫಿ ಗಿಡಗಳನ್ನು ಪುನಃ ನೆಟ್ಟು ಫಸಲು ಬರುವ ವರೆಗೂ ಖರ್ಚು ಮಾಡಬೇಕು. ಪ್ರಕೃತಿ ವಿಕೋಪದಿಂದ ಆಗಿರುವಂತಹ ಈ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು ಎನ್ನುತ್ತಾರೆ.
ಕಾಳುಮೆಣಸು ಬಳ್ಳಿ ಸಮೇತ ಮರಗಳು ಹಾಗೂ ಕಾಫಿ ಗಿಡಗಳು ಬಿದ್ದುಹೊಗಿರುವ ನಷ್ಟ ಒಂದೆಡೆಯಾದರೆ, ಸತತ 5 ದಿನಗಳ ಕಾಲ ಬಿಡುವಿಲ್ಲದೆ ಧಾರಾಕಾರವಾಗಿ ಸುರಿದ ಮಳೆ ಹಾಗೂ ಗಾಳಿಯಿಂದ ಶೀತ ಹೆಚ್ಚಾಗಿ ಕಾಳು ಮೆಣಸು, ಕಾಫಿ ಹಾಗೂ ಅಡಿಕೆ ಫಸಲು ಗಿಡದಿಂದ ಉದುರುತ್ತಿವೆ. ಕಾಳು ಮೆಣಸು ಬಳ್ಳಿಗಳಲ್ಲಿ ಈಗಾಗಲೆ ಹಳದಿ ರೋಗದ ಬಾಧೆ ಕಾಣಿಸಿಕೊಂಡಿದೆ ಎಂದು ತೋಟದ ಗದ್ದೆ ವಿನಯ್ ಬೆಳ್ಳೂರು ಆತಂಕ ವ್ಯಕ್ತಪಡಿಸುತ್ತಾರೆ.
ಮಲೆನಾಡಿನ ಈ ಭಾಗದ ಜನರ ಬದುಕು ನಿಂತಿರುವುದೇ ಕಾಫಿ ಹಾಗೂ ಕಾಳು ಮೆಣಸು ಬೆಳೆ ಮೇಲೆ. ಒಂದೆಡೆ ಬೆಳೆ ಕುಸಿತ ಮತ್ತೊಂದೆಡೆ ಅತಿವೃಷ್ಟಿಯಿಂದಾಗಿ ಕಾಫಿ ಬೆಳೆಗಾರರು ನಿರಂತರ ನಷ್ಟವನ್ನೇ ಅನುಭವಿಸುತ್ತಾ ಬಂದಿದ್ದಾರೆ. ಮಲೆನಾಡು ಪ್ರದೇಶ ಎಂದ ಕೂಡಲೆ ಸರ್ಕಾರದ ಕಣ್ಣಿಗೆ ಕಾಣುವುದು ಕೊಡಗು ಹಾಗೂ ಚಿಕ್ಕಮಗಳೂರು ಮಾತ್ರ. ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲ್ಲೂಕುಗಳ ಬೆಳೆಗಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳುತ್ತಾರೆ. 2018 ಹಾಗೂ 2019ರಲ್ಲಿ ಅತಿವೃಷ್ಟಿಯಿಂದ ಸುಮಾರು 800 ಕೋಟಿ ರೂಪಾಯಿಗೂ ಹೆಚ್ಚು ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಉಂಟಾಗಿದ್ದರೂ ಯಾವುದೇ ಪರಿಹಾರ ಬಿಡುಗಡೆ ಮಾಡಲಿಲ್ಲ. ಸರ್ಕಾರ ಮೂರು ವರ್ಷಗಳಿಂದ ನಿರಂತರ ಅತಿವೃಷ್ಟಿಯ ಹಾನಿಯ ವಸ್ತುನಿಷ್ಟ ವರದಿಯನ್ನು ಪರಿಗಣಿಸಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎನ್ನುತ್ತಾರೆ.
Tags
ಸಕಲೇಶಪುರ