ಸಕಲೇಶಪುರ:ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ತಾಲೂಕಿನ ಯಸಳೂರು ಹೋಬಳಿ ತೆಂಕಲಗೋಡು ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆ ಕಾರ್ಯಕ್ರಮ ಗ್ರಾಮದಲ್ಲಿರುವ ಪೀಠದಲ್ಲೆ ವೀರಶೈವ ವಿಧಿವಿಧಾನದಲ್ಲಿ ನಡೆಯಿತು.
ತಾಲೂಕಿನ ಏಕೈಕ ಮಠ ಹಾಗೂ ರಂಭಾಪುರಿ ಮಠದ ಶಾಖಾದ ಮಠವಾಗಿದ್ದ ತೆಂಕಲಗೋಡು ಮಠದಲ್ಲಿ ಕಳೆದ 40 ವರ್ಷಗಳಿಂದ ಪೀಠಾಧ್ಯಕ್ಷರಾಗಿದ್ದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ಮೂಲತ: ಹಾವೇರಿ ಜಿಲ್ಲೆ ಶಿಗ್ಗಾವ ತಾಲೂಕಿನ ಬಂಕಾಪುರ ಗ್ರಾಮದವರಾಗಿದ್ದು ಎಸ್.ಎಸ್.ಎಲ್.ಸಿ ವರೆಗೂ ಗ್ರಾಮದಲ್ಲೆ ಶಿಕ್ಷಣ ಮುಗಿಸಿದ ಶ್ರೀಗಳು ನಂತರ ಎಮ್.ಎ, ಎಮ್.ಎಡ್ ಫಿಲೋಸಫಿಯನ್ನು ಬೆಂಗಳೂರಿನಲ್ಲಿರುವ ರಂಭಾಪುರಿ ಮಠದ ಶಾಖಾಮಠದಲ್ಲಿದ್ದುಕೊಂಡು ಅಭ್ಯಸಿಸಿದರು. ಈ ಸಂಧರ್ಭದಲ್ಲಿ ಚನ್ನಮಲ್ಲಿಕಾರ್ಜುನ ಶ್ರೀಗಳ ಪಾಂಡಿತ್ಯವನ್ನು ಕಂಡು ತಾಲೂಕಿನ ಯಸಳೂರಿನ ಶಿವಾಚಾರ್ಯ ಸ್ವಾಮೀಜಿಗಳು ಮಠದ ಉತ್ತರಾಧಿಕಾರಿಗಳಾಗಲು ಆಹ್ವಾನಿಸಿದ್ದರು. ಈ ಹಿನ್ನಲೆಯಲ್ಲಿ ಕಳೆದ 40 ವರ್ಷಗಳ ಹಿಂದೆ ಪೀಠವನ್ನು ಅಲಂಕರಿಸಿದ ಸ್ವಾಮೀಜಿಗಳು ಏನು ಇಲ್ಲದ ಮಠವನ್ನು ಅಭಿವೃದ್ದಿಯ ಪಥಕ್ಕೆ ಕೊಂಡೊಯ್ದಿದಿದ್ದರು.
ಇದೀಗ ಅನಾರೋಗ್ಯದಿಂದ ಮೃತಪಟ್ಟ ಸ್ವಾಮೀಜಿಯ ಅಂತ್ಯ ಸಂಸ್ಕಾರ ವೀರಶೈವ ವಿಧಿವಿಧಾನದಂತೆ ಮಠದ ಪಕ್ಕದಲ್ಲೆ ಇದ್ದ ಈ ಹಿಂದಿನ ಇಬ್ಬರು ಪೀಠಾಧೀಶರ ಗದ್ದುಗೆ ಪಕ್ಕದಲ್ಲೆ ಸ್ವಾಮಿಜಿಗಳ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮಠದ ಮುಂದಿನ ಪೀಠಾಧಿಕಾರಿಯಾಗಿ ಸ್ವಾಮೀಜಿಯ ಕುಟುಂಬವರ್ಗದವರು ಆಗಬಾರದೆಂದು ಕೆಲವು ಸ್ಥಳೀಯರ ಬಯಕೆಯಾಗಿದ್ದು ಆದರೆ ಬಾಳೆಹೊನ್ನೂರಿನ ರಂಬಾಪುರಿ ಶ್ರೀಗಳು ಚನ್ನಮಲ್ಲಿಕಾರ್ಜುನ ಶ್ರೀಗಳ ಆಶಯದಂತೆ ಉಜ್ಜಯಿನಿ ಮಠದ ಶಾಖಾ ಮಠದ ಆದೇಶದಂತೆ ಅವರ ತಮ್ಮನ ಮಗ 28 ವರ್ಷ ವಯಸ್ಸಿನ ಪೂರ್ಣಚಂದ್ರ ದೇವರು ಪೀಠಾಧೀಶರಾಗಲಿದ್ದರೆ ಎಂದು ಹೇಳಿದ್ದರಿಂದ ಯಾವುದೆ ಗೊಂದಲವಿಲ್ಲದೆ ಮಠಕ್ಕೆ ಉತ್ತರಾಧಿಕಾರಿ ಆಯ್ಕೆಯಾಯಿತು.
ಸ್ವಾಮೀಜಿಗಳ ಗದ್ದುಗೆ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಚಾರ್ಯ ಸ್ವಾಮಿ, ಕಾಡಸಿದ್ದೇಶ್ವರ ಮಠ ನೊಣವಿನಕೆರೆ ಶಿವಾನುಭವ ಚರವರ್ಯ ಕರಿ ವೃಷಭ ದೇಶಿಕೇಂದ್ರ ಸ್ವಾಮೀಜಿಗಳು, ಯಡಿಯೂರಿನ ರೇಣುಕಾರಾಧ್ಯ ಸ್ವಾಮಿ,ಹಾಸನದ ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮಿ,ಕಾರ್ಜುವಳ್ಳಿ ಮಠದ ಶಂಭುಲಿಂಗ ಸ್ವಾಮಿಜಿ ,ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿಜಿಗಳು, ಕಲ್ಮಠದ ಮಹಾಂತ ಸ್ವಾಮಿಜಿ, ಚಿಕ್ಕಮಗಳೂರು ಶಾಂತದೇವರ ಮಠದ ಚಂದ್ರಶೇಖರ ಸ್ವಾಮೀಜಿಗಳು , ಮಾಜಿ ಸಚಿವ ಎ.ಮಂಜು, ಶಾಸಕ ಎಚ್.ಕೆ ಕುಮಾರಸ್ವಾಮಿ, ಬೇಲೂರು ಶಾಸಕ ಲಿಂಗೇಶ್, ಮಾಜಿ ಶಾಸಕ ಎಚ್.ಎಮ್ ವಿಶ್ವನಾಥ್ ಸೇರಿದಂತೆ ರಾಜ್ಯದ ಹಲವು ಮಠಾಧೀಶರು ,ಮಹಾನೀಯರು ಭಾಗವಹಿಸಿದ್ದರು.
16ಎಸ್.ಕೆ.ಪಿ.ಪಿ 1 ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮೃತಪಟ್ಟ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ತೆಂಕಲಗೋಡು ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆ ಕಾರ್ಯಕ್ರಮ ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ಪ್ರಸನ್ನ ರೇಣುಕಚಾರ್ಯ ಸ್ವಾಮಿ ಮಾರ್ಗದರ್ಶನದಲ್ಲಿ ನಡೆಯಿತು.
Tags
ಸಕಲೇಶಪುರ