ರಾಜ್ಯದಲ್ಲಿ ಆ.17 ರಿಂದ 24ರವರೆಗೆ ನಡೆಯುವ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ನಿಗಾವಹಿಸಿ ಪರೀಕ್ಷೆ ನಡೆಸಿರಿ ಎಂದು ಕೆ.ಪಿ.ಎಸ್.ಸಿ. ಕಾರ್ಯದರ್ಶಿ ಸತ್ಯವತಿ ಹೇಳಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ಪರೀಕ್ಷೆಗಳನ್ನು ನಡೆಸುವಾಗ ಅನುಸರಿಸಬೇಕಾದ ನಿಯಮಗಳ ಕುರಿತು ವಿಡಿಯೋ ಸಂವಾದದ ಮೂಲಕ ಪೂರ್ವಭಾವಿ ಸಿದ್ದತೆ ಬಗ್ಗೆ ಮಾತನಾಡಿದ ಅವರು ಪರೀಕ್ಷಾ ಕೇಂದ್ರಗಳಿರುವ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ, ಜಿಲ್ಲಾ ಖಜಾನಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಂಟಿ ಸಮಿತಿಯು ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಂಡು ಜಿಲ್ಲಾ ಖಜಾನೆಯಲ್ಲಿ ಸಿ.ಸಿ.ಟಿ.ವಿ. ಕಣ್ಗಾವಲಿನಲ್ಲಿರಿಸಬೇಕು ಎಂದರು.
ಕರ್ನಾಟಕ ರಾಜ್ಯ ಲೆಕ್ಕ ಪರಿಶೊಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ ಎ ವೃಂದದ ಸಹಾಯಕ ನಿಯಂತ್ರಕರ ಹುದ್ದೆಗಳ ಪರೀಕ್ಷೆಯು ಆ.17 ರಂದು, 2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳು ಆ.18 ರಿಂದ 20 ರವರೆಗೆ ಮತ್ತು ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆಯು ಆ.24 ರಂದು ನಡೆಯಲಿದೆ ಎಂದು ಕೆ.ಪಿ.ಎಸ್.ಸಿ. ಕಾರ್ಯದರ್ಶಿ ಸತ್ಯವತಿ ತಿಳಿಸಿದರು.
ಜಿಲ್ಲಾ ಖಜಾನೆಯಲ್ಲಿರಿಸಿದ ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಳ್ಳುವಾಗ ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆದೇ ತೆಗೆದುಕೊಳ್ಳುವಂತದ್ದು, ಖಜಾನೆಗೆ ಭೇಟಿ ನೀಡಿದ ಪ್ರತಿ ಸಂದರ್ಭದಲ್ಲೂ ಲಾಗ್ ಪುಸ್ತಕದಲ್ಲಿ ದಾಖಲು ಮಾಡಬೇಕು. ಪರೀಕ್ಷೆಯ ಕೊನೆಯ ದಿನ ಸಿ.ಸಿ.ಟಿ.ವಿ. ರೇಕಾರ್ಡ್, ಲಾಗ್ ಪುಸ್ತಕದಲ್ಲಿನ ದಾಖಲು ವರದಿಯನ್ನು ಲೋಕಸೇವಾ ಆಯೋಗಕ್ಕೆ ಸಲ್ಲಿಸತಕ್ಕದ್ದು ಎಂದರು.
ಇಲಾಖಾ ಪರೀಕ್ಷೆಗೆ ಆಯಾ ಜಿಲ್ಲೆಯ ಡಯಟ್ ಪ್ರಾಂಶುಪಾಲರನ್ನು ಮತ್ತು ಉಳಿದ ಪರೀಕ್ಷೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು ಎಂದು ಸತ್ಯವತಿ ಹೇಳಿದರು.
ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವುದು. ಕೊರೋನಾ ಸೋಂಕಿತರು ಮತ್ತು ಶಂಕಿತರು, ಪ್ರಾಥಮಿಕ ಹಂತದ ಸಂಪರ್ಕಿತರು, ಕಂಟೈನ್ ಮೆಂಟ್ ಜೋನ್ ಇಂದ ಬರುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್ ಮತ್ತಿತರರಿದ್ದರು.
Tags
ಹಾಸನ