ಹೇಮಾವತಿ ಜಲಾಶಯದಿಂದ ಖಾರೀಫ್ ಬೆಳೆಗೆ ನೀರು

ಹಾಸನ,ಆ.17( hassansime.in ):-  ಹೇಮಾವತಿ ಜಲಾಶಯದಿಂದ ಖಾರೀಫ್ ಬೆಳೆಗಳಿಗಾಗಿ ಹೇಮಾವತಿ ಬಲದಂಡೆ ನಾಲೆ, ಬಲಮೇದ್ದಂಡೆ ನಾಲೆಗೆ ಮತ್ತು ಎಡದಂಡೆ ನಾಲೆಗೆ ಡಿಸೆಂಬರ್ 31 ರವರೆಗೆ ನೀರು ಹರಿಬಿಡಲಾಗುವುದು ಎಂದು ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸೂಪರಿಂಟೆಂಡಿಂಗ್ ಇಂಜಿನಿಯರ್ ಹೆಚ್.ಎಸ್. ಜಯರಾಜು ಅವರು ತಿಳಿಸಿದ್ದಾರೆ.
ಹೇಮಾವತಿ ಎಡದಂಡೆ ನಾಲೆಯ ಪ್ರಾರಂಭದಿಂದ 212ನೇ ಕಿ.ಮೀ.ವರೆಗೆ 1 ರಿಂದ 72 ರ ವಿತರಣಾ ನಾಲೆವರೆಗೆ 78,915 ಅರೆಖುಷ್ಕಿ ಬೆಳೆಗಾಗಿ, ಹೇಮಾವತಿ ಬಲದಂಡೆ ನಾಲೆಯಿಂದ 91ನೇ ಕಿ.ಮೀ. ವರೆಗೆ 1 ರಿಂದ 57ರ ವಿತರಣಾ ನಾಲೆಗಳಿಂದ 2833 ಹೆಕ್ಟೇರ್ ಭತ್ತದ ಬೆಳೆಗೆ ಮತ್ತು 5261 ಹೆಕ್ಟೇರ್ ಅರೆಖುಷ್ಕಿಗೆ ಸೇರಿದಂತೆ ಒಟ್ಟು 8,094 ಹೆಕ್ಟೆರ್‍ಗೆ ಹಾಗೂ ಹೇಮಾವತಿ ಬಲಮೇಲ್ದಂಡೆ ನಾಲೆಯ ಪ್ರಾರಂಭದಿಂದ 97ನೇ ಕಿ.ಮೀ. ವರೆಗೆ 1 ರಿಂದ 41ರವರೆಗಿನ ವಿತರಣಾ ನಾಲೆಗಳ ಮೂಲಕ 2428 ಹೆಕ್ಟೇರ್ ಭತ್ತದ ಬೆಳೆಗೆ ಮತ್ತು 20,234 ಹೆಕ್ಟೆರ್ ಅರೆಖುಷ್ಕಿ ಬೆಳೆ ಸೇರಿದಂತೆ ಒಟ್ಟು 22,662 ಹೆಕ್ಟೇರ್ ಪ್ರದೇಶದ ಹರಿಬಿಡಲಾಗುವುದು.

 ಒಟ್ಟಾರೆಯಾಗಿ 5,261 ಹೆಕ್ಟೇರ್ ಭತ್ತದ ಬೆಳೆ, 1,04,410 ಹೆಕ್ಟೇರ್ ಅರೆ ಖುಷ್ಕಿ ಸೇರಿದಂತೆ ಒಟ್ಟು 1,09,671 ಹೆಕ್ಟೇರ್ ಪ್ರದೇಶಕ್ಕೆ ಹೇಮಾವತಿ ಬಲದಂಡೆ, ಬಲಮೇಲ್ದಂಡೆ ನಾಲೆ ಮತ್ತು ಎಡದಂಡೆ ನಾಲೆ ನೀರನ್ನು ಹರಿಬಿಡಲಾಗುತ್ತದೆ.
 ನಾಲೆಗಳ ವಿವರ: ಭತ್ತದ ಬೆಳೆಗೆ ಚಂಗರವಳ್ಳಿ ಕಾಲುವೆಯಿಂದ 328 ಹೆಕ್ಟೇರ್‍ಗೆ, ಶ್ರೀರಾಮದೇವರ ದಕ್ಷಿಣ ನಾಲೆಯಿಂದ 892 ಹೆಕ್ಟೇರ್‍ಗೆ, ಶ್ರೀರಾಮದೇವರ ಉತ್ತರ ನಾಲೆಯಿಂದ 3,830 ಹೆಕ್ಟೇರ್ ಪ್ರದೇಶಕ್ಕೆ, ಹೇಮಗಿರಿ ನಾಲೆಯಿಂದ 1,609 ಹೆಕ್ಟೇರ್‍ಗೆ, ಅಕ್ಕಿಹೆಬ್ಬಾಳು ನಾಲೆಯಿಂದ 150 ಹೆಕ್ಟೇರ್‍ಗೆ, ಮಂದಗೆರೆ ಎಡದಂಡೆ ನಾಲೆಯಿಂದ 1,938 ಹೆಕ್ಟೇರ್‍ಗೆ, ಮಂದಗೆರೆ ಬಲದಂಡೆ ನಾಲೆಯಿಂದ 4,706 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಬಿಡಲಾಗುತ್ತಿದೆ. ಒಟ್ಟಾರೆಯಾಗಿ 13,453 ಹೆಕ್ಟೇರ್ ಪ್ರದೇಶದ ಭತ್ತದ ಬೆಳೆಗಾಗಿ ಈ ಮೇಲಿನ ನಾಲೆಗಳ ಮೂಲಕ ಹೇಮಾವತಿ ಜಲಾಶಯದ ನೀರನ್ನು ಹರಿಸಲಾಗುತ್ತಿದೆ.

 ಸೂಚನೆಗಳು: ನೀರಿನ ನಿಯಂತ್ರಣವನ್ನು ಹೇಮಾವತಿ ಜಲಾಶಯದಲ್ಲಿ ಇರುವ ನೀರಿನ ಶೇಖರಣೆ ಮತ್ತು ಮಳೆಯನ್ನು ಆಧರಿಸಿ, ಜಲಾಶಯಕ್ಕೆ ಹರಿದು ಬರಬಹುದಾದ ಪರಿಮಾಣವನ್ನು ಅಂದಾಜು ಮಾಡಲಾಗಿದ್ದು, ಇಂತಹ ನಿಯಂತ್ರಣ ಪ್ರಾಕೃತಿಕ ಅಥವಾ ನೈಸರ್ಗಿಕ ವ್ಯತ್ಯಾಸದಿಂದ ನೀರಿನ ಕೊರತೆ ಉಂಟಾಗಿ ಬೆಳೆ ನಷ್ಟವಾದಲ್ಲಿ ಇಲಾಖೆಯವರು ಜವಾಬ್ದಾರರಲ್ಲ ಹಾಗೂ ರೈತ ಬಾಂಧವರಿಗೆ ಇದರಿಂದ ಯಾವ ಪರಿಹಾರ ಕೇಳುವ ಹಕ್ಕು ಇರುವುದಿಲ್ಲ.

 ನೀರಿನ ನಿಯಂತ್ರಣ ಸೌಲಭ್ಯವನ್ನು ರೈತರು ಕೃಷಿ ಅಧಿಕಾರಿಗಳ ಸಲಹೆ ಪಡೆದು ಸೂಕ್ತ ಬೆಳೆಗಳನ್ನು ಅಳವಡಿಸಿ ಸದುಪಯೋಗ ಪಡೆಯಬೇಕೆಂದು ಈ ಮೂಲಕ ತಿಳಿಸಲಾಗಿದೆ. ನೀರಾವರಿಗೆ ಸಂಬಂಧಪಟ್ಟ ವಿತರಣಾ ನಾಲಾವಾರು, ಗ್ರಾಮವಾರು, ಸರ್ವೇ ನಂಬರು ಮುಂತಾದ ಮಾಹಿತಿಗೆ ಸಂಬಂಧಿಸಿದಂತೆ ವಿಭಾಗ ಹಾಗೂ ಉಪ ವಿಭಾಗ ಕಚೇರಿಗಳಲ್ಲಿ ತಿಳಿಯಬಹುದು.

 ರೈತ ಬಾಂಧವರು ಪ್ರಕಟಣೆಯಲ್ಲಿ ತಿಳಿಸಿರುವಂತೆ ನಿಗದಿತ ಬೆಳೆಯನ್ನೇ ಬೆಳೆಯತಕ್ಕದ್ದು, ಪ್ರಕಟಣೆಗೆ ವಿರುದ್ದವಾಗಿ ಬೇರೆ ಬೆಳೆ ಬೆಳೆದರೇ ನೀರಾವರಿ ಕಾಯ್ದೆಯ ಸೆಕ್ಷನ್ 32: 4ಬಿ ಪ್ರಕಾರ ದಂಡ ಕರವನ್ನು ವಿಧಿಸಲಾಗುವುದು ಹಾಗೂ ಆಗಬಹುದಾದ ನೀರಿನ ಕೊರತೆ ಮತ್ತು ಬೆಳೆ ನಷ್ಟಕ್ಕೆ ರೈತರೇ ಜವಾಬ್ದಾರರಾಗುತ್ತಾರೆ.

ನೀರನ್ನು ನಿಲ್ಲಿಸುವ ಅವಧಿಯನ್ನು ಯಾವುದೇ ಸಂದರ್ಭದಲ್ಲಿ ಅಥವಾ ಯಾವುದೇ ಕಾರಣಗಳಿಗಾಗಿಯೂ ಮುಂದುವರೆಸಲಾಗುವುದಿಲ್ಲ ಎಂದು ಹೆಚ್.ಎಸ್. ಜಯರಾಜು ಅವರು ತಿಳಿಸಿರುತ್ತಾರೆ.

Post a Comment

Previous Post Next Post