ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗಾಗಿ ಅರಸೀಕೆರೆಯಲ್ಲಿ ನಿರ್ಮಿಸಿರುವ ವಸತಿಗೃಹಗಳು ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡಿದ್ದು, ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಚೆನ್ನಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಹೇಳಿದ್ದಾರೆ.
ಅರಸೀಕೆರೆ ಪಟ್ಟಣದಲ್ಲಿ ಇಂದು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗಾಗಿ ನಿರ್ಮಿಸಲಾಗಿರುವ ನೂತನ ವಸತಿ ಗೃಹಗಳ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ, ವಸತಿ ಗೃಹಗಳ ವೀಕ್ಷಣೆ ಮಾಡಿದ ಅವರು ಒಂದು ಕುಟುಂಬ ವಾಸಿಸಲು ಅಗತ್ಯವಿರುವ ಎಲ್ಲಾ ರೀತಿಯ ಸೌಕರ್ಯಗಳನ್ನು ವಸತಿ ಗೃಹಗಳಲ್ಲಿ ಉತ್ತಮವಾಗಿ ನಿರ್ಮಿಸಲಾಗಿದೆ ಎಂದರಲ್ಲದೆ, ವಸತಿ ಗೃಹಗಳಲ್ಲಿ ವಾಸಿಸುವ ಎಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಶುಭಕೋರಿದರು.
ತಾಲ್ಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಅದರ ಜೊತೆಗೆ ಎತ್ತಿನ ಹೊಳೆ ಯೋಜನೆಯಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ನೀರಾವರಿ ಸಚಿವರೊಡನೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿರುವುದರಿಂದ ಸೋಂಕು ಹರಡುವುದನ್ನು ನಿಯಂತ್ರಿಸಲು ರ್ಯಾಪಿಡ್ ಟೆಸ್ಟ್‍ಗಳನ್ನು ಹೆಚ್ಚಾಗಿ ಮಾಡಲು ಈಗಾಗಲೇ ಸೂಚಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಭವೃದ್ಧಿಗಾಗಿ ಎಲ್ಲಾ ರೀತಿಯ ಸಹಕಾರ ಹಾಗೂ ಪ್ರಯತ್ನ ಮಾಡುವುದಾಗಿ ಸಚಿವರು ತಿಳಿಸಿದರು.
ವಿಧಾನ ಪರಿಷತ್ ಸಂಸದರಾದ ಎಂ.ಎ ಗೋಪಾಲಸ್ವಾಮಿ ಅವರು ಮಾತನಾಡಿ ವಸತಿಗೃಹಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದು, ವಾಸ್ತುಪ್ರಕಾರವೂ ಸಹ ಬಹಳ ಅತ್ಯುತ್ತಮವಾಗಿ ನಿರ್ಮಿಸಲಾಗಿದೆ ಎಂದರಲ್ಲದೆ, ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ರೈತರ ಏಳಿಗೆಗೂ ಸಹ ಹೆಚ್ಚು ಆಧ್ಯತೆಯನ್ನು ನೀಡುತ್ತಿದ್ದಾರೆ ಎಂದರು.
ಶಾಸಕರಾದ ಕೆ.ಎಂ ಶಿವಲಿಂಗೇಗೌಡ ಅವರು ಮಾತನಾಡಿ ತಾಲ್ಲೂಕಿನಲ್ಲಿ ಯಾವುದೇ ಕಾರ್ಯಗಳಿದ್ದರೂ ಅವುಗಳನ್ನು ಕಾರ್ಯಗತಕ್ಕೆ ತರಲು ನಾನು ಸದಾ ಸಿದ್ಧನಾಗಿರುತ್ತೇನೆ ಎಂದರಲ್ಲದೆ, ಸಧ್ಯ ಎತ್ತಿನ ಹೊಳೆ ಯೋಜನೆಯು ಸ್ಥಗಿತಗೊಂಡಿದ್ದು ಆದಷ್ಟು ಬೇಗ ಅದಕ್ಕೆ ಚಾಲ್ತಿ ನೀಡಬೇಕು. ಇದರಿಂದ ಅರಸೀಕೆರೆ ತಾಲ್ಲೂಕು ಸೇರಿದಂತೆ ವಿವಿಧ ತಾಲ್ಲೂಕುಗಳಿಗೆ ಎತ್ತಿನಹೊಳೆ ಯೋಜನೆ ನೆರವಾಗಲಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ಅರಸೀಕೆರೆ ತಾಲ್ಲೂಕು ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇತರೆ ತಾಲ್ಲೂಕುಗಳಿಗೆ ಮಾದರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸಚಿವರೂ ಕೂಡ ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದು, ಮುಂದೆಯೂ ಸಹ ತಾಲ್ಲೂಕಿನ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಸಂಪೂರ್ಣ ಸಹಕಾರವನ್ನು ನೀಡಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೂಪ ಗುರುಮೂರ್ತಿ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Tags
ಅರಸೀಕೆರೆ