ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್​ಗೆ 157 ರನ್​ಗಳ ಗುರಿ ನೀಡಿದೆ.

ದುಬೈನಲ್ಲಿ ನಡೆಯುತ್ತಿರುವ 13ನೇ ಸೀಸನ್ ಐಪಿಎಲ್​ನ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್​ಗೆ 157 ರನ್​ಗಳ ಗುರಿ ನೀಡಿದೆ. ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಡೆಲ್ಲಿ ಆರಂಭ ಉತ್ತಮವಾಗಿರಲಿಲ್ಲ. ಪಂದ್ಯದ ಎರಡನೇ ಓವರ್​ನಲ್ಲೇ ಶಿಖರ್ ಧವನ್ ಶೂನ್ಯಕ್ಕೆ ರನೌಟ್ ಆಗುವ ಮೂಲಕ ಹೊರ ನಡೆದರು. ಇದರ ಬೆನ್ನಲ್ಲೇ ಶಮಿ ಅವರ 4ನೇ ಓವರ್​ನಲ್ಲಿ ಪೃಥ್ವಿ ಶಾ (5) ಜೋರ್ಡನ್​ಗೆ ಕ್ಯಾಚ್ ನೀಡಿ ಮರಳಿದರು.

ಆರಂಭಿಕರ ಪೆವಿಲಿಯನ್ ಪರೇಡ್ ಬೆನ್ನಲ್ಲೇ 7 ರನ್ ಗಳಿಸಿ ಹೆಟ್ಮೆಯರ್ ಸಹ ಶಮಿಗೆ ವಿಕೆಟ್ ಒಪ್ಪಿಸಿದರು. 13 ರನ್​ಗೆ ಮೂರು ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಆಸೆಯಾದರು. ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಉಭಯರು ನಿಧಾನಕ್ಕೆ ರನ್​ ಕದಿಯುತ್ತಾ ತಂಡದ ಮೊತ್ತ ಹೆಚ್ಚಿಸಿದರು.


50 ಎಸೆತಗಳಲ್ಲಿ 50 ರನ್​ಗಳ ಜೊತೆಯಾಟವಾಡಿದ ಅಯ್ಯರ್ ಬಿರುಸಿನ ಆಟದತ್ತ ಮುಖ ಮಾಡಿದರು. ಆದರೆ ಮತ್ತೊಂದು ಬದಿಯಲ್ಲಿ 29 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 31 ರನ್ ಬಾರಿಸಿದ್ದ ಪಂತ್ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು. ಈ ವಿಕೆಟ್ ಪಡೆಯುವುದರೊಂದಿಗೆಯುವ ಸ್ಪಿನ್ನರ್ ರವಿ ಬಿಷ್ಣೋಯ್ ಐಪಿಎಲ್​ನಲ್ಲಿ ವಿಕೆಟ್ ಖಾತೆ ತೆರೆದರು. 4ನೇ ವಿಕೆಟ್ ಉರುಳಿದ ಬೆನ್ನಲ್ಲೇ 15ನೇ ಓವರ್​​ ಎಸೆಯಲು ಮತ್ತೆ ಮರಳಿದ ಮೊಹಮ್ಮದ್ ಶಮಿ ಮೊದಲ ಎಸೆತದಲ್ಲಿ ಶ್ರೇಯಸ್ ಅಯ್ಯರ್ (39) ವಿಕೆಟ್ ಪಡೆಯುವುದರೊಂದಿಗೆ ಪಂಜಾಬ್ ತಂಡಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟರು. 4 ಓವರ್ ಬೌಲಿಂಗ್ ಮಾಡಿದ ಶಮಿ ಕೇವಲ 15 ರನ್ ನೀಡಿ 3 ವಿಕೆಟ್ ಪಡೆಯುವುದರೊಂದಿಗೆ ತಮ್ಮ ಕೋಟಾ ಮುಗಿಸಿದರು.

17ನೇ ಓವರ್​ನಲ್ಲಿ ಕಾಟ್ರೆಲ್​ ಎಸೆತದಲ್ಲಿ ಅಕ್ಷರ್ ಪಟೇಲ್ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂಜಾಬ್ ಬೌಲಿಂಗ್ ಮುಂದೆ ರನ್​ಗಾಗಿ ಪರದಾಡಿದ ಡೆಲ್ಲಿ ಬ್ಯಾಟ್ಸ್​ಮನ್​ಗಳು 17 ಓವರ್​ನಲ್ಲಿ 100 ರನ್ ಕಲೆ ಹಾಕಿತು. 19ನೇ ಓವರ್​ನಲ್ಲಿ ಅಶ್ವಿನ್ ಅವರ ವಿಕೆಟ್ ಪಡೆದು ಸೆಲ್ಯೂಟ್ ಹೊಡೆದು ಶೆಲ್ಡನ್ ಕಾಟ್ರೆಲ್ ಸಂಭ್ರಮಿಸಿದರು.


ಕೊನೆಯ ಮೂರು ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಮಾರ್ಕಸ್ ಸ್ಟೊಯಿನಿಸ್ ಸಿಕ್ಸ್ ಫೋರ್​ಗಳ ಸುರಿಮಳೆ ಸುರಿಸಿದರು. 21 ಎಸೆತಗಳನ್ನು ಎದುರಿಸಿದ ಸ್ಟೊಯಿನಿಸ್ 7 ಬೌಂಡರಿ 3 ಭರ್ಜರಿ ಸಿಕ್ಸರ್​ನೊಂದಿಗೆ 53 ರನ್ ಸಿಡಿಸಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 157 ರನ್ ಪೇರಿಸಿತು,

ಉಭಯ ತಂಡಗಳು ಇಂತಿವೆ:

ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ಸಿ), ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ಗ್ಲೆನ್ ಮ್ಯಾಕ್ಸ್ ವೆಲ್, ನಿಕೋಲಸ್ ಪೂರನ್ , ಕೃಷ್ಣಪ್ಪ ಗೌತಮ್, ಕ್ರಿಸ್ ಜೋರ್ಡಾನ್, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ

ದೆಹಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ಸಿ), ರಿಷಭ್ ಪಂತ್ , ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಅನ್ರಿಕ್ ನಾರ್ಟ್ಜೆ, ಮೋಹಿತ್ ಶರ್ಮಾ

Post a Comment

Previous Post Next Post