– ನಾನು ಹೇಳಿದ ಸ್ಥಳಕ್ಕೆ ಬಂದ್ರೆ ಮಾತ್ರ ವೇತನ
ಗ್ರಾಮ ಸಹಾಯಕಿಯೊಬ್ಬರು ಜಿಲ್ಲೆಯ ಭದ್ರಾವತಿ ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಸಂಬಳ ಕೇಳಿದರೆ ತಹಶೀಲ್ದಾರ್ ಮಂಚಕ್ಕೆ ಕರೆಯುತ್ತಾನೆ ಎಂಬ ಆರೋಪ ಕೇಳಿ ಬಂದಿದೆ.
ಭದ್ರಾವತಿ ತಹಶೀಲ್ದಾರ್ ಎಚ್.ಸಿ.ಶಿವಕುಮಾರ್ ವಿರುದ್ಧ ಗ್ರಾಮ ಸಹಾಯಕಿಯೊಬ್ಬರು ಈ ರೀತಿ ಆರೋಪ ಮಾಡಿದ್ದಾರೆ. ಅಲ್ಲದೇ ಆರೋಪ ಕೇಳಿ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಹಶೀಲ್ದಾರ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
ಭದ್ರಾವತಿಯ ಸಿದ್ದಾಪುರ ಗ್ರಾಮ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆ ಸಂಬಳ ನೀಡುವಂತೆ ತಹಶೀಲ್ದಾರ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ತನ್ನೊಂದಿಗೆ ಸಹಕರಿಸಿದರೆ ಮಾತ್ರ ಸಂಬಳ ಮಾಡಿಕೊಡುವುದಾಗಿ ತಹಶೀಲ್ದಾರ್ ಹೇಳಿರುವುದಾಗಿ ನೊಂದ ಮಹಿಳೆ ಆರೋಪಿಸಿದ್ದಾರೆ.
ನಡೆದಿದ್ದೇನು?
ಮಹಿಳೆ ಪತಿ ಕೂಡ ಇದೇ ಗ್ರಾಮದಲ್ಲಿ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಅನಾರೋಗ್ಯದ ಕಾರಣ ಸಂತ್ರಸ್ತೆಯ ಅಕ್ಕ ಆರಂಭದಲ್ಲಿ ಐದಾರು ತಿಂಗಳು ಕೆಲಸ ಮಾಡಿದರು. ಇದಾದ ಬಳಿಕ ಚೇತರಿಸಿಕೊಂಡ ಅವಿನಾಶ್ ಪುನಃ ಕೆಲಸಕ್ಕೆ ವಾಪಸ್ ಆಗಿದ್ದರು. ಆದರೆ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕಾರಣ ಕಳೆದ ಐದು ತಿಂಗಳಿನಿಂದ ಮಹಿಳೆ ಕೆಲಸ ಮಾಡುತ್ತಿದ್ದರು.
ಈ ವೇಳೆ ನೊಂದ ಮಹಿಳೆಗೆ ಐದಾರು ತಿಂಗಳಿನಿಂದ ವೇತನ ಬಂದಿರಲಿಲ್ಲ. ಈ ಬಗ್ಗೆ ತಹಶೀಲ್ದಾರ್ ಅವರ ಬಳಿ ಮಹಿಳೆ ವೇತನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ತಹಶೀಲ್ದಾರ್ ನನ್ನ ಜೊತೆ ಸಹಕರಿಸಿದರೆ, ನಾನು ಹೇಳಿದ ಸ್ಥಳಕ್ಕೆ ಬಂದರೆ ವೇತನ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ಎಂದು ಮಹಿಳೆ ಆರೋಪಿಸಿದ್ದು, ಈ ಬಗ್ಗೆ ತಹಶೀಲ್ದಾರ್ ವಿರುದ್ಧ ಹಳೆನಗರ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.
ತಹಶೀಲ್ದಾರ್ ಶಿವಕುಮಾರ್ ವಿರುದ್ಧ ಠಾಣೆಯಲ್ಲಿ ಎಫ್‍ಐಆರ್ ದಾಖಲು ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಹಶೀಲ್ದಾರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ ತಹಶೀಲ್ದಾರ್ ಶಿವಕುಮಾರ್‌ನನ್ನು ಕೇವಲ ಕರ್ತವ್ಯದಿಂದ ಮಾತ್ರವಲ್ಲದೇ, ಕೆಲಸದಿಂದಲೇ ಅಮಾನತು ಮಾಡಿ, ಶೀಘ್ರವೇ ಬಂಧನ ಮಾಡುವಂತೆ ದಲಿತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.