ಮರಸು ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಪುನಃ ಆರಂಭ ಗ್ರಾಮಸ್ಥರ ಒತ್ತಡ

ಆಲೂರು :  ಪಟ್ಟಣ ಸಮೀಪದ ಮರಸು ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದ ಕಾರಣದಿಂದ ಒಂದು ವರ್ಷದ ಹಿಂದೆ ಮುಚ್ಚಿದ್ದ  ಸರಕಾರಿ ಪ್ರಾಥಮಿಕ ಶಾಲೆಯನ್ನು ಮರಳಿ ತೆರೆಸಲು ಗ್ರಾಮಸ್ಥರು ಉತ್ಸುಕರಾಗಿದ್ದು ಶಾಲೆಯನ್ನು ತೆರೆಯುವಂತೆ ಕೋರಿ  ಇಂದು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುಮಾರು 40 ವರ್ಷಗಳಿಂದ 1 ನೇ ತರಗತಿಯಿಂದ 6 ನೇ ತರಗತಿಯವರೆಗೆ ನಡೆಯುತ್ತಿದ್ದ ಶಾಲೆಯನ್ನು ಮಕ್ಕಳಿಲ್ಲದ ಕಾರಣ ಮುಚ್ಚಲಾಗಿತ್ತು.150 ಕ್ಕಿಂತ   ಹೆಚ್ಚು ಮನೆಗಳಿರುವ ಈ ಗ್ರಾಮದಲ್ಲಿ 30 ಕ್ಕೂ ಹೆಚ್ಚು ಮಕ್ಕಳು 1 ರಿಂದ 6 ನೇ  ತರಗತಿವರೆಗೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಆದರೆ  ವರ್ಷದ ಹಿಂದೆ ಖಾಸಗಿ ಶಾಲೆಗಳ ಲಾಬಿಯಿಂದ  ಮತ್ತು ಆಂಗ್ಲ ಮಾಧ್ಯಮದ ಸೆಳೆತ ವ್ಯಾಮೋಹದಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದರು . ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಮತ್ತು  ಕರೋನಾ ದಿಂದಾಗಿ ಯಾವುದೇ ಆದಾಯ ಮೂಲವಿಲ್ಲದೇ  ಅವಶ್ಯಕತೆಗಿಂತ ಹೆಚ್ಚು ಖರ್ಚು ಆಗುತ್ತಿರುವುದನ್ನು ಮನಗೊಂಡು ಬೇಸತ್ತಿರುವ ಪೋಷಕರು  ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆ ಜಾರಿಗೊಂಡು ಪಾಠ ಪ್ರವಚನ ನಡೆಸುತ್ತಿರುವುದನ್ನು ಕಂಡು ಈ ಸಾಲಿನಿಂದ  ತಮ್ಮ ಮಕ್ಕಳು ಗಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಉತ್ಸುಕರಾಗಿದ್ದಾರೆ.
ಮನೆ ಮನೆ ಭೇಟಿ :
ಮೊದಲಿನಿಂದಲೂ ಗ್ರಾಮದಲ್ಲಿನ ಸರ್ಕಾರಿ   ಶಾಲೆಯ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಗ್ರಾಮದ ಮೋಹನ್, ಎಚ್.ಕೆ. ರಂಗನಾಥ್,   ಪತ್ರಕರ್ತ ಪೃಥ್ವಿ ಜಯರಾಮ್, ಎಚ್.ಎಲ್ ರಂಗಸ್ವಾಮಿ ಸೇರಿದಂತೆ ಯುವಕರು  ಈ ಬಾರಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಗ್ರಾಮದ ಸರ್ಕಾರಿ ಶಾಲೆಗೆ ಸೇರಿಸುವಂತೆ ಪ್ರೇರೇಪಿಸಿ ಪೋಷಕರನ್ನು ಮನವೊಲಿಸಿ ಈ ಶೈಕ್ಷಣಿಕ ವರ್ಷದಿಂದ 15 ಮಕ್ಕಳನ್ನು ಪೋಷಕರು ಶಾಲೆಗೆ ಸೇರಿಸಲು ತಯಾರಾಗಿದ್ದಾರೆ ಮತ್ತು ಇಲಾಖೆಯ ಅನುಮತಿಗೆ ಎದುರು ನೋಡುತ್ತಿದ್ದಾರೆ.
ಶಾಲೆ ಪುನರಾರಂಭಕ್ಕೆ ಅನುಮತಿ :
ಶಾಲೆ ಪುನರಾರಂಭದ ಬಗ್ಗೆ  ಗ್ರಾಮಸ್ಥರ ಮನವಿ ಸ್ವೀಕರಿಸಿದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ ಮಾತನಾಡಿ,  ಶೀಘ್ರ ಮರಸು ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಉತ್ತಮ ಶಿಕ್ಷಕರನ್ನು ನೇಮಕ ಮಾಡಿ ಶಾಲೆ ಪುನರಾರಂಭಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು.

Post a Comment

Previous Post Next Post