ಜನಪ್ರತಿನಿಧಿಗಳಂತೆ ಜನಸಾಮಾನ್ಯರನ್ನು ಗೌರವದಿಂದ ನಡೆಸಿಕೊಂಡು ಅವರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ ಅವರು ತಿಳಿಸಿದ್ದಾರೆ.
ಚನ್ನರಾಯಪಟ್ಟಣ ಪ್ರಾಥಮಿಕ ಶಾಲಾ ಆವರಣದಲ್ಲಿ 2148 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು ಎಲ್ಲಾ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ತಾಲ್ಲೂಕು ಕೇಂದ್ರಗಳಲ್ಲಿ ಇದ್ದು ಅಲ್ಲಿನ ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಪರಿಹರಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಹಾಗೂ ಲಾಕ್ ಡೌನ್ ನಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿತ್ತು. ಇದೀಗ 21.48 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ದೊರೆತಿರುವುದು ಒಳ್ಳೆಯ ಸೂಚನೆಯಾಗಿದೆ ಎಂದು ಸಚಿವರಾದ ಕೆ.ಗೋಪಾಲಯ್ಯ ಹೇಳಿದರು.
ಕೋವಿಡ್-19 ವಿರುದ್ಧ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮತ್ತು ಪ್ರತಿಯೊಂದು ಇಲಾಖೆಯ ಅಧಿಕಾರಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಶ್ರಮವನ್ನು ಶ್ಲಾಘಿಸಿದ ಸಚಿವರು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಪರಿಶ್ರಮವಹಿಸಿ ಕೊರೊನಾ ಸೋಂಕು ತಡೆಗಟ್ಟಬೇಕಿದೆ ಎಂದರು.
ಕೊಬ್ಬರಿ ಬೆಲೆ ಕುಸಿತವಾಗಿದೆ. ರಾಜ್ಯ ಸರ್ಕಾರದಿಂದ ಪ್ರತಿ ಕ್ವಿಂಟಾಲ್ ಗೆ 1000ರೂ. ಬೆಂಬಲ ಬೆಲೆ ಒದಗಿಸಲಾಗಿದೆ.ಅದೇ ರೀತಿ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಸಚಿವರು ಹೇಳಿದರು.
ಸೆ.20 ರೊಳಗೆ ಜಲಸಂಪನ್ಮೂಲ ಸಚಿವರನ್ನು ಜಿಲ್ಲೆಗೆ ಕರೆತಂದು ಬಾಕಿ ಇರುವ ಕಾಮಗಾರಿಗಳ ಹಾಗೂ ಭೂಸ್ವಾಧಿನಗೊಂಡ ರೈತರಿಗೆ ಪರಿಹಾರ ವಿತರಣೆ ಬಗ್ಗೆ ಘೋಷಣೆ ಮಾಡಿಸುವುದಾಗಿ ಸಚಿವರು ಹೇಳಿದರು.
ಪ್ರಕೃತಿ ವಿಕೋಪದಲ್ಲಿ ಹಾನಿಗೀಡಾಗಿರುವ ಮನೆ ಹಾಗೂ ಬೆಳೆಹಾನಿಗೆ ಸರ್ಕಾರ ಪರಿಹಾರ ಒದಗಿಸಲಿದ್ದು, ಶಾಲೆ, ಅಂಗನವಾಡಿ, ರಸ್ತೆ ದುರಸ್ತಿಗಳಿಗೆ ಕ್ರಮ ವಹಿಸಲಾಗುವುದು ಎಂದರು.
ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ ನಿರಂತರ ಕೋವಿಡ್-19 ಸುದ್ದಿಗಳ ನಡುವೆ ಬಹುದಿನಗಳಿಂದ ಮುಂದೂಡುತ್ತಲೇ ಬಂದ 17 ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಚಾಲನೆ ದೊರೆತಿರುವುದು ಸಂತಸದ ವಿಚಾರ ಎಂದರು.
ತಾಲೂಕಿನಲ್ಲಿ ಅನೇಕ ಶೈಕ್ಷಣಿಕ ಅಭಿವೃದ್ಧಿ ಕಾಮಗಾರಿಗಳ ನೀರಾವರಿ ಹಾಗೂ ಇಂಧನ ಇಲಾಖೆ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಸಚಿವರಾದ ಗೋವಿಂದ ಕಾರಜೋಳ, ಜೆ.ಮಾಧುಸ್ವಾಮಿ ಹಾಗೂ ಕೆ.ಗೋಪಾಲಯ್ಯ ಅವರು ಬಹಳ ಸಹಕಾರ ನೀಡಿದ್ದು,ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸಗಳು ಪ್ರಾರಂಭವಾಗಬೇಕಿದೆ ಎಂದರು.
ಬಾಕಿ ಇರುವ ನೀರಾವರಿ ಯೋಜನೆಗಳ ಅನುದಾನ ಹಾಗೂ ಪರಿಹಾರ ಧನ ವಿತರಣೆಯಾಗಬೇಕು. ಏತ ನೀರಾವರಿ ಯೋಜನೆಗಳ ಫಲ ಶೀಘ್ರವೇ ರೈತರಿಗೆ ತಲುಪಬೇಕು ಎಂದು ಶಾಸಕರು ಹೇಳಿದರು.
ಮುಂದಿನ ಬಜೆಟ್ ನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸುವಂತೆ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರಲ್ಲದೆ, ಈವರೆಗೆ ಸಚಿವರು ನೀಡಿರುವ ಸಹಕಾರಕ್ಕೆ ಕೃತಜ್ಞತೆ ಸಮರ್ಪಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ ಅವರು ಮಾತನಾಡಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದು, ಸೆ.30 ರೊಳಗೆ ಪ್ರಾರಂಭಿಸುವ ಭರವಸೆ ನೀಡಿದ್ದಾರೆ ಸಚಿವರು ಈ ಬಗ್ಗೆ ಗಮನಿಸಿ ಕಬ್ಬು ಬೆಳೆಗಾರರ ಹಿತ ಸಂರಕ್ಷಿಸಬೇಕು ಎಂದರು.
ನುಗ್ಗೇಹಳ್ಳಿ ಏತ ನೀರಾವರಿ ಯೋಜನೆಯಲ್ಲಿ ಭೂಸ್ವಾಧೀನ ಗೊಂಡ ರೈತರಿಗೆ ಬರಬೇಕಾದ 6 ಕೋಟಿ ರೂ. ಸೇರಿದಂತೆ ವಿವಿಧ ನೀರಾವರಿ ಯೋಜನೆ ಗಳ ಪರಿಹಾರ ಹಣ ಶೀಘ್ರ ಬಿಡುಗಡೆಯಾಗಬೇಕು ಎಂದು ಅವರು ಹೇಳಿದರು.
ಜನಪ್ರತಿನಿಧಿಗಳ ಶಿಷ್ಟಾಚಾರದ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಎಂ.ಎ. ಗೋಪಾಲಸ್ವಾಮಿ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಉಪ ವಿಭಾಗಧಿಕಾರಿ ಡಾ||ನವೀನ್ ಭಟ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶಾಮಲಾ ಉದಯಕುಮಾರ್, ಉಪಾಧ್ಯಕ್ಷರಾದ ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ರಮೇಶ್, ಶ್ವೇತಾ ಆನಂದ್, ಶಿವಸ್ವಾಮಿ, ರತ್ನಮ್ಮ, ದೇವಮ್ಮ, ಡಿ.ವೈ.ಎಸ್.ಪಿ. ಲಕ್ಷ್ಮಣಗೌಡ, ತಹಶೀಲ್ದಾರ್ ಮಾರುತಿ ಮತ್ತಿತರರು ಉಪಸ್ಥಿತರಿದ್ದರು.
Tags
ಚನ್ನರಾಯಪಟ್ಟಣ