ಕೈಮಗ್ಗ ಮತ್ತು ಜವಳಿ ಉದ್ಯಮ ನಡೆಸುತ್ತಿರುವವರಿಗೆ ಸಹಾಯವಾಗುವಂತೆ ಹೊಸ ಹೊಸ ಯೋಜನೆಗಳ ಕುರಿತು ಅರಿವು ಮೂಡಿಸಿ ಪೂರಕ ಸಾಲ ಸೌಲಭ್ಯ ಒದಗಿಸುವಂತೆ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮಂತ ಬಾಬಾ ಸಾಹೇಬ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿನ ಸಿದ್ದ ಉಡುಪು ತರಬೇತಿ ಕೇಂದ್ರಗಳಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಸಿದ್ದ ಉಡುಪು ತಯಾರಿಕೆಯಲ್ಲಿ ತರಬೇತಿ ನೀಡಿ ಜೀವನಾಧಾರಕ್ಕೆ ವ್ಯವಸ್ಥೆ ಕಲ್ಪಿಸಿ ಎಂದರು.
ಕೈಮಗ್ಗ ಮತ್ತು ಜವಳಿ ಉದ್ಯಮದಿಂದ ಈಗಾಗಲೇ ನಷ್ಟ ಅನುಭವಿಸಿ ಕಂಪನಿ ಮುಚ್ಚಿರುವವರಿಗೆ ಪೂರ್ಣ ಪ್ರಮಾಣದ ಸಹಕಾರ ಮತ್ತು ಸಾಲ ಸೌಲಭ್ಯ ನೀಡಿ ಉದ್ಯಮಿದಾರರು ಮರಳಿ ಪ್ರಾರಂಭಿಸುವಂತೆ ಅರಿವು ಮೂಡಿಸಿ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸುವ ವ್ಯವಸ್ಥೆ ಮಾಡಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗಂಗಾ ಕಲ್ಯಾಣ ಯೋಜನೆಯಿಂದ ಬೋರ್‍ವೆಲ್ ಪಡೆದ ರೈತರ ಜಮೀನಿಗೆ ಭೆಟಿ ನೀಡಿ ಯಾವ ಬೆಳೆ ಬೆಳೆಯುತ್ತಿದ್ದಾರೆ, ಅದರಿಂದ ರೈತರಿಗೆ ಸಹಾಯವಾಗಿದೆಯೇ, ಎಷ್ಟು ಆದಾಯ ಪಡೆಯುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಫೋಟೋ ತೆಗೆದು ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರಾದ ಶ್ರೀಮಂತ ಬಾಬಾ ಸಾಹೇಬ ಪಾಟೀಲ ಅವರು ನಿರ್ದೇಶಿಸಿದರು.
ಗಂಗಾ ಕಲ್ಯಾಣ ಇಲಾಖೆಯಡಿ ನೀಡಿರುವ ಕೊಳವೆಬಾವಿಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ಸರ್ಕಾರದ ಆದೇಶದ ಅನುಗುಣವಾಗಿ ವಿದ್ಯುತ್ ಕಂಬಗಳ ವ್ಯವಸ್ಥೆ ಮಾಡಿ ರೈತರಿಗೆ ಅನುವು ಮಾಡಿ ಎಂದರಲ್ಲದೇ, ಬಾಕಿ ಇರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಶೀಘ್ರವಾಗಿ ನೀಡುವಂತೆ ಚೆಸ್ಕಂ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದರಲ್ಲದೇ, ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ ಯಾವುದೇ ಲೋಪ ದೋಷಗಳಾಗದಂತೆ ನಿಗಾವಹಿಸಿ ಎಂದು ಸಚಿವರುಕರ್ನಾಟಕ ಗೃಹ ಮಂಡಳಿಯ ಎ.ಇ.ಇ. ಅವರಿಗೆ ಸೂಚಿಸಿದರು.
ಕಳೆದಬಾರಿ ಜಿಲ್ಲೆಯಲ್ಲಿನ ಬಾಲಕ ಹಾಗೂ ಬಾಲಕಿಯರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೂರ್ಣ ಪ್ರಮಾಣದ ಪ್ರವೇಶಾತಿ ಆಗಿಲ್ಲ ಹಾಗಾಗಿ ಹೆಚ್ಚಿನ ಪ್ರಚಾರ ಮಾಡುವ ಮೂಲಕ ಮತ್ತು ಅರಿವು ಮೂಡಿಸುವ ಮೂಲಕ ನಿಗದಿತ ಸೀಟುಗಳು ಪ್ರವೇಶಾತಿ ಮೂಲಕ ಭರ್ತಿಯಾಗುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಬಾರಿ ಪ್ರತಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶೇ. 100 ರಷ್ಟು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿಕೊಳ್ಳಲು ಕ್ರಮವಹಿಸುವುದರ ಜೊತೆಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯು ಅನುತ್ತೀರ್ಣರಾಗದಂತೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡಿ ಶೇ. 100 ರಷ್ಟು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶ್ರಮಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಧರ್ ನಾಯಕ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಮೆಹಬೂಬ್ ಪಾಷಾ, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜೀನೇಂದ್ರ, ಸಚಿವರ ಆಪ್ತ ಕಾರ್ಯದರ್ಶಿ ವಿಜಯ್ ಕುಮಾರ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಲಿಂಗಪ್ಪ ಎನ್. ಕುಂಬಾರ್, ಹಾಗೂ ಮತ್ತಿತರರು ಹಾಜರಿದ್ದರು.
Tags
ಹಾಸನ