ಹಾಸನ: ಅನ್ನದಾತ ರೈತರಿಗೆ ದ್ರೋಹ ಮಾಡಿ, ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿರುವ ತಪ್ಪಿಕಸ್ತರಿಗೆ ಶಿಕ್ಷೆ ನೀಡಿದ್ದಿದರೇ ಬೀದಿಗಿಳಿದು ಹೋರಾಟ ಮಾಡುವುದಾಗಿ ಹಾಸನ ಜಿಲ್ಲಾ ಹಿರಿಯ ನಾಗರೀಕರ ವೇದಿಕೆಯ ವೈ.ಎಸ್. ವೀರಭದ್ರಪ್ಪ ಮತ್ತು ಬಿ.ಕೆ. ಮಂಜುನಾಥ್ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ದೇಶದ ರೈತರ ಜಮೀನಿನ ಮಣ್ಣಿನ ಆರೋಗ್ಯವನ್ನು ಪರೀಕ್ಷೆ ಮಾಡಿ ಪ್ರತಿಯೊಬ್ಬ ರೈತರಿಗೆ ತಮ್ಮ ಜಮೀನು ಮಣ್ಣಿನ ಆರೋಗ್ಯ ಕುರಿತ ಚೀಟಿಯನ್ನು ಒದಗಿಸಬೇಕೆಂಬ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯ ಮೂಲ ಉದ್ದೇಶವನ್ನೇ ಕೃಷಿ ಇಲಾಖೆಯ ಅಧಿಕಾರಿಗಳು ಬುಡಮೇಲು ಮಾಡಿ ರೈತರ ಜಮೀನಿಗೆ ಹೋಗಿ ಮಣ್ಣಿನ ಮಾದರಿಯನ್ನು ಸಂಗ್ರಹವನ್ನು ಮಾಡದೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸುವ ಮೂಲಕ ಅನ್ನದಾತ ರೈತರಿಗೆ ದ್ರೋಹ ಮಾಡಿ, ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು. ಜಿಲ್ಲೆಯಲ್ಲಿ ಯಾವುದೇ ಹಳ್ಳಿಗೂ ಸಂಬಂಧ ಪಟ್ಟ ಸಂಸ್ಥೆಯವರು ತೆರಳದೆ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗಿದೆ. ಎಂದು ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಗಳು 2020 ಮೇ 5ರಂದು ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಹಾಸನ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಂದ, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಣ್ಣು ಪರೀಕ್ಷೆ ಜವಾಬ್ದಾರಿಯನ್ನು ಯಾವ ಸಂಸ್ಥೆಗೆ ವಹಿಸಲಾಗಿತ್ತು. ಮತ್ತು ಈ ಉದ್ದೇಶಕ್ಕಾಗಿ ಎಷ್ಟು ಹಣ ಖರ್ಚಾಗಿದೆ ಎಂಬ ಮಾಹಿತಿ ಒದಗಿಸಬೇಕು ಎಂದು ಕೇಳಲಾಗಿತ್ತು ಎಂದರು. ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರ ಕಛೇರಿ ತಾಂತ್ರಿಕ ಅಧಿಕಾರಿ ಅವರು ನೀಡಿರುವ ಮಾಹಿತಿಯಲ್ಲಿ ಮಣ್ಣು ಪರೀಕ್ಷೆ ಮಾಡಿದವರ ಹೆಸರನ್ನು ನೀಡಿಲ್ಲ ಹಾಗೂ 2016-17ನೇ ಸಾಲಿನಲ್ಲಿ 1,94,408, 2017-18 ರಲ್ಲಿ 25,23,620, 2018-19ನೇ ಸಾಲಿನಲ್ಲಿ 75,093, 2019-20 ನೇ ಸಾಲಿನಲ್ಲಿ 1,20,714 ವೆಚ್ಚ ಆಗಿದೆ ಎಂದು ತಿಳಿಸಿದ್ದಾರೆ. ಈ ವೆಚ್ಚಗಳು ರೂಪಾಯಿಯ, ಪೈಸೆಯೂ, ಸಾವಿರವೋ, ಲಕ್ಷವೋ ಏನೊಂದೂ ತಿಳಿಯುತ್ತಿಲ್ಲ. ಅವರು ನೀಡುತ್ತಿರುವ ಮಾಹಿತಿ ನೋಡಿದರೇ ಸತ್ಯಾಂಶವನ್ನು ಮುಚ್ಚಿಡುವ ಉದ್ದೇಶವಾಗಿದೆ ಎಂದು ದೂರಿದರು.
ಹಿರಿಯ ನಾಗರಿಕರು ಭೇಟಿ ನೀಡಿದ ಹಳ್ಳಿಗಳಲ್ಲಿ ರೈತರಿಗೆ ನೀಡಿರುವ ಕಾರ್ಡುಗಳಲ್ಲಿ, ಸಂಬಂಧಿಸಿದ ರೈತರ ಜಮೀನಿನಲ್ಲಿ ಸಾವಯವ ಇಂಗಾಲ, ಸಾರಜನಕ, ರಂಜಕ, ಜಿಂಕ್, ಬೋರಾನ್, ಮ್ಯಾಂಗನೀಸ್, ಗಂಧಕ ಇಂತಿಷ್ಟು ಪ್ರಮಾಣದಲ್ಲಿ ಇದೆ ಎಂದು ನಮೂದಿಸಲಾಗಿದೆ. ಈ ಕಾಡುಗಳನ್ನು ಹೊಂದಿರುವ ರೈತರನ್ನು ವಿಚಾರಿಸಿದಾಗ ಯಾವ ಅಧಿಕಾರಿ ಅಥವಾ ಅವರ ಪ್ರತಿನಿಧಿ ತಮ್ಮ ಜಮೀನಿಗೆ ಭೇಟಿ ನೀಡಿಲ್ಲ ಎಂದು ರೈತರು ಹೇಳಿದ್ದಾರೆ. ಮಣ್ಣಿನ ಮಾದರಿಯನ್ನು ಸಂಗ್ರಹಿಸಿದೆ, ಈ ರೀತಿ ಮಣ್ಣು ಆರೋಗ್ಯ ಚೀಟಿಯನ್ನು ನೀಡುವುದು ದೇಶದ್ರೋಹದ ಕೆಲಸವಾಗಿದೆ, ಮಹಾ ಮೋಸವಾಗಿದೆ. ಈ ಬಗ್ಗೆ ಕೂಡಲೇ ಸಮಗ್ರ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಇಲ್ಲದಿದ್ದರೆ ಹಾಸನ ಜಿಲ್ಲೆಯ ರೈತರು ಹಾಗೂ ಸಾಮಾಜಿಕ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಸನ ಜಿಲ್ಲಾ ಹಿರಿಯ ನಾಗರೀಕರ ವೇದಿಕೆಯ ಎಂ. ರಂಗೇಗೌಡ, ಜಯಲಕ್ಷ್ಮಿ ರಾಜೇಗೌಡ ಇತರರು ಪಾಲ್ಗೊಂಡಿದ್ದರು.
Tags
ಹಾಸನ