ಹಾಸನ,ಸೆ.29:- ಕೆರೆಗಳ ಸಂರಕ್ಷಣೆ ಮಾಡದಿದ್ದರೆ ಮುಂದೊಂದು ದಿನ ಮನುಕುಲಕ್ಕೆ ದೊಡ್ಡ ಅಪಾಯ ಕಾದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಪಿ. ಗಂಗಾಧರ ರೈ ಅವರು ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಸರ್ಕಾರಿ ಕೆರೆ ಅಭಿವೃದ್ಧಿ ಸಮಿತಿ ಕಬ್ಬಳಿ ಇವರ ಸಹಯೋಗದಲ್ಲಿ ದುದ್ದ ಹೋಬಳಿಯ ಕಬ್ಬಳಿಯಲ್ಲಿ ನಡೆದ ಪುನಶ್ಚೇತನಗೊಳಿಸಿದ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮೂರ ಕೆರೆಗಳು, ನೆಡು ತೋಪುಗಳು ನಮ್ಮ ಸ್ವಾರ್ಥದಿಂದ ನನ್ನ ಕೆರೆ, ನನ್ನ ನೆಡುತೋಪಾಗಿ ಬದಲಾಗಿದ್ದು, ಈ ಮನೋಭಾವನೆಯಿಂದ ಕೆರೆಯೊಡಲು ಇಂದು ಕೃಷಿ ಭೂಮಿಯಾಗಿ ಮಾರ್ಪಾಡುತ್ತಿದೆ. ನಮ್ಮ ಈ ಭೂ ದಾಹ ನಿಲ್ಲದಿದ್ದರೆ ಮುಂದಿನ ಪೀಳಿಗೆ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದರು.
ರೆ ಕಟ್ಟೆಗಳ ರಕ್ಷಣೆಯಾಗದಿದ್ದರೆ ಬರಗಾಲದಂತಹ ಪ್ರಾಕೃತಿಕ ವಿಕೋಪಗಳು ಎದುರಾಗಲಿದ್ದು, ಭೂಮಿ ಬರಡಾಗುತ್ತದೆ. ಮನುಕುಲ ಸೇರಿದಂತೆ ಸಕಲ ಜೀವರಾಶಿಗೂ ಜೀವ ಜಲದ ಅವಶ್ಯಕತೆ ಇದ್ದು, ಜಲ ಮರು ಪೂರ್ಣವಾಗದಿದ್ದರೆ ಅಂತರ್ಜಲ ಮಟ್ಟ ಕುಸಿದು ಬದುಕು ಸಂಕಷ್ಟಕ್ಕೆ ಸಿಲುಕಲಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದಲ್ಲಿ ಇಲ್ಲಿಯವರೆಗೂ 194ಕ್ಕೂ ಹೆಚ್ಚು ಕೆರೆ-ಕಟ್ಟೆಗಳನ್ನು ಪುನಶ್ಚೇತನಗೊಳಿಸಿ ನೀರು ಸಂಗ್ರಹ ಸಾಮಥ್ರ್ಯ ಹೆಚ್ಚಿಸಿದೆ ಅಲ್ಲದೇ ಅಂರ್ಜಲ ಮಟ್ಟ ಹೆಚ್ಚಲು ಶ್ರಮಿಸುತ್ತಿದೆ. ಸಾರ್ವಜನಿಕರು ಕೂಡ ಜವಾಬ್ದಾರಿ ಅರಿತು ತಮ್ಮೂರಿನ ಕೆರೆಕಟ್ಟೆಗಳ, ಅರಣ್ಯ ಪ್ರದೇಶದ ಉಳಿವಿಗೆ ಮುಂದಾಗಬೇಕಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ, ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಆಸಕ್ತಿ ತೋರಿ ಸಹಕಾರಿ ಸಂಘಗಳ ಸ್ಥಾಪನೆ ಮೂಲಕ ಗ್ರಾಮಗಳ ವಿಕಾಸಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಸಕಲ ಜೀವ ರಾಶಿಗೂ ನೀರು ಅವಶ್ಯಕವಿದ್ದು, ಗ್ರಾಮೀಣ ಭಾಗದಲ್ಲಿ ಜನತೆ ಸರ್ಕಾರದ ಅನುದಾನಕ್ಕಾಗಿ ಕಾಯದೇ ತಾವೇ ಸಹಕಾರಿ ಸಂಘಗಳನ್ನು ರಚಿಸಿಕೊಂಡು ಗ್ರಾಮಗಳ ಅಭ್ಯುದಕ್ಕೆ ಶ್ರಮಿಸುವಂತಾದರೆ ಹಳ್ಳಿಗಳ ಉದ್ಧಾರ ಸಾಧ್ಯವಿದೆ ಎಂಬುದನ್ನು ಅರಿತು ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಡಿ.ಜಯರಾಂ, ತಾಲೂಕು ನಿರ್ದೇಶಕ ಪುರುಷೋತ್ತಮ್, ಕಬ್ಬಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆರ್.ಗೋವಿಂದಸ್ವಾಮಿ,ಯೋಜನೆಯ ಕೃಷಿ ಅಧಿಕಾರಿ ದೇವರಾಜು, ಸಿಬ್ಬಂದಿಗಳಾದ ಚಂದ್ರಶೇಖರ್ ಇತರರು ಹಾಜರಿದ್ದರು.