ಬಣಕಲ್:ಬೆಂಗಳೂರಿನಿಂದ ಹೊರನಾಡಿಗೆ ಸಾಗುತ್ತಿದ್ದ ಕಾರೊಂದು ಜಾವಳಿ ಸಮೀಪದ ಮೂಲೆಮನೆಯಲ್ಲಿ ಫಲ್ಟಿಯಾದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಅದೃಷ್ಟಾವಶಾತ್ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು ರಸ್ತೆ ಬದಿಗೆ ಪಲ್ಟಿಯಾಗಿದ್ದ ಕಾರನ್ನು ಸ್ಥಳೀಯರು ಜೇಸಿಬಿ ಯಂತ್ರದ ಮೂಲಕ ಹೊರ ತೆಗೆದರು.
ತಿಂಗಳೊಂದರಲ್ಲೆ ನಾಲ್ಕು ಅಪಘಾತ
ಇದೇ ಸ್ಥಳದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಅಪಘಾತಗಳು ನಡೆದಿವೆ. ಬೆಂಗಳೂರಿನಿಂದ ಹೊರನಾಡಿಗೆ ಹಿಂದಿರುಗುತ್ತಿದ್ದ ಕಾರು, ಹೊರನಾಡಿನಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದ ಕಾರು, ಸುಂಕಸಾಲೆ ಮೂಲದ ಕಾರು ಸೇರಿದಂತೆ ಇದೇ ಸ್ಥಳದಲ್ಲಿ ಅಪಘಾತ ಸಂಭವಿಸಿತ್ತು. ತಿರುವಿನಲ್ಲಿ ತಡೆಗೋಡೆ ಇಲ್ಲದೆ ಇರುವುದು ಅಪಘಾತ ಸಂಭವಿಸಲು ಕಾರಣವಾಗಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್, ತಡೆಗೋಡೆಯ ಸ್ಥಳದಲ್ಲಿ ತಾತ್ಕಾಲಿಕವಾಗಿ ಮಣ್ಣಿನ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಅನುದಾನ ಬಂದೊಡನೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ಪದೆ ಪದೆ ಈ ಸ್ಥಳದಲ್ಲಿ ಅಪಘಾತಗಳು ಸಂಭವಿಸಿದ್ದು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂದೆ ಇಂತಹ ಅಪಘಾತಗಳು ಸಂಭವಿಸಿ ಪ್ರಾಣಾಪಾಯ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ತಡೆಗೋಡೆ ನಿರ್ಮಿಸಲಿ ಎಂದು ಜಾವಳಿ ಗ್ರಾಮಸ್ಥ ಪರೀಕ್ಷಿತ್ ಒತ್ತಾಯಿಸಿದ್ದಾರೆ.
