ಹಾಸನ: ನ್ಯಾಯಯುತವಾಗಿ ಸಿಗಬೇಕಾದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ (ಎಐಯುಟಿಯುಸಿ) ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಆರೋಗ್ಯ ಇಲಾಖೆ ಹಾಗೂ ಜನ ಸಮೂಹದ ಮಧ್ಯೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ಕೊರೋನ ವಾರಿಯರ್ ಎಂದೇ ಹೆಸರಾದ ರಾಜ್ಯ 42,000 ಆಶಾ ಕಾರ್ಯಕರ್ತೆಯರು ಕಳೆದ ಸುಮಾರು 10-11 ವರ್ಷಗಳಿಂದ ಆಶಾ ಕಾರ್ಯಕರ್ತೆಯರು ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನತೆಯ ಆರೋಗ್ಯ ಯೋಜನೆಗಳನ್ನು ಕಾಯಾ ವಾಚಾ ಮನಸಾ ಜಾರಿಗೊಳಿಸುತ್ತ ಬಂದಿದ್ದಾರೆ. ಕೋವಿಡ್ ಹೆಮ್ಮಾರಿ ಪಿಡುಗಿಗೆ ಕಾಲದಲ್ಲಂತೂ ಅವರ ಅವಿರತ ಶ್ರಮ ಸೇವೆಯನ್ನು ಪ್ರಶಂಸೆ ಮಾಡದವರೆ ಇಲ್ಲ. ಆದರೆ ಇಂತಹ ಅಸಮಾನ್ಯಸೇವೆಗಾಗಿ ಅವರಿಗೆ ದೊರಕುವ ಸಂಭಾವನೆಯಂತೂ ಅತಿ ಕಡಿಮೆಯಾಗಿದೆ ಎಂದರು.
ಕಾರ್ಯಕರ್ತೆಯರ ಇರುವ ಅಸಂಖ್ಯಾತ ಲೋಪದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಕಾಲ ವಿಳಂಬ ನೀತಿಯಿಂದಾಗಿ 2018 ಮತ್ತು 2019 ರ ನಡುವೆ 15 ತಿಂಗಳುಗಳಲ್ಲಿ ಪ್ರತಿ ಕಾರ್ಯಕರ್ತೆ ಬರಬೇಕಾಗಿದ್ದ ಸಾವಿರಾರು ರೂಪಾಯಿ ಹಣ ಬರದೇ ನಷ್ಟವಾಗಿದೆ. ತಿಂಗಳ ಕೆಲಸಕ್ಕೆ ತಕ್ಕಷ್ಟು ಹಣ ಅವರಿಗೆ ಸಿಗುತ್ತಿಲ್ಲ. ಆದರೆ ದಿನೇ ದಿನೇ ದುಡಿತ ಹೆಚ್ಚಿತೇ ಹೊರತು ದುಡಿದ ಹಣ ಮಾತ್ರ ಕೈಗೆ ಬರಲಿಲ್ಲ. ಅನ್ಯಾಯದಿಂದ ಕಾರ್ಯಕರ್ತೆಯರ ಕುಟುಂಬಗಳು ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುವಂತಾಗಿದೆ. ಆಶಾ ಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕ ವೇತನ ಮಾತ್ರ ಸಿಗುತ್ತಿಲ್ಲ. ರೂ. 12,000 ಬೇಡಿಕೆ ಸಹ ವಾಸ್ತವಿಕವಾಗಿದ್ದು, ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲವೆಂದೂ ಸಂಘವು ಪದೇ ಪದೇ ಪ್ರಸ್ತಾಪಿಸುತ್ತಾ ಬಂದಿದೆ ಎಂದು ಹೇಳಿದರು.
ಕಳೆದ ಜನವರಿ ತಿಂಗಳಲ್ಲಿ ಜರುಗಿದ ರಾಜ್ಯ ಮಟ್ಟದ ಚಳುವಳಿಯನ್ನು ಆರೋಗ್ಯ ಮಂತ್ರಿಗಳ ಆಶ್ವಾಸನೆ ಯೊಂದಿಗೆ ಹಿಂಪಡೆಯಲಾಗಿತ್ತು. ಆದರೆ .ಈ ಭರವಸೆ ಭರವಸೆಯಾಗಿಯೇ ಉಳಿಯಿತು. ನಂತರದ ದಿನಗಳಲ್ಲಿ ಕೋವಿಡ್ ಮಹಾಮಾರಿಯ ವಿರುದ್ಧ ಆರಾ ಕಾರ್ಯಕರ್ತೆಯರು ಕಾರ್ಯಪ್ರವೃತ್ತರಾದರು. ಈ ಹಿನ್ನೆಲೆಯಲ್ಲಿ ಕಳೆದ ಜುಲೈ 10 ರಿಂದ 29 ರವರೆಗೆ ರಾಜ್ಯದ ಆಶಾ ಕಾರ್ಯಕರ್ತೆಯರು ತಮ್ಮ ಕನಿಷ್ಠ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು. ಆಶಾ ಕಾರ್ಯಕರ್ತೆಯರು ತಮ್ಮ 20 ದಿನಗಳ ಐತಿಹಾಸಿಕ ಹೋರಾಟವನ್ನು ತತ್ ಕ್ಷಣಕ್ಕೆ ಸ್ಥಗಿತಗೊಳಿಸಿದೆ. ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಮುಷ್ಕರ ಸ್ಥಗಿತಗೊಳಿಸಿ 50 ದಿನ ಕಳೆದರೂ ಸರ್ಕಾರದ ಕಡೆಯಿಂದ ಯಾವ ಅಧಿಕೃತ ಘೋಷಣೆ ಬಂದಿರುವುದಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ವಚನವಿತ್ತು ಏನನ್ನು ಘೋಷಣೆ ಮಾಡದೆ ಇರುವುದನ್ನು ಅತ್ಯಂತ ದುಃಖದಿಂದ ಗಮನಿಸಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಸರ್ಕಾರವು ಕೂಡಲೇ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಆರ್ಥಿಕ ಸಂಕಷ್ಟದಲ್ಲಿ ಇರುವ ಈ ಕಾರ್ಯಕರ್ತೆಯರಿಗೆ ಸೂಕ್ತ ಪರಿಹಾರ ನೀಡಲು ಮನವಿ ಮಾಡಿದರು.
ಇದೆ ವೇಳೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ (ಎಐಯುಟಿಯುಸಿ) ಸಂಘದ ಲಕ್ಷ್ಮಿ, ಕೆ.ಟಿ. ದಾಕ್ಷಾಯಿಣಿ, ವೀಣಾ, ಗೀತಾ, ವಿಶಾಕಾ ಇತರರು ಭಾಗವಹಿಸಿದ್ದರು.
Tags
ಹಾಸನ