ಹಾಸನ: ಜನರಲ್ಲಿ ಬೇರೂರಿರುವ ಅಜ್ಞಾನ, ಅಂದಕಾರ, ಮೌಡ್ಯ ಹಾಗೂ ಮೂಡನಂಬಿಕೆಗಳನ್ನು ಹೋಗಲಾಡಿಸಲು ಜ್ಞಾನ ಮುಖ್ಯ ಹಾಗಾಗಿ ಅನಕ್ಷರಸ್ತರಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿವತಿಯಿಂದ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಾಕ್ಷರತೆಯಲ್ಲಿ ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಜನರಲ್ಲಿನ ಅಜ್ಞಾನ, ಅಂದಕಾರ, ಮೌಡ್ಯ ಹಾಗೂ ಮೂಡನಂಬಿಕೆಗಳನ್ನು ಹೋಗಲಾಡಿಸಲು ಜ್ಞಾನ ಮುಖ್ಯ ಹಾಗಾಗಿ ಅನಕ್ಷರಸ್ತರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು. ಉತ್ತಮ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾದ್ಯ ಹಾಗಾಗಿ ಜನರಲ್ಲಿ ಸಾಕ್ಷರತೆಯ ಅರಿವು ಮೂಡಿಸುವುದರ ಜೊತೆಗೆ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಬಗ್ಗೆ ತಿಳಿಸಿದರೆ ದೇಶವು ಅಭಿವೃದ್ಧಿಯ ಪಥದತ್ತ ಸಾಗುತ್ತದೆ. ಒಂದು ರಾಷ್ಟ್ರ ಸಮೃದ್ಧವಾಗಬೇಕಾದರೆ ಸಾಕ್ಷರತೆ ಮುಖ್ಯ. ಪ್ರತಿಯೊಬ್ಬ ವ್ಯಕ್ತಿಯು ತಮ್ಮಲ್ಲಿರುವ ಜ್ನಾನವನ್ನು ಸುತ್ತಮತ್ತಲ ಜನರಿಗೆ ತಿಳಿಸಿಕೊಡುವ ಮೂಲಕ ಅರಿವು ಮೂಡಿಸಿದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು. ಪ್ರತಿಯೊಂದು ಹಳ್ಳಿಗಳ ಮೂಲೆಗೂ ಅಕ್ಷರ ಜ್ಞಾನ ಪಸರಿಸಬೇಕಾಗಿದೆ ಎಂದರು. 1947 ರಲ್ಲಿ ಸಾಕ್ಷರತಾ ಪ್ರಮಾಣ ಶೇಕಡ 12 ರಷ್ಟಿತ್ತು. ಇಂದು ಶೇಕಡ 77 ರಷ್ಟಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ಸಾಕ್ಷರತಾ ದಿನಾಚರಣೆಯು 1967 ರಲ್ಲಿ ಪ್ರಾರಂಭವಾಯಿತು. ಜಿಲ್ಲೆಯು ಶೇ. 76ರಷ್ಟು ಸಾಕ್ಷರತೆಯನ್ನು ಹೊಂದಿದ್ದು, ಹಳ್ಳಿಯ ಜನರನ್ನು ಅಂದಿನ ಕಾಲದಂತೆ ವಂಚಿಸಲು ಸಾಧ್ಯವಿಲ್ಲ. ಸಾಕ್ಷರತೆ ಹೆಚ್ಚಾದಂತೆ ಜನರಲ್ಲಿ ಅರಿವು ಮೂಡಿದೆ ಎಂದರು. ಸರ್ಕಾರದ ಎಲ್ಲಾ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಯಾರು ದಬ್ಬಾಳಿಕೆ ಮಾಡುತ್ತಾರೊ ಅಂತಹವರಿಗೆ ಮಾತ್ರ ದೊರೆಯುತ್ತಿದೆ. ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಿಕ್ಷಣ ಮುಖ್ಯ ಹಾಗಾಗಿ ತಿಳಿದವರು ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ತಜ್ಞರಾದ ಡಾ. ಓಬಳೇಶ ಘಟ್ಟಿ ಅವರು ಮಾತನಾಡಿ ಮಣ್ಣಿಗೆ, ಹೊನ್ನಿಗೆ, ಹೆಣ್ಣಿಗೆ ಸತ್ತಿದ್ದು ಕೋಟಿ ಜನರಾದರೆ, ವಿದ್ಯೆಯಿಂದ ಸತ್ತವರು ಯಾರೂ ಇಲ್ಲ. ಹಾಗಾಗಿ ಶಿಕ್ಷಣದ ಮೂಲಕ ಮೂರ್ಖ, ಅನಿಷ್ಟ, ಅಜ್ಞಾನ, ಅಂದಕಾರ, ಮೌಡ್ಯ, ಹಾಗೂ ಮೂಡನಂಬಿಕೆಗಳನ್ನು ಹೋಗಲಾಡಿಸಿ ಎಲ್ಲರನ್ನು ಸಾಕ್ಷರಸ್ತರನ್ನಾಗಿಸಲು ಶ್ರಮಿಸಬೇಕು ಎಂದರು. ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಬುದ್ದ, ಬಸವ, ಶರಣರು ಸಮಾಜದ ಒಳಿತಿಗಾಗಿದುಡಿದವರು. ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ನೀಡಲು ಶ್ರಮಿಸಿದವರು ಹಾಗಾಗಿ ಅಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ರೂಡಿಸಿಕೊಂಡು ತಮ್ಮಲ್ಲಿರುವ ಶಿಕ್ಷಣವನ್ನು ಬೇರೆಯವರಿಗೂ ಹಂಚಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಕ್ಷರತಾ ಪ್ರಮಾಣವಚನವನ್ನು ಸ್ವೀಕರಿಸಲಾಯಿತು. ಜನಪದ ಕಲಾವಿದರಾದ ದೊಡ್ಡಹಳ್ಳಿ ರಮೇಶ್, ಯೋಗೇಂದ್ರ, ರಮೇಶ್ ದಿಬ್ಬೂರ್ ಇವರು ತಮ್ಮ ಕಂಠ ಧ್ವನಿಯಲ್ಲಿ ಹಾಡಿ ಗಮನಸೆಳೆದರು.
ಇದೆ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ್, ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿಗಳು ಹಾಗೂ ಕಾರ್ಯದರ್ಶಿ ಲಕ್ಷ್ಮಣ್ ಎಂ. ಬಳೂಟಗಿ, ಕನ್ನಡ ಸಾಹಿತ್ಯ ಒಪರಿಷತ್ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ಕಲ್ಲಹಳ್ಳಿ ಹರೀಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿ ಸಹ ಶಿಕ್ಷಕರಾದ ತಮ್ಮಣ್ಣಗೌಡ, ಜಾನಪದ ಕಲಾವಿದರಾದ ಗ್ಯಾರಂಟಿ ರಾಮಣ್ಣ ಇತರರು ಉಪಸ್ಥಿತರಿದ್ದರು.
Tags
ಹಾಸನ