ಜನರ ಮೂಲಭೂತ ಅಗತ್ಯವಾಗಿರುವ ಕುಡಿಯುವ ನೀರನ್ನು ಎಲ್ಲಾ ನಗರ ಸ್ಥಳೀಯ ವ್ಯಾಪ್ತಿಯಲ್ಲಿ ಪ್ರತಿದಿನ ಅಗತ್ಯ ಪ್ರಮಾಣದಲ್ಲಿ ಪೂರೈಸುವಂತೆ ನಗರಾಭಿವೃದ್ಧಿ ಸಚಿವರಾದ ಬಿ ಬಸವರಾಜ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ನೀರು ಸರಬರಾಜು ಮಂಡಳಿ ಕಾಮಾಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಹೇಮಾವತಿ ಹಾಗೂ ಯಗಚಿ ನದಿ ಮತ್ತು ಜಲಾಶಯಗಳು ಇದ್ದು ಅದನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ದಿನ ನಿತ್ಯ ಕುಡಿಯುವ ನೀರು ಪೂರೈಸಿ ಎಂದರು.
ಎಲ್ಲಾ ನಗರ ಮತ್ತು ಪಟ್ಟಣಗಳಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗಳು ಸುಸ್ಥಿತಿಯಲ್ಲಿ ಇರಬೇಕು ಮತ್ತು ಮುಂದೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಕಾಮಾಗಾರಿಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು, ಇಂಜಿನಿಯರ್‍ಗಳು ಮುತ್ತುವರ್ಜಿವಹಿಸಿ ಎಂದು ಹೇಳಿದರು.
ಹಾಸನ ನಗರದ ಕುಡಿಯುವ ನೀರು ಪೂರೈಕೆಯ ಅಮೃತ ಯೋಜನೆ ಕಾಮಾಗಾರಿ ತ್ವರಿತವಾಗಿ ಪೂರ್ಣಗೊಳ್ಳಿಸಬೇಕು, ರಸ್ತೆ ದುರಸ್ತಿ ಕಾರ್ಯಗಳನ್ನು ಡಿಸೆಂಬರ್ ಅಂತ್ಯದೊಳಗೆ ಮುಗಿಸಬೇಕು ಎಂದು ಸಚಿವರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನಿಯರ್‍ಗಳಿಗೆ ಸೂಚನೆ ನೀಡಿದರು.
ಅರಸೀಕೆರೆ ಹಾಗೂ ಚನ್ನರಾಯಪಟ್ಟಣಗಳಿಗೆ ಕುಡಿಯುವ ನೀರಿಗೆ ಹೇಮಾವತಿ ನದಿ ನಿರು ಪೂರೈಸುವ ಯೋಜನೆಗಳು ಶೀಘ್ರವಾಗಿ ಪೂರ್ಣಗೊಳ್ಳಬೇಕು, ಸಕಲೇಶಪುರ, ಬೇಲೂರುಗಳಲ್ಲಿ ಒಳಚರಂಡಿ ವ್ಯವಸ್ಥೆ ಶೀಘ್ರವಾಗಿ ಹಾಗೂ ಸಮರ್ಪಕವಾಗಿ ನಡೆಯಬೇಕು. ಇದಕ್ಕೆ ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಿರಿ ಎಂದು ಸಚಿವರಾದ ಬಿ. ಬಸವರಾಜ್ ತಿಳಿಸಿದರು.
ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 25 ಎಕರೆಗಿಂತಲ್ಲೂ ಕಡಿಮೆ ಜಾಗದಲ್ಲಿರುವ ಹೊಸ ಬಡಾವಣೆಗಳಿಗೆ ಅನುಮತಿ ನೀಡದಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಿಯವರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಅಲ್ಲದೆ ಕುಡಿಯುವ ನೀರು ಹಾಗೂ ಒಳಚರಂಡಿ ಬಾಕಿ ಕೆಲಸಕ್ಕಾಗಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ ಎಂದು ಸಚಿವರು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕುಡಿಯುವ ನೀರು ಪೂರೈಕೆ ಕಾಮಗಾರಿಗಳಿಗೆ ಅಗತ್ಯ ಜಾಗ ಒದಗಿಸುವ ಜವಾಬ್ದಾರಿ ಸ್ಥಳೀಯ ಶಾಸಕರಾದ್ದಾಗಿದು ಈ ಬಗ್ಗೆ ಆಸಕ್ತಿವಹಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ಸಚಿವರು ತಿಳಿಸಿದರು.
ಇದೇ ವೇಳೆ ಹಾಜರಿದ್ದ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಸಿ.ಎನ್. ಬಾಲಕೃಷ್ಣ, ಪ್ರೀತಂ ಜೆ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಂ. ಎ. ಗೋಪಾಲಸ್ವಾಮಿ ಅವರುಗಳು ಸ್ಥಳೀಯ ಸಮಸ್ಯೆಗಳ, ಅಗತ್ಯತೆಗಳು ಹಾಗೂ ಆಧ್ಯತೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.
ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಅವರು ಮಾತನಾಡಿ ಸಕಲೇಶಪುರ ಪಟ್ಟಣದಲ್ಲಿ ಇನ್ನೂ ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವುದು ಹಾಗೂ ಕುಡಿಯುವ ನೀರಿನ ಸಮಸ್ಯೆ ಹಾಗೂ ಹಾಲಿ ಯೋಜನೆಗೆ ಅಗತ್ಯ ಅನುದಾನ ಮಂಜೂರಾತಿಗಳ ಬಗ್ಗೆ ಸಚಿವರ ಗಮನ ಸೆಳೆದರು.
ಆಲೂರು ಪಟ್ಟಣದಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗಳ ಬಗ್ಗೆಯೂ ಸಚಿವಗೆ ತಿಳಿಸಿದರು.
ಶಾಸಕರಾದ ಪ್ರೀತಂ ಜೆ ಗೌಡ ಅವರು ಮಾತನಾಡಿ ಹಾಸನ ನಗರದ ಅಮೃತ ಯೋಜನೆ ಅನುಷ್ಠಾನದಲ್ಲಾಗಿರುವ ವಿಳಂಬಕ್ಕೆ ಕಾರಣಗಳು, ಗುರುತಾಕರ್ಷಣಾ ಶಕ್ತಿಯ ಮೂಲಕ ನೀರು ಒದಗಿಸಲು ಟ್ಯಾಂಕ್ ನಿರ್ಮಾಣಕ್ಕೆ ಜಮೀನು ಗುರುತಿಸುವಿಕೆ ಬಗ್ಗೆ ವಿವರಿಸಿದರು.
ಅಧಿಕಾರಿಗಳು ನಗರ ಮತ್ತು ಪಟ್ಟಣಗಳ ಜನಸಂಖ್ಯೆ ಆಧಾರಿತವಾಗಿ ಇರುವ ಅಗತ್ಯತೆಗಳಿಗನುಗುಣವಾಗಿ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಬೇಕು ಎಂದು ಶಾಸಕರಾದ ಪ್ರೀತಂ ಜೆ ಗೌಡ ಹೇಳಿದರು.
ಹೊಸ ಉದ್ದೇಶಿತ ಬಡಾವಣೆಗಳ, ನಗರಾಭಿವೃದ್ಧಿ ಯೋಜನೆಗಳ ಎಸ್.ಎಂ.ಕೆ. ನಗರದಲ್ಲಿ ಬಾಕಿ ಇರುವ ಕಾಮಗಾರಿ ಹಾಗೂ ಹೊಸ ಅನಧಿಕೃತ ಬಡಾವಣೆಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮ ಕುರಿತು ಚರ್ಚೆ ನಡೆಸಿದರು. ಹಾಗೂ ಹೊಸ ಹೂಡಾ ಕಚೇರಿ ನಿರ್ಮಾಣಕ್ಕೆ ಶೀಘ್ರ ಅನುಮತಿ ನೀಡುವಂತೆ ಕೋರಿದರು.
ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ ಚನ್ನರಾಯಪಟ್ಟಣ ಪುರಸಭೆಯನ್ನು ನಗರಸಭೆಯಾಗಿ ಮೇಲ್ದಜೇಗೇರಿಸಬೇಕು. ಬಾಕಿ ಇರುವ ಕುಡಿಯುವ ನೀರು ಪೂರೈಕೆ ಯೋಜನೆಗೆ ಅಗತ್ಯ ಪ್ರಮಾಣದ ಹೆಚ್ಚುವರಿ ಅನುದಾನ ಒದಗಿಸಿ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಒಳಚರಂಡಿ ವ್ಯವಸ್ಥೆ ಕಾಮಗಾರಿಗೆ ಅನುದಾನ ಹೆಚ್ಚಳ ಮಾಡಿ ಮುಂದಿನ 20 ವರ್ಷಗಳ ಅವಧಿಗೆ ವಿಸ್ತರಣೆಯಾಗುವ ಪಟ್ಟಣದ ವ್ಯಾಪ್ತಿಗೆ ಅನುಗುಣವಾಗಿ ಯೋಜನೆ ಅನುಷ್ಠಾನ ಮಾಡಬೇಕು ಎಂದರು.
ಕೆರೆ ಅಭಿವೃದ್ಧಿಗೆ ಸಂಗ್ರಹಿಸುವ ಸೆಸ್ ಅನುದಾನವನ್ನು ಆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಒದಗಿಸಿದರೆ ಅಂತರ್ಜಲ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಎಂದು ಶಾಸಕರಾದ ಸಿ.ಎನ್ ಬಾಲಕೃಷ್ಣ ಅವರು ಸಚಿವರಲ್ಲಿ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ ಅವರು ಸಹ ಚನ್ನರಾಯಪಟ್ಟಣ ವ್ಯಾಪ್ತಿಯ ಸಮಸ್ಯೆಗಳು, ಅಗತ್ಯ ಯೋಜನೆಗಳ ಬಗ್ಗೆ ಗಮನ ಸೆಳೆದರು.
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಲಲಾಟಮೂರ್ತಿ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದು ಹಲವು ಮಾಹಿತಿ ನೀಡಿದರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ಕರಿಯಪ್ಪ ಅವರು ಸಚಿವರಿಗೆ ಮಾಹಿತಿ ನೀಡಿದರು.
Tags
ಹಾಸನ