ಪಶು ಸಂಜೀವಿನಿ: ಜಾನುವಾರುಗಳ ತುರ್ತು ಚಿಕಿತ್ಸೆಗೆ ಮನೆ ಬಾಗಿಲಿಗೇ ಆಂಬ್ಯುಲೆನ್ಸ್ ಸೇವೆ

ಹಾಸನ: ರೋಗಗ್ರಸ್ತ ಜಾನುವಾರುಗಳಿಗೆ ತುರ್ತು ಚಿಕಿತ್ಸಾ ಸೇವೆ ನೀಡಲು 15.58 ಲಕ್ಷ ರೂ.ಗಳಲ್ಲಿ ಪರಿಚಯಿಸಲಾಗಿರುವ ಸುಸಜ್ಜಿತ ಸಂಚಾರಿ ಪಶು ಶಸ್ತ್ರಚಿಕಿತ್ಸಾ ವಾಹನ- ಪಶುಸಂಜೀವಿನಿಯನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿರುವ ಪಶುವೈದ್ಯಕೀಯ ಪಾಲಿಕ್ಲಿನಿಕ್ ‍ಗೆ ನೀಡಲಾಗುತ್ತಿದೆ.


ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಸೆ.3ರಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಿರುವ ಪಶು ಸಂಜೀವಿನಿ ವಾಹನದ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

2019-20ನೇ ಸಾಲಿನ ಬಜೆಟ್ ಘೋಷಣೆಯಲ್ಲಿ ಹಾಸನದ ಅರಕಲಗೂಡು ತಾಲ್ಲೂಕಿಗೆ ನಿಗದಿಪಡಿಸಿರುವ ರೂ 15.58 ಲಕ್ಷ ಅನುದಾನ ಮತ್ತು ಇಲಾಖೆಯ ಇತರೆ ಅನುದಾನದಲ್ಲಿ ಈ ವಾಹನವನ್ನು ಅನುಷ್ಠಾನಗೊಳಿಸಲಾಗಿದೆ. ಈ ಆಂಬ್ಯುಲೆನ್ಸ್ ವಾಹನದಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಾದ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಕೆ, 250 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, 200 ಕೆ.ಜಿ ತೂಕ ಸಾಮರ್ಥ್ಯದ ಶಸ್ತ್ರ ಚಿಕಿತ್ಸಾ ಟೇಬಲ್, ಎ/ಸಿ ವ್ಯವಸ್ಥೆ, ಜಾನುವಾರುಗಳ ಚಿಕಿತ್ಸೆಗೆ ಅತ್ಯವಶ್ಯಕ ಶಸ್ತ್ರಚಿಕಿತ್ಸಾ ಉಪಕರಣಗಳ ಕಿಟ್, ಮರಣೋತ್ತರ ಪರೀಕ್ಷೆ ಉಪಕರಣಗಳ ಕಿಟ್, ಪ್ರಸೂತಿ ಕಿಟ್ ಗಳಿವೆ. ಜಾನುವಾರುಗಳಿಗೆ ಎದುರಾಗುವ ತುರ್ತು ಸಂದರ್ಭಗಳಲ್ಲಿ (ಪ್ರಸವಕ್ಕೆ ಸಂಬಂಧಿಸಿದ ತೊಂದರೆಗಳು, ವಿಷಪ್ರಾಶನ, ಹೊಟ್ಟೆ ಉಬ್ಬರ, ಉಸಿರುಗಟ್ಟುವುದು, ಅಪಘಾತ, ಮೂಳೆಮುರಿತ, ಬೆಬಿಸಿಯೋಸಿಸ್, ಆಂಥ್ರಾಕ್ಸ್, ಚಪ್ಪೆರೋಗ, ಗಳಲೆರೋಗ, ಹಾಲುಜ್ವರ, ಕೆಚ್ಚಲಬಾವು, ವಿವಿಧ ರೋಗೋದ್ರೇಕಗಳು) ಹಾಗೂ ಸಾಧಾರಣ ಚಿಕಿತ್ಸೆಗೆ ಸುಸಜ್ಜಿತ ಸಂಚಾರಿ ಪಶು ಶಸ್ತ್ರಚಿಕಿತ್ಸಾ ವಾಹನದ ಮೂಲಕ ರೈತರ ಮನೆ ಬಾಗಿಲಿಗೆ ತುರ್ತು ಮತ್ತು ತಜ್ಞ ಪಶುವೈದ್ಯಕೀಯ ಸೇವೆ ಪಡೆಯಬಹುದಾಗಿದೆ.

ಪಶು ಶಸ್ತ್ರಚಿಕಿತ್ಸಾ ವಾಹನ ಉಪಯೋಗಿಸಿಕೊಂಡು ಜಿಲ್ಲಾದ್ಯಂತ ವಾರದಲ್ಲಿ 1 ದಿನ ಪಶುವೈದ್ಯಕೀಯ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಪ್ರಸೂತಿ ತಜ್ಞರು ಬರಡುರಾಸುಗಳ ಚಿಕಿತ್ಸಾ ಶಿಬಿರ ಮತ್ತು ಅನುಪಾಲನಾ ಶಿಬಿರಗಳಲ್ಲಿ ಭಾಗವಹಿಸಿ ತಜ್ಞ ಪಶುವೈದ್ಯಕೀಯ ಸೇವೆಯನ್ನು ದೊರಕಿಸಿಕೊಡಲಿದ್ದಾರೆ. ಆಂಬುಲೆನ್ಸ್ ಸೇವೆಯನ್ನು ಪಶುಪಾಲಕರ ಸಹಾಯವಾಣಿ ಸಂಖ್ಯೆ: 1962ಗೆ ಸಂಯೋಜಿಸಿ ಅವಶ್ಯಕ ಮತ್ತು ತುರ್ತು ಸೇವೆ ನೀಡಲು ಕ್ರಮವಹಿಸಲಾಗುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

Post a Comment

Previous Post Next Post