ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ.ಸಾಧಿಸಬೇಕು ಅನ್ನುವ ಛಲವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಅದಕ್ಕೆ ಯಾವುದೇ ಕ್ಷೇತ್ರಗಳ ಇತಿ ಮಿತಿ ಇರಲ್ಲ . ಈ ಮಾತಿಗೆ ಅನ್ವರ್ಥ ಎನ್ನುವಂತೆ ಇರುವವರು ವಿಜೆ. ತೇಜೇಶ್ ಬಂಗೇರ.ಯಕ್ಷಗಾನ ,ನಿರೂಪಣೆ ,ನಾಟಕ ,ಭಜನೆ ಹೀಗೆ ಎಲ್ಲ ಕ್ಷೇತ್ರದಲ್ಲೂ ಪರಿಣಿತಿ ಹೊಂದಿ ಪ್ರಸಿದ್ಧ ಪಡೆದವರು ತೇಜೇಶ್ ಜೆ.ಬಂಗೇರ.
ತೇಜೇಶ್ , ಮೂಲತಃ ಉಡುಪಿ ಜಿಲ್ಲೆಯವರು .ಯುವ ಜನರಿಗೆ ಸ್ಪೂರ್ತಿ ಸೆಲೆಯಾಗಿರುವ ವಿವೇಕಾನಂದರ ಜನುಮ ದಿನವಾದ ಜನವರಿ 12ರಂದು ಜಯ ಬಂಗೇರ ಹಾಗೂ ಸುಗಂಧಿ ಬಂಗೇರ ಅವರ ಏಕೈಕ ಮಗನಾಗಿ ಜನಿಸಿದ ಇವರಿಗೆ ಮನೆಯೇ ಮೊದಲ ಪಾಠಶಾಲೆ.ಯಕ್ಷಗಾನ ,ನಾಟಕ ,ಭಜನೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ತಂದೆಯೇ ಇವರಿಗೆ ಸ್ಪೂರ್ತಿ.ಅಪ್ಪನ ಕ್ರಿಯಾಶೀಲ ಚಟುವಟಿಕೆ ಬಾಲ್ಯದಲ್ಲಿ ಇವರ ಮೇಲೆ ಪ್ರಭಾವ ಬೀರಿ ಸಮಾಜಕ್ಕೆ ತನ್ನನ್ನು ತಾನು ಅರ್ಪಿಸಿಕೊಳ್ಳಬೇಕು ಎನ್ನುವ ಮನೋಭಾವ ಬೆಳೆಸಿತ್ತು.
ಯಕ್ಷಗಾನ ಕಲಾವಿದನಾಗಬೇಕು ಎನ್ನುವ ಆಸೆಗೆ ಮೊದಲ ಹೆಜ್ಜೆ ಕಲಿಸಿದ್ದು ಬನ್ನಂಜೆ ಸಂಜೀವ ಸುವರ್ಣ.ಎರಡನೇ ತರಗತಿಯಲ್ಲಿ ಇರಬೇಕಾದರೆ ಯಕ್ಷಗಾನದಲ್ಲಿ ಗೆಜ್ಜೆ ಕಟ್ಟಲು ಆರಂಭಿಸಿದರು. ಅನಂತರ ಯಕ್ಷಗಾನದಲ್ಲಿ ನೂರಕ್ಕೂ ಹೆಚ್ಚು ಪಾತ್ರದಲ್ಲಿ ಅಭಿನಯ .ಇಲ್ಲಿಂದಲೇ ತೇಜೇಶ್ ಸಾಧನೆಯ ಪಯಣ ಆರಂಭವಾಗುತ್ತಾ ಹೋಯಿತು. ಊರಿನ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಲು ಆರಂಭಿಸಿದ ತೇಜೇಶ್ ನಿರೂಪಣೆಯ ಪಯಣಕ್ಕೆ ಭರ್ತಿ 12 ವರ್ಷ.ವಿಧ್ಯಾಭ್ಯಾಸ ಮುಗಿಯುತ್ತಿದ್ದಂತೆ "ಮುಕ್ತ"ದಲ್ಲಿ ತನ್ನ ಮಾಧ್ಯಮ ಬದುಕಿನ ಪಯಣ ಆರಂಭಿಸಿದರು . ಅಲ್ಲಿ ನಿರೂಪಣೆ ಮಾಡುತ್ತಾ ಜನರಿಗೆ ಅತಿ ಆಪ್ತವಾದ ತೇಜೇಶ ಪ್ರಸ್ತುತ ಸ್ಪಂದನ ವಾಹಿನಿಯಲ್ಲಿ ಕೆಲಸಮಾಡುತ್ತಿದ್ದಾರೆ. ಮಾಧ್ಯಮದ ಆಚೆಗೂ ತೇಜೇಶ್ ರ ನಿರೂಪಣೆಯ ಕಂಪು ಪಸರಿಸಿದೆ. ಉಡುಪಿ ಭಾಗದ ಜನರ ನೆಚ್ಚಿನ ವಿಜೆ ಇವರು.ಸಾಕಷ್ಟು ಸಭೆ ಸಮಾರಂಭಗಳಿಗೆ ನಿರೂಪಣೆ ಮಾಡಿರುವ ಇವರು ಬೇರೆ ಜಿಲ್ಲೆಯಲ್ಲಿ ಕೂಡ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ್ದಾರೆ . ಮಹಾನಗರಿ ಮುಂಬೈ ಅಲ್ಲಿ ಕೂಡ ತನ್ನ ನಿರೂಪಣೆ ಛಾಪು ಮೂಡಿಸಿದ ಹೆಗ್ಗಳಿಕೆ ಇವರದ್ದು .ಜೊತೆಗೆ ಸಾಕಷ್ಟು ಸ್ಪ ರ್ಧೆಗಳಿಗೆ ತೀರ್ಪುಗಾರರಾಗಿ ಕೂಡಾ ಭಾಗವಹಿಸಿದ್ದಾರೆ.
ತೇಜೇಶ್ ನಾಟಕಗಳಲ್ಲಿ ಕೂಡಾ ಮಿಂಚಿದವರು .ಇಲ್ಲಿಯ ತನಕ ಸುಮಾರು 50 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದ್ದು .ಇದರ ಜೊತೆಗೆ ಫಿಲ್ಮಿ ಡಾನ್ಸ್,ಜಾನಪದ ಡಾನ್ಸ್ ಹೀಗೆ ಹಲವು ಪ್ರಕಾರದ ಡಾನ್ಸ್ ಇವರಿಗೆ ಕರಗತ.ಇಷ್ಟು ಮಾತ್ರವಲ್ಲದೆ ಹಲವಾರು ಭಜನಾ ತಂಡಗಳಿಗೆ ಭಾಜಕರಾಗಿ ಕೂಡ ಹೋಗಿರುವ ಇವರು ಪ್ರಸ್ತುತ ತನ್ನದೇ ಸ್ವಂತ ಭಜನಾ ತಂಡ ಕಟ್ಟಿಕೊಂಡು ಭಜನಾ ಗುರುಗಳಾಗಿ ಕೂಡ ಯಶಸ್ವಿಯಾಗಿದ್ದಾರೆ. ಯಾವುದೇ ಫಲಾಪೆಕ್ಷೆ ಅಪೇಕ್ಷಿಸದೆ, ನಿಸ್ವಾರ್ಥ ಸೇವೆಯಿಂದ.ಶ್ರೀ ದೇವಿ ಭೂ ದೇವಿ ಶ್ರೀ ವಿಷ್ಣು ಮೂರ್ತಿ ಹೆಸರಿನ ಕುಣಿತ ಭಜನಾ ತಂಡ ಕಟ್ಟಿಕೊಂಡು ಭಜನಾ ಗುರುಗಳಾಗಿ ಯಶಸ್ವಿಯಾಗಿದ್ದಾರೆ.ಇವುಗಳ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ತನ್ನಿಂದಾದ ಸೇವೆ ಸಲ್ಲಿಸಬೇಕು ಅನ್ನುವ ತುಡಿತ ಹೊಂದಿದ್ದಾರೆ . ಉಡುಪಿ ಡ್ರೀಮ್ ಮೇಕರ್ಸ್ ಅನ್ನುವ ಈವೆಂಟ್ ಮ್ಯಾನೆಜ್ ಮೆಂಟ್ ಕಂಪನಿ ನಡೆಸುತ್ತಿದ್ದಾರೆ ತೇಜೇಶ್.
ಇವರು ಕಲಾ ಪ್ರೇಮಿಯ ಜೊತೆಗೆ ಕ್ರೀಡಾ ಪ್ರೇಮಿ ಹಾಗೂ ಪುಸ್ತಕ ಪ್ರೇಮಿ. ಬಾಲ್ ಬ್ಯಾಡ್ಮಿಂಟನ್,ಶಟಲ್ ಬ್ಯಾಡ್ಮಿಂಟನ್ ಹೀಗೆ ಸಾಕಷ್ಟು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಇವರಿಗೆ ಕ್ರೀಡೆಯಲ್ಲಿ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ .ಇವರ ಕಲಾ ಸೇವೆ ಗುರುತಿಸಿ 150 ಕ್ಕೂ ಹೆಚ್ಚು ಪ್ರಶಸ್ತಿ ಸಂದಿವೆ . ಪುಸ್ತಕ ಓದುವ ಹವ್ಯಾಸ ಜೊತೆಗೆ ಸುಮಾರು 500ಕ್ಕು ಹೆಚ್ಚು ಪುಸ್ತಕ ಗಳ ಸಂಗ್ರಹ ಇವರ ಬಳಿಯಿದೆ. ಬೈಕ್ , ಕಾರ್ ಡ್ರೈವಿಂಗ್ ಕೂಡ ಬಹು ಇಷ್ಟ.ಪ್ರಾಣಿಗಳೆಂದರೆ ಅಚ್ಚು ಮೆಚ್ಚು.
ಈ ಕಲಾ ಆರಾಧಕನ ಕಲಾ ಪಯಣ ಸುಲಭವಾಗಿ ಇರಲಿಲ್ಲ.ದಾರಿಯುದ್ದಕ್ಕೂ ಇವರು ಸವೆಸಿದ್ದು ಕಲ್ಲು ಮುಳ್ಳಿನ ಹಾದಿಗಳು. ಆದಿ ಉಡುಪಿ ಹಾಗೂ ತೆಂಕನಿಡಿಯೂರು ಅಲ್ಲಿ ಪ್ರಾಥಮಿಕ , ಪ್ರೌಢ ಶಾಲೆ , ಪಿಯುಸಿ ಶಿಕ್ಷಣ ಮುಗಿಸಿರುವ ತೇಜೇಶ್ ಓದಿನಲ್ಲಿ ಕೂಡಾ ಮುಂದು.8ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ತೇಜೇಶ್ ಅನಂತರ ಸಾಲು ಸಾಲು ತೊಂದರೆ ಅನುಭವಿಸಬೇಕಾಗಿ ಬಂತು.ಕಾರಣಾಂತರಗಳಿಂದ ಒಂದು ವರ್ಷ ಶಿಕ್ಷಣವನ್ನು ನಿಲ್ಲಸಬೇಕಾದ ಸಂದರ್ಭ ಎದುರಾಗಿತ್ತು.ಆದರೂ ಎದೆ ಗುಂದಲಿಲ್ಲ.ಉಡುಪಿಯ ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜ್ ಅಲ್ಲಿ ಬಿ. ಕಾಂ ಪೂರ್ಣಗೊಳಿಸಿದರು.ಅಪ್ಪನ ಆಕಸ್ಮಿಕ ಸಾವು, ಮನೆ ನೋಡಿಕೊಳ್ಳುವ ಜವಾಬ್ದಾರಿಯಿಂದ ಪದವಿ ಓದುತ್ತಿರುವಾಗಲೇ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಸತತ ಪರಿಶ್ರಮ ಇಂದು ಇವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.
ಅವಮಾನ , ಚುಚ್ಚು ಮಾತುಗಳು, ತಾರತಮ್ಯ,ಇವುಗಳು ಇವರನ್ನು ಬಿಟ್ಟಿಲ್ಲ.ಆದರೆ ತೇಜೇಶ್ ಎಲ್ಲವನ್ನೂ ಮೆಟ್ಟಿ ನಿಂತು ಮುಂದೆ ಸಾಗುತ್ತಿದ್ದಾರೆ." ತನ್ನೊಂದಿಗೆ ಚೆನ್ನಾಗಿ ಇದ್ದು ಹಿಂದೆ ಮಾತನಾಡುವರ ಬಗ್ಗೆ ಗೊತ್ತಿದ್ದೂ ಸುಮ್ಮನಿರುವುದು ಒಳಿತು.ಅದನ್ನು ಬಿಟ್ಟು ನಾವು ಅವರ ಮಟ್ಟಕ್ಕೆ ಇಳಿದು ಮಾತನಾಡಿದರೆ ನಮಗೂ ಅವರಿಗೆ ವ್ಯತಾಸ್ಯ ಇರಲ್ಲ" ಅನ್ನುವುದು ಇವರ ಮಾತು.
ಮಗನಿಗೆ ಸಿಕ್ಕಿರುವ ಪ್ರಶಸ್ತಿಗಳ ಬಗ್ಗೆ ತಾಯಿಗೆ ಖುಷಿ ಇದೆ.ಸದಾ ಬೆಂಬಲ ನೀಡುವ ತಾಯಿ ಇವರಿಗೆ ಸ್ಪೂರ್ತಿ.ಸಾಧನೆಯಲ್ಲಿ ಬೆಂಬಲವಾಗಿರುವ ತಾಯಿ,ಊರಿನವರು, ಸಂಬಂಧಿಕರ ಸಹಾಯಕ್ಕೆ ತೇಜೇಶ್ ಕೃತಜ್ಞರು.ಎಷ್ಟು ಎತ್ತರಕ್ಕೆ ಬೆಳೆದರು ಕೂಡ ಹಮ್ಮು ಬಿಮ್ಮು ಇಲ್ಲದ ವ್ಯಕ್ತಿತ್ವ ತೇಜೇಶರದ್ದು.ಸರಳ ಜೀವನ ಉನ್ನತ ಚಿಂತನೆ ಎನ್ನುವಂತೆ ಇರುವವರು. ಯಾರೇ ಹೋದರು ಎಲ್ಲರ ಬಳಿ ನಗು ಮೊಗದಿಂದ ಮಾತನಾಡಿಸುವ ,ಇನ್ನೊಬ್ಬರ ಕಷ್ಟಕ್ಕೆ ನೆರವಾಗುವ ಸಹೃದಯಿ.ತಾನು ನಗುತ್ತಾ, ಎಲ್ಲರನ್ನೂ ನಗಿಸುವ ತನ್ನ ಸುತ್ತ ಮುತ್ತ ಸದಾ ನಗುವಿನ ವಾತಾವರಣ ಸೃಷ್ಟಿಸುವ ಹಸನ್ಮುಖಿ . ತಾನು ಮಾಡುವ ಕೆಲಸದಲ್ಲಿ ಏಕಾಗ್ರತೆಯಿಂದ ಖುಷಿ ಪಟ್ಟು ಕೆಲಸ ಮಾಡುವ ಸಕಲಕಲಾವಲ್ಲಭ ವಿಜೆ.ತೇಜೇಶ್ ಇನ್ನಷ್ಟು ಯಶಸ್ಸು ಸಾಧಿಸುವಂತೆ ಆಗಲಿ.
ನವ್ಯಶ್ರೀ ಶೆಟ್ಟಿ
Tags
ಲೇಖನ