ಹಿಂದೂ ಸಂಘಟನೆ ವಿರೋಧಿ ನಗರ ಠಾಣೆ ಪಿಎಸ್ಐ ರಾಘವೇಂದ್ರ ಅಮಾನತ್ತಿಗೆ ಭಜರಂಗದಳ ಆಗ್ರಹ

ಸಕಲೇಶಪುರ: ಹಲವು ಭ್ರಷ್ಟಚಾರ ಆರೋಪಗಳಲ್ಲಿ ಬಾಗಿಯಾಗಿರುವ ನಗರ ಠಾಣೆ ಪಿಎಸ್ಐ ರಾಘವೇಂದ್ರರವರನ್ನು ಕೂಡಲೆ ಅಮಾನತ್ತು ಮಾಡದಿದ್ದಲ್ಲಿ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಮುಖಂಡ ಮುರಳಿಕೃಷ್ಣ ಹಸಂತಡ್ಕ ಹೇಳಿದರು.
    ಪಟ್ಟಣದಲ್ಲಿ ತಾಲೂಕು ವಿಶ್ವಹಿಂದೂ ಪರಿಷದ್ ಹಾಗೂ ಭಜರಂಗದಳ ವತಿಯಿಂದ ನಗರ ಠಾಣೆ ಪಿಎಸ್ಐ ರಾಘವೇಂದ್ರ ವಿರುದ್ದ  ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಹಿಂದೂಗಳಿಗೆ ಗೋವು ಅತಿ ಪ್ರಾಮುಖ್ಯವಾಗಿದ್ದು ಗೋವನ್ನು ದೇವರ ರೂಪದಲ್ಲಿ ನೋಡುತ್ತಾರೆ. ಆದರೆ ಕೆಲವರು ಹಣಕ್ಕಾಗಿ ಗೋ ಹತ್ಯೆಯನ್ನು ಮಾಡುತ್ತಿದ್ದು ನಗರ ಠಾಣೆ ಪಿಎಸ್ಐ ಇದನ್ನು ತಡೆಗಟ್ಟುವ ಬದಲು ಗೋಹತ್ಯೆ ಮಾಡುವ ವ್ಯಕ್ತಿಗಳ ಜೊತೆ ಕೈಜೋಡಿಸಿ ಭಜರಂಗದಳ ಕಾರ್ಯಕರ್ತರ ಹೋರಾಟವನ್ನು ಹತ್ತಿಕ್ಕಲು ಸುಳ್ಳು ಪ್ರಕರಣಗಳನ್ನು ದಾಖಲು ಮಾಡುತ್ತಿರುವುದು ಖಂಡನೀಯವಾಗಿದೆ. ಗೋಹತ್ಯೆ ಮಾಡುವವರಿಗೆ ಬೆಂಬಲ ನೀಡಿ ಗೋಹತ್ಯೆ ತಡೆಯುವರಿಗೆ ಕಿರುಕುಳ ನೀಡುತ್ತಿರುವ ಪಿಎಸ್ಐ ರಾಘವೇಂದ್ರರವರನ್ನು ಕೂಡಲೆ ಅಮಾನತ್ತು ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.
  ಭಜರಂಗದಳ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ರಘು ಸಕಲೇಶಪುರ ಮಾತನಾಡಿ ನಾವು ಪೋಲಿಸ್ ಇಲಾಖೆ ವಿರುದ್ದ ಪ್ರತಿಭಟನೆ ಮಾಡುತ್ತಿಲ್ಲ. ತಾಲೂಕಿನಲ್ಲಿ ಗೋಹತ್ಯೆಯನ್ನು ತಡೆಗಟ್ಟುತ್ತಿರುವ ಗಿರೀಶ್ ರಂತಹ ಪೋಲಿಸ್ ಅಧಿಕಾರಿಗೆ ಗೌರವ ಕೊಡುತ್ತೇವೆ. ಆದರೆ ನಗರ ಠಾಣೆ ಪಿಎಸ್ಐ ರಾಘವೇಂದ್ರ ಅಕ್ರಮ ಮರಳುಗಾರಿಕೆ, ಇಸ್ಪೀಟ್ ಧಂಧೆ, ಗಾಂಜಾ ಧಂಧೆ, ಗೋಹತ್ಯೆಗಳನ್ನು ಮಾಡುವರ ಜೊತೆ ಹಣಕ್ಕಾಗಿ ಕೈಜೋಡಿಸಿದ್ದಾರೆ. ಇವರು ಬೇನಾಮಿಯಾಗಿ ಅಕ್ರಮ ಆಸ್ತಿ ಮಾಡಿದ್ದು ಕೂಡಲೆ ಇವರ ದೂರವಾಣಿ ಕರೆಗಳನ್ನು ತನಿಖೆ ಮಾಡಬೇಕು. ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವ ಇವರನ್ನು ಕೂಡಲೆ ಅಮಾನತ್ತು ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
   ಮಳೆ ಸುರಿದಿದ್ದರಿಂದ ಪ್ರತಿಭಟನಾ ಮೆರವಣಿಗೆ ರದ್ದಾಗಿ ಹೊಳೆ ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಸಭಾ  ಕಾರ್ಯಕ್ರಮ ಮಾಡಿ ಡಿ.ವೈ.ಎಸ್.ಪಿ ಗೋಪಿ ಹಾಗೂ ಆರಕ್ಷಕ ವೃತ್ತ ನಿರೀಕ್ಷಕ ಗಿರೀಶ್ ರವರಿಗೆ ಮನವಿ ಸಲ್ಲಿಸಲಾಯಿತು.
  ಈ ಸಂಧರ್ಭದಲ್ಲಿ ಭಜರಂಗದಳ ತಾಲೂಕು ಕಾರ್ಯವಾಹ ಶ್ರೀಜಿತ್ ಗೌಡ, ಸಹ ಕಾರ್ಯವಾಹ ಕಾರ್ತೀಕ್ ಸಂಘಟನೆಯ ಪ್ರಮುಖರಾದ ಕೌಶಿಕ್, ಮಣಿ, ಮನು , ಅಮೃತ್, ವಿ.ಎಚ್.ಪಿ ಮುಖಂಡರುಗಳಾದ ವಿಶ್ವನಾಥ್ , ಬಾಬುಜೀ ನಗರ್ ವಾಲ್ , ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಜೀತು ಮುಂತಾದವರು ಹಾಜರಿದ್ದರು.

Post a Comment

Previous Post Next Post