ಹಾಸನ: ಪ್ರಕೃತಿ ವಿಕೋಪದಿಂದ ವಾಸದ ಮನೆಯು ಹಾನಿಯಾಗಿದ್ದು, ಸರಕಾರದಿಂದ ಆಶ್ರಯ ಯೋಜನೆಯಡಿ ನಿವೇಶನ ಸಿಗುವವರೆಗೂ ತಾತ್ಕಲಿಕ ವ್ಯವಸ್ಥೆಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ರವರಿಗೆ ನೊಂದ ಕುಟುಂಬದಿಂದ ಮನವಿ ಮಾಡಿದರು.
ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಮಾಗೇರಿ ಗ್ರಾಮವು ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ವಾಸದ ಮನೆಗಳೆಲ್ಲಾ ಶಿಥಿಲಗೊಂಡಿದೆ. ವಾಸಕ್ಕೆ ಯೋಗ್ಯವಲ್ಲದೆ ಪ್ರಾಣ ಹಾನಿ ಆಗುವ ಸಂಭವ ಹೆಚ್ಚು ಇದೆ. ಕುಟುಂಬದಲ್ಲಿ ಒಟ್ಟು ನಾಲ್ಕು ಜನರು ವಾಸಮಾಡುತ್ತಿದ್ದ, ಪ್ರತಿದಿನ ಜೀವ ಭಯದಿಂದ ವಾಸ ಮಾಡಬೇಕಾಗಿದೆ ಎಂದರು. ಮಾಗೇರಿ ಗ್ರಾಮದ ಸರ್ವೆ ನಂ. 63 ರಲ್ಲಿ ತಾತ್ಕಲಿಕವಾಗಿ ಈಗ ವಾಸವಾಗಿ ಜೀವನ ಸಾಗಿಸಲಾಗುತ್ತಿದೆ. ಆದರೆ ಸ್ಥಳೀಯ ಜನರು ರಾಜಕೀಯ ಪ್ರೇರಿತವಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ಇಲ್ಲಸಲ್ಲದ ಆರೋಪ ಮತ್ತು ಹಿಂಸೆಯನ್ನು ಕೊಟ್ಟು ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವುದಾಗಿ ದೂರಿದರು.
ಮನೆ ಹಾನಿಯಾಗಿರುವುದರಿಂದ ತಾತ್ಕಲಿಕವಾಗಿ ಮತ್ತೊಂದು ಜಾಗದಲ್ಲಿ ವಾಸವಾಗಿದ್ದೇವೆ. ಸರಕಾರವು ಆಶ್ರಯ ಯೋಜನೆಯಲ್ಲಿ ನಿವೇಶನ ನೀಡಿದ ಬಳಿಕ ನಾವೇ ಸ್ವಯಂ ಪ್ರೇರಿತವಾಗಿ ಜಾಗ ಖಾಲಿ ಮಾಡಲು ಸಿದ್ದರಿದ್ದೇವೆ ಎಂದರು. ನಮಗೆ ಶಾಶ್ವತ ವ್ಯವಸ್ಥೆಯಾಗುವವರೆಗೂ ತಾತ್ಕಲಿಕ ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು. ಜೊತೆಗೆ ತಾತ್ಕಲಿಕವಾಗಿ ಮನೆ ನಿರ್ಮಿಸಿ ವಾಸ ಮಾಡುತ್ತಿರುವ ಜಾಗವು ಯಾವ ಸರಕಾರಿ ಶಾಲೆಗಳಿಗಾಗಲಿ, ಸಂಸ್ಥೆಗಳಿಗಾಗಲಿ ಹಾಗೂ ಸಾರ್ವಜನಿಕ ಉಪಯೋಗಕ್ಕೆ ಒಳಪಟ್ಟಿರುವುದಿಲ್ಲ ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿ ನಮ್ಮ ಸಮಸ್ಯೆ ಬಗ್ಗೆ ಗಮನ ನೀಡಿ ಕೂಡಲೇ ಬಗೆಹರಿಸುವಂತೆ ಮನವಿ ಮಾಡಿದರು.
ಇದೆ ವೇಳೆ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಎಂ.ಆರ್. ದಯಾನಂದ್, ರಾಜೇಗೌಡ, ರೈತ ಸಂಘದ ಮುಖಂಡರಾದ ಮಹಾಮದ್ ಸಾದೀಕ್, ಸುರೇಶ್ ಗೌಡ, ವಿನಯ್ ಗೌಡ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು
Tags
ಹಾಸನ