ನವ್ಯಶ್ರೀ ಶೆಟ್ಟಿ
ಒಂದೊಂದು ಕಡೆಗಳಲ್ಲಿ ಒಂದೊಂದು ವಿಶೇಷ ಆಚರಣೆಗಳು ಇರುತ್ತದೆ. ಅಂತಹದರಲ್ಲಿ ಕರಾವಳಿ ಭಾಗದಲ್ಲಿ ಮಹಾಲಯ ಅಮಾವಾಸ್ಯೆ ನಂತರ ಹಾಗೂ ನವರಾತ್ರಿ ಸಮಯದಲ್ಲಿ ಆಚರಿಸುವ ಕೊರಲ್ ಕಟ್ಟುವ ಹಬ್ಬ ಅಥವಾ ಹೊಸ್ತು ಕೂಡ ಒಂದು.
ಹೆಚ್ಚಾಗಿ ಈ ಹಬ್ಬವನ್ನು ನವರಾತ್ರಿ ಸಮಯದಲ್ಲಿ ಆಚರಿಸುತ್ತಾರೆ .
ಹಬ್ಬಕ್ಕೂ ಮುನ್ನ ಮನೆಯನ್ನು ಸ್ವಚ ಮಾಡುತ್ತಾರೆ. ಈ ಮೂಲಕ ಮನೆಯ ಎಲ್ಲ ಕಸ ಮನೆಯಿಂದ ಹೊರ ಹೊಗಲಿ ಎನ್ನುವುದು ಜನರ ಭಾವನೆ. ಜೊತೆಗೆ ಹಲವರಿಗೆ ಇದೆ ಹೊಸ ವರ್ಷ.
ಇನ್ನೇನು ದಸರಾ ಆರಂಭವಾಗಲಿದೆ .ಇಡೀ ನಾಡಿಗೆ ದಸರಾ ಒಂದು ರೀತಿಯ ದೊಡ್ಡ ಹಬ್ಬ. ಆ ದಸರಾ ಸಮಯದ ಒಂಬತ್ತು ದಿನಗಳು ಕರಾವಳಿಯ ಮಂದಿಗೆ ಇನ್ನೂ ವಿಶೇಷ. ಕರಾವಳಿಯಲ್ಲಿ ನವರಾತ್ರಿಯ ಆ ಒಂಬತ್ತು ದಿನಗಳು ವಿಶಿಷ್ಟ ಆಚರಣೆಗೆ ಸಾಕ್ಷಿಯಾಗುತ್ತದೆ.ಒಂಬತ್ತು ದಿನಗಳು ಕರಾವಳಿಯ ಮಂದಿ ವಿಶಿಷ್ಟ ಸಂಸ್ಕೃತಿ,ಸಂಪ್ರದಾಯ, ಆಚರಣೆಗೆ ಮುನ್ನುಡಿ ಬರೆಯುತ್ತಾರೆ.ಅದುವೇ ಮೌಲ್ಯಯುತ ಸಂಪ್ರದಾಯದ ಹಬ್ಬ' ಹೊಸ್ತು'.ಬೆಳಗಿನ ಜಾವ ಮುಸುಕಿನಲ್ಲಿ ಗದ್ದೆಗೆ ಹೋಗಿ ಕದಿರನ್ನು ತಂದು,ಮನೆಯ ಅಂಗಳದಲ್ಲಿ ಪೂಜೆ ಮಾಡಿ, ಮುಳ್ಳು ಸೌತೆ,ತೆಂಗಿನ ಸಾಂತ,ಮಾವಿನ ಮತ್ತು ಹಲಸಿನ ಎಲೆ.ಹಲ್ಕತ್ತಿಯನ್ನು ಹರಿವಾಣದಲ್ಲಿಟ್ಟುಕೊಂಡು ಮನೆಯ ಯಜಮಾನ ತಲೆಗೆ ಮುಂಡಾಸು ಕಟ್ಟಿಕೊಂಡು, ಜಾಗಂಟಿ ಬಾರಿಸುತ್ತಾ ಕದಿರನ್ನು ಪೂಜೆ ಮಾಡುತ್ತಿರುತ್ತಾನೆ.ಮನೆಯ ಯಜಮಾನನನ್ನು ಮನೆಯ ಹೆಣ್ಣು ಮಗಳು ಕಾಲು ತೊಳೆದು ಒಳಗೆ ಬರ ಮಾಡಿಕೊಳ್ಳುತ್ತಾಳೆ.ತದನಂತರ ಯಜಮಾನ ಮನೆಯ ಉಪಕರಣಗಳಿಗೆ ಕದಿರು ಕಟ್ಟುತ್ತಾನೆ.ಇದು ಹೊಸ್ತಿನ ದಿನದ ಆರಂಭದ ಸಂಪ್ರದಾಯ.
ತದನಂತರ ಆರಂಭವಾಗುವುದೇ ಮಧ್ಯಾಹ್ನದ ವಿಶೇಷ ಭೋಜನದ ತಯಾರಿ ಕಾರ್ಯಕ್ರಮ. ಅಂದಿನ ದಿನ ಒಂಬತ್ತು ವಿಧದ ಪಲ್ಯ ಮಾಡುವ ಪದ್ಧತಿ ರೂಢಿಯಲ್ಲಿದೆ. ಬೇರೆ ಬೇರೆ ತರಕಾರಿಯ ಪಲ್ಯ, ಹಪ್ಪಳ, ಕೋಸುಂಬರಿ,ಉಪ್ಪಿನಕಾಯಿ, ಅನ್ನ,ಸಾರು,ಹುಳಿ,ಪಾಯಸ ಮಜ್ಜಿಗೆ ಇವುಗಳೆಲ್ಲವೂ ಅಂದಿನ ಊಟದ ಮೆನ್ಯೂ.ಊರಿನ ಎಲ್ಲಾ ಮನೆಯವರು ಒಟ್ಟಿಗೆ ಒಂದು ದಿನ ಹೊಸ್ತನ್ನು ಮಾಡುತ್ತಾರೆ. ಆ ದಿನ ದೂರದೂರಿನ ಸಂಬಂಧಿಕರು ಮನೆಗೆ ಬರುತ್ತಾರೆ.ವಿಶೇಷವಾಗಿ ಹೊಸ್ತಿನ ದಿನ ಮನೆಯ ಸೊಸೆಗೆ ಆದ್ಯತೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿನೆ ಇರುತ್ತದೆ.ಆಕೆ ತನ್ನ ಅತ್ತೆ ಮಾವನ ಕಾಲಿಗೆ ನಮಸ್ಕರಿಸಿ ,ಮನೆಯ ಹಿರಿಯರೆಲ್ಲರ ಬಳಿ 'ಹೊಸ್ತು ಊಟ ಮಾಡುತ್ತೇನೆ'ಎಂದು ಹೇಳಿ ಊಟ ಮಾಡುವ ಪದ್ದತಿ ರೂಢಿಯಲ್ಲಿದೆ. ಮನೆಯ ಮಂದಿಯೆಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತಾ ,ಹಾಲಿಗೆ ಭತ್ತ ಮಿಶ್ರಣ ಮಾಡಿರುವುದನ್ನು ಊಟದ ಮಧ್ಯ ಹಾಕಿದಾಗ, ಅದನ್ನು ಸೇವಿಸಿದ ನಂತರ ಹೊಸ್ತಿನ ಊಟಕ್ಕೆ ಒಂದು ಪರಿಪೂರ್ಣತೆಯಿರುತ್ತದೆ.
ಭರ್ಜರಿಯಾಗಿ ಊಟ ಮುಗಿದ ನಂತರ ಮನೆಯ ಹಿರಿಯ ಕಿರಿಯರು ಎನ್ನುವ ಯಾವುದೇ ಭೇದ ಭಾವವಿಲ್ಲದೆ ಎಲೆ ಅಡಿಕೆ ತಿನ್ನುವುದು ವಾಡಿಕೆ.ಊಟ ಮಾಡಿ ಎಲೆ ಅಡಿಕೆ ಜಗಿಯುತ್ತಾ ,ಮನೆ ಮುಂದಿನ ಗದ್ದೆಯತ್ತ ಒಂದು ಕಣ್ಣಾಡಿಸಿ ಗದ್ದೆಯ ಬಳಿ ಸ್ವಲ್ಪ ಹೊತ್ತು ತಿರುಗಾಡಿ ಬರಬೇಕು ಆಗ ಹೊಸ್ತಿಗೆ ಪರಿಪೂರ್ಣ ಸಿಗುವುದು ಎನ್ಮುವುದು ಇಲ್ಲಿನ ನಂಬಿಕೆ.ಇನ್ನೂ ವಿಶೇಷವಾಗಿ ಆ ದಿನ ಊರಿನ 7ಮನೆಯಲ್ಲಿ ಊಟ ಮಾಡಿದರೆ ಒಳಿತು ಎನ್ನುವುದು ಹಿರಿಯ ನಂಬಿಕೆ.
ಹೀಗೆ ಸಂಪ್ರದಾಯದ ಆಚರಣೆಯಲ್ಲಿ ಆರಂಭವಾದ ಹೊಸ್ತು, ಸಂಬಂದಿಕರನ್ನು ಒಗ್ಗೂಡಿಸಿ, ಸಂಬಂಧಗಳನ್ನು ಗಟ್ಟಿಗೊಳಿಸುವ ಆಚರಣೆಯಾಗಿದೆ.ಅದಕ್ಕಾಗಿಯೇ ಕರಾವಳಿಗರು ದಸರಾ ಹಬ್ಬಕ್ಕೆ ಕಾತೂರದಿಂದ ಕಾಯುತ್ತಿರುತ್ತಾರೆ.
Tags
ಲೇಖನ