ಕೋಲುಮಂಡೆ ಜಂಗಮ ದೇವ ಹಾಡಿನ ವಿವಾದ ಮತ್ತು ಚಂದನ್ ಶೆಟ್ಟಿ

-ಅರಕಲಗೂಡು ಜಯಕುಮಾರ್

ರ್ಯಾಪ್ ಹಾಡುಗಳ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಕೋಲುಮಂಡೆ ಜಂಗಮ ದೇವ ಹಾಡಿನ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ರ್ಯಾಪ್ ಹಾಡುಗಳಿಂದ ಯುವ ಜನರ ಮನದಲ್ಲಿ ಸ್ಥಾನ ಪಡೆದಿರುವ ಅವರು ಈ ಮೊದಲು ಸರ್ಕಾರಿ ವೇದಿಕೆಯನ್ನು ಖಾಸಗಿ ಪ್ರೀತಿಯನ್ನು ವ್ಯಕ್ತಪಡಿಸಲು ದುರುಪಯೋಗ ಮಾಡಿಕೊಂಡರು ಎಂಬ ವಿವಾದಕ್ಕೆ ಸಿಲುಕಿದ್ದರು. ಈಗ ಮಲೈ ಮಹದೇಶ್ವರ ಸ್ವಾಮಿಗೆ ಸಂಬಂಧಿಸಿದ ‘ಕೋಲುಮಂಡೆ ಜಂಗಮ ದೇವ’ ಜಾನಪದ ಗೀತೆಯನ್ನು ವಿರೂಪಗೊಳಿಸಿದ್ದಾರೆ, ಹಾಗೂ ಶಿವಶರಣೆ ಸಂಕವ್ವೆಯ ಚಾರಿತ್ರ್ಯಕ್ಕೆ ಹಾನಿಯಾಗುವಂತೆ ಚಿತ್ರಿಸಲಾಗಿದೆ, ಮೂಲ ಹಾಡನ್ನು ತಿರುಚಲಾಗಿದೆ ಎಂಬುದು ಮಲೇ ಮಹದೇಶ್ವರ ಸ್ವಾಮಿಯ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಎರಡೂ ಪ್ರಕರಣಗಳಲ್ಲೂ ವಿಳಂಬವಿಲ್ಲದಂತೆ ಬೇಷರತ್ತಾಗಿ ಚಂದನ್ ಶೆಟ್ಟಿ ಕ್ಷಮೆ ಯಾಚಿಸಿದ್ದಾರೆ. 
ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿವಾದಿತ ಹಾಡನ್ನು ಆನಂದ್ ಆಡಿಯೋ ಯೂ ಟ್ಯೂಬ್ ಚಾನಲ್ ನಿಂದ ತೆಗೆದು ಹಾಕಿದೆ. ಆದರೆ ತೆಗೆದು ಹಾಕುವ ವೇಳೆಗಾಗಲೇ 3ಮಿಲಿಯನ್ ಗೂ ಅಧಿಕ ಮಂದಿಗೆ ಅದು ತಲುಪಿರುವುದರಿಂದ ಡಿಜಿಟಲ್ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಚಾಮರಾಜನಗರ ಹೊರತು ಪಡಿಸಿದ ಇತರೆಡೆಗಳಲ್ಲಿ ಹಾಡಿನ ದೃಶ್ಯ ಸಂಯೋಜನೆಯಲ್ಲಿ ಆಗಿದೆ ಎನ್ನಬಹುದಾದ ಅಪಚಾರ ಪ್ರಾಮುಖ್ಯತೆ ಪಡೆದಿಲ್ಲ. ಆದರೆ ಆ ಹಾಡನ್ನು ಹೊಸ ದಾಟಿಯಲ್ಲಿ ಕೇಳುವ ಖುಷಿಯನ್ನು ಅನುಭವಿಸುತ್ತಿದ್ದಾರೆ. ಬಹಳಷ್ಟು ಮಂದಿ ಅರೆ ಏನಾಗಿದೆ , ಹಾಡು ಚೆನ್ನಾಗಿದೆಯಲ್ಲ ಎನ್ನುತ್ತಿದ್ದಾರೆ. ಹಾಡಿನ ಫ್ಲೋನಲ್ಲಿ ಆಗಿರಬಹುದಾದ ಪ್ರಮಾದ ಗಮನಕ್ಕೆ ಬಂದಂತಿಲ್ಲ. 
ಜನಪದರ ಸಾಹಿತ್ಯ ಬಾಯಿಂದ ಬಾಯಿಗೆ ಬದಲಾಗಬಹುದು, ಆದರೆ ಮೂಲ ಸಂಗತಿಗೆ ಮಾತ್ರ ಧಕ್ಕೆಯಾಗುವುದಿಲ್ಲ. ಆದರೆ ವಿಭಿನ್ನ ಸ್ವರ ಸಂಯೋಜನೆಯಲ್ಲಿ ಹೊರ ಹೊಮ್ಮ ಬಹುದಷ್ಟೆ. ಕೋಲುಮಂಡೆ ಜಂಗಮ ದೇವ ಜನಪದ ಗೀತೆ ಪ್ರಾದೇಶಿಕ ಸೊಗಡಿನ ಸುಂದರವಾದ ಹಾಡು. ಮೊದಲಿಗೆ 1996ರಲ್ಲಿ ತೆರೆಗೆ ಬಂದ ಜನುಮದ ಜೋಡಿ ಸಿನಿಮಾದಲ್ಲಿ ಅಳವಡಿಕೆಯಾಗಿತ್ತು. ಎಲ್ ಎನ್ ಶಾಸ್ತ್ರಿ ಅದ್ಭುತವಾಗಿ ಹಾಡನ್ನು ಹಾಡಿದ್ದರು, ಸಂಗೀತ ನಿರ್ದೇಶಕ ವಿ ಮನೋಹರ್ ಸಂಗೀತ ಸಂಯೋಜಿಸಿದ್ದರು. ಅವತ್ತಿಗೆ ಚಲನ ಚಿತ್ರದ ಮೂಲಕ ಹೊಸ ರಾಗ ಸಂಯೋಜನೆಯಲ್ಲಿ ಈ ಹಾಡು ಪರಿಚಯವಾಗಿತ್ತು. ಅಲ್ಲಿಯವರೆಗೂ ಸ್ಥಳೀಯ ಸೊಗಡಿನಲ್ಲಿ ಹಾಡಲಾಗುತ್ತಿದ್ದ ಹಾಡಿಗೆ ಹೊಸ ರಾಗ ಸಂಯೋಜನೆ ಸಿಕ್ಕಿತ್ತು. ಪ್ರತಿಯೊಬ್ಬರು ಗುನುಗಿ ಕೊಳ್ಳುವಷ್ಟರ ಮಟ್ಟಿಗೆ ಈ ಜನಪದ ಗೀತೆ ಸಮಸ್ತರನ್ನು ಆವರಿಸಿತ್ತು. ಚಲನಚಿತ್ರದ ದೃಶ್ಯ ಸಂಯೋಜನೆಯೂ ಕೂಡ ಪ್ರಾದೇಶಿಕ ಕಲಾ ಪ್ರಕಾರದ ಮೂಲಕ ಅನುಕರಿಸುವಷ್ಟು ಜನಪ್ರಿಯತೆ ಪಡೆದಿತ್ತು. ಅದು ಕೋಲು ಮಂಡೆ ಜಂಗಮ ದೇವರ ಹಾಡಿನ ತಾಕತ್ತು ಕೂಡ. 

ಇಂತಹ ಹಾಡನ್ನು ಹೊಸ ಮಾದರಿಯ ಸಂಗೀತದ ಸ್ಪರ್ಶ ನೀಡಿದ ಚಂದನ್ ಶೆಟ್ಟಿ ವಿಡಿಯೋ ಆಲ್ಬಂ ಮಾಡಿದ್ದರು. ಗಣೇಶ ಚತುರ್ಥಿಯಂದು ಆನಂದ್ ಆಡಿಯೋ ಮೂಲಕ ರಿಲೀಸ್ ಮಾಡಿದ್ದರು. ಈ ಆಲ್ಬಂ ಸಾಂಗ್ ನಲ್ಲಿ ಮಯೂರಿ ಉಪಾಧ್ಯ ಅವರ ಕಾನ್ಸೆಪ್ಟ್ ಬಳಕೆಯಾಗಿದೆ. ಚಿನ್ನಿ ಮಾಸ್ಟರ್ ಕೊರಿಯಾಗ್ರಫಿ ಮಾಡಿದ್ದಾರೆ. ಇದೇ ಮೊದಲ ಭಾರಿಗೆ ಅಚ್ಚ ಕನ್ನಡದ ಹಾಡನ್ನು ಚಂದನ್ ಶೆಟ್ಟಿ ರ್ಯಾಪ್ ಸಾಂಗ್ ಮಾಡಿದ್ದಾರೆ. ಮಲೈ ಮಹದೇಶ್ವರ ಭಕ್ತರು ಗಮನಿಸುವವರೆಗೆ ವಿಡಿಯೋದಲ್ಲಿ ಆಗಿರುವ ಪ್ರಮಾದ ಅನೇಕರಿಗೆ ತಿಳಿದಿರಲಿಲ್ಲ ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿಗೆ ಚಂದನ್ ಶೆಟ್ಟಿ ಭೇಷ್ ಗಿರಿ ಪಡೆದಿದ್ದರು. ಬಿಡುಗಡೆಯಾದ ಮೂರೇ ದಿನಕ್ಕೆ 30ಲಕ್ಷ ವೀಕ್ಷಕರನ್ನು ಪಡೆದ ಹಾಡನ್ನು ಮುಂದೆ 3ಮಿಲಿಯನ್ ಗೂ ಅಧಿಕ ಜನ ವೀಕ್ಷಿಸಿ ಪ್ರತಿಕ್ರಿಯಿಸಿದ್ದರು. 
ಮಹಾಕಾವ್ಯದ ಭಾಗವಾಗಿರುವ ಈ ಹಾಡು ಶಿವಶರಣೆ ಸಂಕವ್ವೆಯವರನ್ನು ಅನುಮಾನದಿಂದ ನೋಡುವ ಆಕೆಯ ಗಂಡನ ಕುರಿತದ್ದಾಗಿದೆ. ಆದರೆ ಹಾಡಿನಲ್ಲಿ ಅದನ್ನು ವಾಸ್ತವ ಎಂಬಂತೆ ಚಿತ್ರಿಸಲಾಗಿದೆ. ಈ ಜಾನಪದ ಹಾಡು ಚಾಮರಾಜನಗರ ಸೇರಿದಂತೆ ಮಂಡ್ಯ, ಮದ್ದೂರು ಮತ್ತು ಮೈಸೂರು ಭಾಗಗಳಲ್ಲಿ ಜನಪ್ರಿಯವಾಗಿದೆ. ಇಂತಹ ಹಾಡಿಗೆ , ನಂಬಿಕೆಯ ಇತಿಹಾಸಕ್ಕೆ ಕಾಮುಕತೆಯ ಸ್ಪರ್ಶ ನೀಡುವುದು ಭಾವನೆಗೆ ಧಕ್ಕೆ ತಂದಂತೆ, ಆ ಕೆಲಸವನ್ನು ವಿಡಿಯೋ ಸಾಂಗ್ ನಲ್ಲಿ ಚಂದನ್ ಶೆಟ್ಟಿ ಮಾಡಿದ್ದಾರೆ. ಅಶ್ಲೀಲವಾಗಿ ಹಾಡನ್ನು ಚಿತ್ರೀಕರಿಸಿದ್ದಾರೆ. ಜಾನಪದ ದೇವರು ಮಲೈ ಮಹದೇವಸ್ವಾಮಿ ಇತಿಹಾಸ ತಿರುಚಿ ಹಾಡು ರಚಿಸಲಾಗಿದೆ. ಶರಣೆ ಸಂಕವ್ವೆಯವರನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂದು ಭಕ್ತರುಆರೋಪಿಸಿದ್ದಾರೆ. ತಮ್ಮ ಲಾಭಕ್ಕಾಗಿ ಚಂದನ್ ಶೆಟ್ಟಿ ಹಾಡನ್ನು ಚಿತ್ರಿಸಿ, ವಿಕೃತಿ ಮೆರೆದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಚಂದನ್ ಶೆಟ್ಟಿ ಮನೆ ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. 

ಮುಂದೆ ಅವರ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ. ಆನಂದ್ ಆಡಿಯೋ ಕಂಪನಿ ಇಂತಹ ಆಲ್ಬಂ ಹಾಡಿಗೆ ಉತ್ತೇಜನ ಕೊಟ್ಟಿರುವುದು ಸರಿಯಲ್ಲ. ಹಾಡನ್ನು ತಕ್ಷಣ ತೆಗೆಯಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆನಂದ್ ಆಡಿಯೋ ಕಂಪನಿ ಹಾಡನ್ನು ಡಿಲೀಟ್ ಮಾಡಿದೆ, ಚಂದನ್ ಶೆಟ್ಟಿಯೂ ಭೇಷರತ್ತಾಗಿ ಕ್ಷಮೆ ಕೇಳಿದ್ದಾರೆ. ಆದರೆ ಈಗಾಗಲೇ ಸದರಿ ಆಲ್ಬಂನಿಂದ ಆಗಿರ ಬಹುದಾದ ನೋವನ್ನು ಅದು ತುಂಬಿಕೊಡಲು ಸಾಧ್ಯವೇ ಇಲ್ಲ ಏಕೆಂದರೆ ಹಾಡನ್ನು ಅಧಿಕೃತವಾಗಿ ಡಿಲೀಟ್ ಮಾಡಿರ ಬಹುದು, ಆದರೆ ಲಕ್ಷಾಂತರ ಮಂದಿ ಆ ಹಾಡನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಪರಸ್ಪರ ಷೇರ್ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳು ಸಾಂಸ್ಕೃತಿಕ ಲೋಕದಲ್ಲಿ ಮರುಕಳಿಸ ಬಾರದು. 
--
ಬಾಕ್ಸ್ ಐಟಂ:
ಚಂದನ್ ಶೆಟ್ಟಿ ಹಾಸನ ಜಿಲ್ಲೆಯ ಶಾಂತಿಗ್ರಾಮದವರು. ಪದವಿ ಶಿಕ್ಷಣ ಮುಗಿದ ನಂತರ ಕಟ್ಟಿಕೊಂಡ ಸಂಗೀತದ ಕನಸನ್ನು ಸಾಕಾರಗೊಳಿಸಿ ಕೊಳ್ಳಲು ರಾಜಧಾನಿ ಸೇರಿದರು. ಮೂಲತ: ಅವರು ಸಂಗೀತಗಾರರು ಅಲ್ಲ , ಆದರೆ ಶ್ರದ್ದೆ, ಪರಿಶ್ರಮ ಹಾಗೂ ವಿಭಿನ್ನ ಆಲೋಚನೆಗಳ ಮೂಲಕ ಸಂಗೀತದ ಹೊಸ ಆಯಾಮವನ್ನು ರೂಢಿಸಿಕೊಂಡರು. ವೆಸ್ಟ್ರನ್ ಶೈಲಿಯ ಸಂಗೀತ ಸಂಯೋಜನೆ, ಗಾಯನ ಎರಡನ್ನು ಸಿದ್ದಿಸಿಕೊಂಡ ದೇಸಿ ಪ್ರತಿಭೆ ಚಂದನ್ ಶೆಟ್ಟಿ. 

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಸಂಗೀತದ ಎಬಿಸಿಡಿ ಕಲಿತ ಚಂದನ್ ಶೆಟ್ಟಿ, ಅನೇಕ ಸಿನಿಮಾಗಳಿಗೆ ಟ್ರಾಕ್ ಸಿಂಗರ್ ಆದರು, ಸಂಗೀತ ಸಂಯೋಜನೆಯ ಸಹಾಯಕರಾಗಿ ದುಡಿದರು. ಇಂತಹ ವೇಳೆಯಲ್ಲೇ ರ್ಯಾಪ್ ಸಂಗೀತದ ಆಲ್ಬಂಗಳನ್ನು ಮಾಡಿದರು. “ಹಾಳಾಗೋದೆ” , “ ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ತಿರುಗಿದೆ” , ಚಾಕೊಲೇಟ್ ಗರ್ಲ್, ಪಕ್ಕ ಚಾಕೊಲೇಟ್ ಗರ್ಲ್, ಟೆಕ್ಕಿಲಾ ಮತ್ತು ಪೈರ್ ಸಾಂಗ್ ಗಳು ಅವರನ್ನು ಯುವಜನರ ಮನದಲ್ಲಿ ಸ್ಥಾಪನೆ ಮಾಡಿದವು. 
ಕನ್ನಡದಲ್ಲಿ ಇಂತಹ ಪ್ರಯೋಗ ಮಾಡಿದವರು ಕಡಿಮೆ. ಯುವಜನರ ಆಸೆ, ಮನಸ್ತಿತಿಯನ್ನ ಅರಿತ ಚಂದನ್ ಶೆಟ್ಟಿ ಅದನ್ನೇ ರ್ಯಾಪ್ ಸಂಗೀತಕ್ಕೆ ಅಳವಡಿಸಿ ಹಾಡಿದಾಗ ಅದುವರೆಗೂ ರ್ಯಾಪ್ ಸಂಗೀತದಲ್ಲಿ ಇಂಗ್ಲೀಷ್ ಮತ್ತು ಹಿಂದಿ ಹಾಡುಗಳನ್ನಷ್ಟೆ ನೋಡಿದ್ದವರು, ಕನ್ನಡದ ಗೀತೆಗಳಿಗೆ ವೆಸ್ಟರ್ನ್ ಸ್ಪರ್ಶ ಸಿಕ್ಕಾಗ ಕುಣಿದು ಕುಪ್ಪಳಿಸಿದರು. ಅಂತಹ ಹಾಡುಗಳಿಗೆ ವೆಸ್ಟರ್ನ್ ಶೈಲಿಯಲ್ಲೇ ಅದ್ದೂರಿತನವನ್ನು ಕೂಡ ಚಂದನ್ ಶೆಟ್ಟಿ ತಂದರು. ಹಾಗಾಗಿಯೇ ದೇಶ-ವಿದೇಶಗಳಲ್ಲಿ ಕಾರ್ಯಕ್ರಮ ನೀಡಿ ಚಿಕ್ಕ ವಯಸ್ಸಿಗೆ ದೊಡ್ಡ ಹೆಸರು ಮಾಡಿದರು.  ಕಿರುತೆರೆಯ ಬಿಗ್ ಬಾಸ್ ವಿನ್ನರ್ ಆದರು, ಹೊಸ ಸಿನಿಮಾಗಳ ನಾಯಕನಾಗಿ ಸಹಿ ಹಾಕಿದರು. ಇತ್ತೀಚೆಗೆ ಭಾರಿ ಸದ್ದು ಮಾಡಿರುವ ‘ಪೊಗರು’ ಸಿನಿಮಾಗೆ ಹಾಡು ಹಾಡಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದರು. 

ಸಾಧನೆಯ ಹೆಜ್ಜೆಗಳನ್ನಿಡುವಾಗ ಎಚ್ಚರ ತಪ್ಪಬಾರದು. ಪದೇ ಪದೇ ಕ್ಷಮೆ ಕೇಳುವುದು ದೊಡ್ಡ ಸಂಗತಿಯಲ್ಲ. ಕ್ಷಮೆ ಕೇಳುವವರೆಗೆ ಆದ ಡ್ಯಾಮೇಜನ್ನು ಯಾವ ಕ್ಷಮೆಯೂ ತುಂಬಿ ಕೊಡಲಾರದು. ಕಲೆಗೆ ವಿಭಿನ್ನ ಆಯಾಮಗಳಿವೆ ಆದರೆ ಅದನ್ನು ಪ್ರಸ್ತುತ ಪಡಿಸುವಾಗ ಮೂಲಕ್ಕೆ ಧಕ್ಕೆಯಾಗದಂತೆ, ಭಾವನೆಗಳಿಗೆ ಕೆಡುಕಾಗದಂತೆ ಚಂದನ್ ಶೆಟ್ಟಿ ಮುಂದಿನ ಹೆಜ್ಜೆಗಳನ್ನಿಡಲಿ.

Post a Comment

Previous Post Next Post