ಹಾಸನ: ಜಿಲ್ಲೆಯಲ್ಲಿ ಆಗ್ಗಿಂದಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ನಷ್ಟವಾಗಿರುವ ಮೆಕ್ಕೆಜೋಳ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ 2,40,115 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಇದರ ಅಂದಾಜು ಉತ್ಪಾದನೆ 6 ಲಕ್ಷ ಟನ್ ಆಗಲಿದೆ. ಆದರೆ ಜಿಲ್ಲೆಯ ಬಹುತೇಕ ಕಡೆ ಸುರಿಯುತ್ತಿರುವ ಜೋರು ಮಳೆಯಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆ ರೈತರ ಕೈ ಸೇರದಂತಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಬೆಳೆದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹವಾಗಿದ್ದು, ಇದಕ್ಕೆ ರಾಜ್ಯ ಸರ್ಕಾರ ಮನ್ನಣೆ ಕೊಡಬೇಕು ಎಂದು ರಘು ಆಗ್ರಹಿಸಿದ್ದಾರೆ.
ಈಗಾಗಲೇ ಜಿಲ್ಲೆಯ ಹಲವು ಕಡೆ ಮೆಕ್ಕೆಜೋಳ ಕಟಾವಿಗೆ ಬಂದಿದೆ. ಕೆಲವು ರೈತರು ಈಗಾಗಲೇ ಜೋಳವನ್ನು ಹದಗೊಳಿಸಿದ್ದರೂ, ಅದನ್ನು ಒಣಗಿಸಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವೆಡೆ ಮಳೆ ಜೋರಾಗಿರುವುದರಿಂದ ಮೆಕ್ಕೆ ಜೋಳ ಕಟಾವು ಮಾಡಲು ಆಗುತ್ತಿಲ್ಲ. ಇದರಿಂದ ಮೆಕ್ಕೆಜೋಳ ಬೆಳೆದ ಜಮೀನಿನಲ್ಲೇ ಮೊಳಕೆ ಒಡೆಯುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ ಬೆಲೆ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಬೆಳೆದಿರುವ ಮೆಕ್ಕೆಜೋಳವನ್ನು ಮಾರಾಟ ಮಾಡಲು ದಾರಿ ಕಾಣದಂತಾಗಿದ್ದು, ಹಾಸನದ ಪಶು ಆಹಾರ ಉತ್ಪಾದನಾ ಘಟಕದಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಂಕ್ರಾಂತಿಗೂ ಮುನ್ನವೇ, ಪ್ರಮುಖ ಆಹಾರ ಬೆಳೆಯ ಬೆಲೆ ಕಡಿಮೆಯಾಗಿದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಳದ ನಡುವೆಯೂ ಮೆಕ್ಕೆಜೋಳ ಬೆಳೆದಿರುವ ರೈತರಿಗೆ ಕಷ್ಟವಾಗಲಿದೆ.
ಈ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಒಂದು ಕಡೆ ಅನ್ನದಾತನಿಗೆ ಸಾಲದ ಹೊರೆ ಹೆಚ್ಚುತ್ತಿದೆ. ಮತ್ತೊಂದು ಕಡೆ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರೈತರು ಬದುಕು ನಡೆಸುವುದೇ ಕಷ್ಟವಾಗಿದೆ.
ಹೀಗಾಗಿ ಜಿಲ್ಲೆಯ ರೈತರು ಬೆಳೆದಿರುವ ಮೆಕ್ಕೆಜೋಳವನ್ನು ನಮ್ಮ ಜಿಲ್ಲೆಯಲ್ಲೇ ಇರುವ ಪಶು ಆಹಾರ ಉತ್ಪಾದನಾ ಘಟಕದ ವತಿಯಿಂದ ನೇರವಾಗಿ ರೈತರಿಂದಲೇ ಖರೀದಿ ಮಾಡುವ ಮೂಲಕ ಮಣ್ಣಿನ ಮಕ್ಕಳ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮೆಕ್ಕೆಜೋಳ ಖರೀದಿಸಲು ಕೂಡಲೇ ಹೋಬಳಿವಾರು ಖರೀದಿ ಕೇಂದ್ರ ತೆರೆಯಬೇಕು. ಹಾಗೆಯೇ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ೧೮೦೦ ರೂ. ಬೆಲೆ ನಿಗದಿಪಡಿಸಬೇಕು ಎಂದು ರಘು ಒತ್ತಾಯಿಸಿದ್ದಾರೆ.
Tags
ಹಾಸನ