ಬೇಲೂರು.ಅ.16 : ತಾಲ್ಲೂಕಿನ ಮಲೆನಾಡು ಪ್ರದೇಶಗಳಾದ ಅರೇಹಳ್ಳಿ,ಬಿಕ್ಕೋಡು,ಚೀಕನಹಳ್ಳಿ ಇನ್ನು ಮುಂತಾದ ಭಾಗದಲ್ಲಿ ಆನೆ ಹವಾಳಿ ಹೆಚ್ಚಾಗಿ ರೈತಾಪಿ ವರ್ಗ ಕಷ್ಟ-ಪಟ್ಟು ಬೆಳೆಯ ಫಸಲು ಆನೆಗಳ ದಾಳಿಯಿಂದ ನೆಲ ಕಚ್ಚಿದೆ. ಸರ್ಕಾರ ಬೆಳೆ ನಷ್ಟವನ್ನು ಭರಿಸಬೇಕು ಹಾಗೂ ಗಗನ ಕುಸುಮವಾಗಿರುವ ಆನೆ ಕಾರಿಡಾರ್ ಯೋಜನೆ ನಿರ್ಮಿಸಿಲು ಮುಂದಾಗಬೇಕು. ಕೃಷಿಕರ ಹಿತ ಕಾಯಲು ಸರ್ಕಾರ ರಾಜಕಾರಣ ಮಾಡಬಾರದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ತಾಲ್ಲೂಕಿನ ಶಿರಗೂರು,ಚೀಕನಹಳ್ಳಿ ಬಳಿ ಆನೆ ದಾಳಿಯಿಂದ ಬೆಳೆ ನಷ್ಟದ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೆಚ್.ಡಿ.ಕುಮಾರಸ್ವಾಮಿರವರ ಸಮಿಶ್ರಸರ್ಕಾರವಿದ್ದ ಸಂದರ್ಭದಲ್ಲಿ ಸಕಲೇಶಪುರದಲ್ಲಿ ಆನೆ ಕಾರಿಡಾರ್ ಯೋಜನೆ ಕಾರ್ಯರೂಪಕ್ಕೆ ತರಬೇಕು ಎಂದು ಬೃಹತ್ ಪ್ರತಿಭಟನೆ ನಡೆಸಿದ್ದರು. ಸದ್ಯ ಪ್ರತಿಭಟನೆ ನಡೆಸಿದ ಮುಖಂಡರ ಸರ್ಕಾರವೇ ಕೇಂದ್ರ ಮತ್ತು ರಾಜ್ಯದಲ್ಲಿದ್ದು ಆನೆ ಕಾರಿಡಾರ್ ಯೋಜನೆ ರೂಪಿಸಲಿ ಎಂದು ಛೇಡಿಸಿದ ಅವರು ಸರ್ಕಾರ ಮಲೆನಾಡು ಭಾಗದ ಕೃಷಿಕರನ್ನು ಮಲತಾಯಿ ದೋರಣೆಯಿಂದಲೇ ನೋಡುತ್ತಾ ಬಂದಿದೆ. ಕಳೆದ ಎರಡು ವರ್ಷದಿಂದ ತಾಲ್ಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಇಲ್ಲಿನ ರೈತ ನಿಜಕ್ಕೂ ಹೀನಸ್ಥಿತಿಯಿಂದ ಬೇಸಾಯವೇ ಸಾಕಪ್ಪಾ ಎನ್ನುತ್ತಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರವನ್ನು ವೈಜ್ಞಾನಿಕವಾಗಿ ನೀಡುವ ಮೂಲಕ ಆತನಿಗೆ ಆತ್ಮವಿಶ್ವಾಶ ಮೂಡಿಸಬೇಕಿದೆ. ಈಗಾಗಲೇ ಕೇಂದ್ರ ಸರ್ಕಾರ ಈ ಭಾಗದಲ್ಲಿ ಸುಮಾರು 70 ಕೀಮಿ ರೈಲ್ವೆ ಹಳಿಗಳನ್ನು ಅಳವಡಿಸುವ ಬಗ್ಗೆ ತಿಳಿಸಿದ್ದು, ಅತೀ ಶೀಘ್ರದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದರೇ ಮಾತ್ರ ಆನೆಗಳ ಹವಾಳಿಗೆ ಕಡಿವಾಣ ಹಾಕಬಹುದು. ವನ್ಯಜೀವಿ ಮತ್ತು ಮಾನವ ಸಂಘರ್ಷದಿಂದ ವನ್ಯಜೀವಿ ಸಂಪತ್ತು ದಿನ ಕಳೆದಂತೆ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಮಾನವ ಕಾಡು ಕಡಿಯುವ ಸಂಪ್ರದಾಯದಿಂದ ಹೊರ ಬಂದು ವನ್ಯಜೀವಿಗಳಿಗೆ ಪೂರಕ ಪರಿಸರವನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಕಳೆದ ಐದಾರು ದಿನದಿಂದ ಬೇಲೂರು ತಾಲ್ಲೂಕಿನ ಶಿರಗೂರು,ಚೀಕನಹಳ್ಳಿ, ಬ್ಯಾದನೆ, ತುಂಬದೇವರಹಳ್ಳಿ,ಸೋಮನಹಳ್ಳಿ, ಅಣ್ಣಮಲ್ಯೆ ಎಸ್ಸೇಟ್,ಹಿರಿಕೋಲೆ, ಸನ್ಯಾಸೀಹಳ್ಳಿ, ಬಿಟ್ರುವಳ್ಳಿ ಸೇರಿದಂತೆ ಬೇಲೂರು ಪಟ್ಟಣದ ಬಳಿಯೇ ಆನೆಗಳ ಸಂಚಾರ ಮಾಡಿದ ಪರಿಣಾಮದಿಂದ ಜನರಿಗೆ ಸಹಜವಾಗಿ ಭೀತಿ ಉಂಟಾಗಿದೆ. ಸಾರ್ವಜನಿಕರು ಮೊಬೈಲ್ ಮೂಲಕ ವಿಡಿಯೋ ಮತ್ತು ಪೋಟೋ ತೆಗೆಯಲಿ ಹತ್ತಿರ ಧಾವಿಸಬಾರದು. ಈಗಾಗಲೇ ಕಾಫಿ, ಮೆಣಸು,ಬಾಳೆ, ತೆಂಗು, ಭತ್ತ ಸೇರಿದಂತೆ ಹತ್ತಾರು ಬೆಳೆ ನಷ್ಟದ ಬಗ್ಗೆ ಅರಣ್ಯ ಇಲಾಖೆ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಪರಿಶೀಲನೆ ನಡೆಸಿ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ನೇರ ಜಮೆ ಮಾಡುತ್ತಾರೆ ಈ ಬಗ್ಗೆ ರೈತರಿಗೆ ಯಾವ ಸಂಶಯ ಬೇಡ, ರೈತರ ಪರಿಹಾರದ ಹಣವನ್ನು ವೈಜ್ಞಾನಿಕ ರೂಪದಲ್ಲಿ ನೀಡಲು ನಾನು ಉನ್ನತ ಅಧಿಕಾರಿಗಳಲ್ಲಿ ಮಾತನಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅರೇಹಳ್ಳಿ ನಟರಾಜ್, ಅರಣ್ಯ ವಲಯಾಧಿಕಾರಿ ಯೆಷ್ಮಾ ಮಾಚಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಸೋಮಯ್ಯ, ಕೇಶವಮೂರ್ತಿ, ಸವೀನ್ ರೈತರಾದ ನಿಂಗಯ್ಯನ ದ್ಯಾವಯ್ಯ ಇನ್ನು ಮುಂತಾದವರು ಹಾಜರಿದ್ದರು.