ಕೆ.ಆರ್.ಪೇಟೆ,ಅ.16: ನಮ್ಮ ಕೆರೆ-ಕಟ್ಟೆಗಳನ್ನು ಹೂಳೆತ್ತಿಸಿ ಅಭಿವೃದ್ಧಿ ಕೈಗೊಂಡರೆ ನಮ್ಮ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರಿಗಿಂತ ಹೆಚ್ಚು ನೀರನ್ನು ಕೆರೆಗಳಲ್ಲಿ ಸಂಗ್ರಹಿಸಿಕೊಳ್ಳಬಹುದು ಅಲ್ಲದೆ ಕಾವೇರಿ ನೀರಿನ ಪ್ರಾಂತ್ಯದಲ್ಲಿ ಹೊಸ ನೀರಿನ ಯೋಜನೆಗೆ ಅಡ್ಡಿಯಾಗಿರುವ ನ್ಯಾಯಾಧೀಕರಣದ ಸಮಸ್ಯೆಗೆ ಪರಿಹಾರ ರೂಪಿಸಬಹುದು. ಈ ಹಿನ್ನೆಲೆಯಲ್ಲಿ ಕೆರೆ-ಕಟ್ಟೆಗಳನ್ನು ಉಳಿಸಿ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಆಯಾಯ ಗ್ರಾಮಗಳ ಮುಖಂಡರು ತೆಗೆದುಕೊಳ್ಳಬೇಕು ಎಂದು ಮಂಡ್ಯ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ಅವರು ಹೇಳಿದರು.
ಅವರು ತಾಲೂಕಿನ ಗಂಜಿಗೆರೆಕೊಪ್ಪಲು ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ದೇವಿಕೆರೆ ಅಭಿವೃದ್ಧಿ ಸಮಿತಿ, ಗಂಜಿಗೆರೆ ಗ್ರಾಮ ಪಂಚಾಯಿತಿ, ಹೇಮಾವತಿ ಜಲಾಶಯ ನೀರಾವರಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಮ್ಮೂರು-ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಸುಮಾರು 16ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೂಳೆತ್ತಿ, ರಸ್ತೆ ಬದಿಯ ಕೆರೆ ದಡವನ್ನು ನಿರ್ಮಿಸಿ, ಪುನಶ್ಚೇತನಗೊಳಿಸಿ, ಹೇಮಾವತಿ ನೀರು ತುಂಬಿಸಿದ ದೇವೀಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಹಾಗೂ ಗಂಗಾ ಪೂಜೆ-ಕೆರೆಗೆ ಬಾಗೀನ ಅರ್ಪಣೆ ಕಾರ್ಯಕ್ರಮ, ಕೆರೆ ಅಭಿವೃದ್ಧಿಗೆ ಶ್ರಮಿಸಿದ ಕೆರೆ ಅಭಿವೃದ್ಧಿಗೆ ಗಣ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾವೇರಿ ಅಚ್ಚಕಟ್ಟು ಪ್ರದೇಶದಲ್ಲಿ ಯಾವುದೇ ಹೊಸ ನೀರಾವರಿ ಯೋಜನೆ ರೂಪಿಸಬೇಕಾದರೂ ಅದಕ್ಕೆ ಕಾವೇರಿ ನ್ಯಾಯಾಧೀಕರಣದ ಅನುಮತಿ ಬೇಕಾಗಿರುತ್ತದೆ. ಹಾಗಾಗಿ ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲು ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕಾವೇರಿ ಅಚ್ಚಕಟ್ಟು ಪ್ರದೇಶದಲ್ಲಿರುವ ಸಾವಿರಾರು ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಈ ಕೆರೆಗಳಲ್ಲಿ ಹೇಮಾವತಿ ಜಲಾಶಯ, ಕೆ.ಆರ್.ಎಸ್.ಜಲಾಶಯ, ಕಬಿನಿ ಜಲಾಶಯ ಸೇರಿದಂತೆ ವಿವಿಧ ಜಲಾಶಯಗಳಲ್ಲಿ ಸಂಗ್ರಹವಾಗುವುದಕ್ಕಿಂತ ಹೆಚ್ಚಿನ ಟಿ.ಎಂ.ಸಿ ನೀರನ್ನು ಸಂಗ್ರಹಿಸಿಕೊಳ್ಳಬಹುದಾಗಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ಕೆರೆಗಳ ಪುನಶ್ಚೇತನಕ್ಕೆ ಅಗತ್ಯ ಅನುಧಾನ ನೀಡಬೇಕು ಈ ಮೂಲಕ ಕಾವೇರಿ ಕೊಳ್ಳದ ರೈತರ ನೀರಿನ ಭವಣೆಯನ್ನು ಹೋಗಲಾಡಿಸಬೇಕು ಎಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನಮ್ಮ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡರು ಕೆರೆಗಳ ಅಭಿವೃದ್ಧಿಗೆ ಕಾಳಜಿ ವಹಿಸಿದ್ದು, ಅವರ ಅಧಿಕಾರದ ಅವಧಿಯಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಲಿದ್ದಾರೆ. ಈ ಬಗ್ಗೆ ನಾವೂ ಸಹ ಸಚಿವರೊಂದಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರಮುಖವಾಗಿ ಉತ್ತಮ ನೀರು, ಗಾಳಿ, ಬೆಳಕು ಬೇಕು, ರೈತರ ಅಭಿವೃದ್ಧಿಗೆ ನೀರು ಅಗತ್ಯವಾಗಿ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೆರೆ-ಕಟ್ಟೆಗಳ ಅಭಿವೃದ್ಧಪಡಿಸುವುದರಿಂದ ನೀರಿಲ್ಲದೇ ಪಾತಾಳಕ್ಕೆ ಹೋಗಿರುವ ಅಂತರ್ಜಲ ವೃದ್ದಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆರೆ-ಕಟ್ಟೆಯಲ್ಲಿ ತುಂಬಿರುವ ಹೂಳನ್ನು ತೆಗೆದು ಕೆರೆಗಳ ಪುನರುಜ್ಜೀವನಕ್ಕೆ ಧರ್ಮಸ್ಥಳ ಧರ್ಮಧಿಕಾರಿಗಳಾದ ಪದ್ಮಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಲ್ಲಿ 198ಕೆರೆಗಳ ಹೂಳನ್ನು ತೆಗೆಸಿ ಕೆರೆಗಳನ್ನು ಪುನರುಜ್ಜೀವನಗೊಳಿಸಿ ಕೆರೆ ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಅದೇ ರೀತಿ ಇಂದು ಉದ್ಘಾಟನೆಯಾದ ಗಂಜಿಗೆರೆಕೊಪ್ಪಲಿನ ದೇವಿಕೆರೆಯನ್ನು ಸಂಸ್ಥೆಯ ವತಿಯಿಂದ 8ಲಕ್ಷ ಹಾಗೂ ಗ್ರಾಮಸ್ಥರ ಕಡೆಯಿಂದ ಹೂಳು ಹೊರ ಸಾಗಿಸಲು ಸುಮಾರು 8 ಲಕ್ಷ ರೂ ವೆಚ್ಚ ಒಟ್ಟು 16ಲಕ್ಷ ರೂಗಳ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿಗೆ ಪಡಿಸಲಾಗಿದೆ. ಇದಕ್ಕೆ ಕೆರೆ ಅಭಿವೃದ್ಧಿ ಸಮಿತಿಯವರ ಪಾತ್ರ ಅಪಾರವಾಗಿತ್ತು. ಜೊತೆಗೆ ಕೆರೆ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಶ್ರೀ ಧರ್ಮಸ್ಥಳ ಸಂಸ್ಥೆಯು ಆಭಾರಿಯಾಗಿದೆ, ಈ 2020-21ಸಾಲಿನಲ್ಲಿ ಅಕ್ಕಿಹೆಬ್ಬಾಳು ಹೋಬಳಿಯ ದುಡುಕನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ ಎಂದು ಗಂಗಾಧರ ರೈ ತಿಳಿಸಿದರು.
ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ನಮ್ಮ ಹಿರಿಯರು ಲೋಕಕಲ್ಯಾಣಾರ್ಥವಾಗಿ ನಿರ್ಮಿಸಿರುವ ಕೆರೆ-ಕಟ್ಟೆಗಳು ಮಾನವನ ದುರಾಸೆಯಿಂದಾಗಿ ನಿವೇಶನಗಳಾಗಿ ಬದಲಾಗುತ್ತಿವೆ. ಕೆರೆಗಳು ಮಾಯವಾಗುತ್ತಿವೆಯಲ್ಲದೇ ನಮ್ಮ ಸ್ವಾರ್ಥ ಸಾಧನೆಯಿಂದಾಗಿ ಕೆರೆಗಳು ಒತ್ತುವರಿಯಾಗುತ್ತಿದ್ದು ನೀರಿನ ಮೂಲಗಳು ಮುಚ್ಚಿಹೋಗುತ್ತಿರುವ ಕಾರಣದಿಂದಾಗಿ ಕೆರೆಗಳು ಬರಿದಾಗಿ ಜಲಕ್ಷಾಮವು ಎದುರಾಗಿದೆಯಲ್ಲದೇ ಅಂತರ್ಜಲದ ಮಟ್ಟವು ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಪಾತಾಳಕ್ಕಿಳಿಯುತ್ತಿದೆ. 100-200ಅಡಿಗಳಷ್ಟು ಆಳದ ಬೋರ್ವೆಲ್ ಕೊರೆಸಿದರೆ ಸಿಗುತ್ತಿದ್ದ ನೀರು ಇಂದು ಒಂದು ಸಾವಿರ ಅಡಿಗಳಷ್ಟು ಆಳಕ್ಕೆ ಕೊರೆಸಿದರೂ ನೀರು ದೊರೆಯದಂತಹ ವಾತಾವರಣವು ನಿರ್ಮಾಣವಾಗಿದೆ. ಆದ್ದರಿಂದ ಜನಸಾಮಾನ್ಯರು ಹಾಗೂ ಗ್ರಾಮೀಣ ಜನರಿಗೆ ಜಲಸಾಕ್ಷರತೆಯ ಅರಿವು ಮೂಡಿಸಲು ನಮ್ಮೂರು ನಮ್ಮ ಕೆರೆ ಅಭಿಯಾನದ ಮೂಲಕ ನಾಡಿನಾಧ್ಯಂತ 198 ಕೆರೆಗಳ ಹೂಳನ್ನು ತೆಗೆಸಿ ಒಂದು ಸರ್ಕಾರವು ಮಾಡದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಂಸ್ಥೆಯು ಮಾಡುತ್ತಿರುವ ಶ್ಲಾಘನೀಯವಾದುದು, ತಾಲೂಕಿನಲ್ಲಿ ಯಾವುದೇ ಕೆರೆ-ಕಟ್ಟೆ ಅಭಿವೃದ್ಧಿಗೆ ಮುಂದಾದರೆ ಅದಕ್ಕೆ ಕಂದಾಯ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಅವರು ಆಶಯ ನುಡಿಗಳನ್ನಾಡಿದರು. ತಹಸೀಲ್ದಾರ್ ಎಂ.ಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಎಸ್.ಅಂಬರೀಶ್, ಮೈಸೂರು ಪ್ರೇಮ ಎಲೆಕ್ಟ್ರಿಕಲ್ಸ್ ಸಂಸ್ಥೆಯ ಮಾಲೀಕರಾದ ಡಾ.ಬಿ.ಸಿ.ಮಂಜುನಾಥ್ ಬೂಕಹಳ್ಳಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀಸ್ವಾಮಿನಾಯಕ್, ಸಚಿವರ ಆಪ್ತ ಕಾರ್ಯದರ್ಶಿ ದಯಾನಂದ್, ಹೇಮಾವತಿ ನೀರಾವರಿ ಇಲಾಖೆಯ ಬೂಕನಕೆರೆ ವಿಭಾಗದ ಎಇಇ ದೇವೇಗೌಡ, ಇಂಜಿನಿಯರ್ ಬಸವೇಗೌಡ, ಗಂಜಿಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಎಸ್.ರವಿಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಮತಾಶೆಟ್ಟಿ, ಕೃಷಿ ಅಧಿಕಾರಿ ನಿಂಗಪ್ಪ ಅಗಸರ್, ಕೆರೆ ಸಂರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಗೌಡ, ಉಪಾಧ್ಯಕ್ಷ ಕಾಳೇಗೌಡ, ಎಂ.ಮಹಾದೇವ್, ಕೋಶಾಧಿಕಾರಿ ಗಂಜಿಗೆರೆಕೊಪ್ಪಲು ರೇವಣ್ಣಗೌಡ, ಸದಸ್ಯರಾದ ಬೂಕಹಳ್ಳಿ ಕೊಪ್ಪಲು ರೇವಣ್ಣೇಗೌಡ, ಪಾಪೇಗೌಡ, ಬಿ.ಬಿ.ಜಯಪ್ಪ, ಕೆ.ಟಿ.ಕುಮಾರಸ್ವಾಮಿ, ಎಪಿಎಂಸಿ ನಿರ್ದೇಶಕ ಹೊಸೂರು ಸೋಮಣ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜವರಾಯೀಗೌಡ, ಪಿ.ನಂಜುಂಡೇಗೌಡ, ಯುವ ಮುಖಂಡ ಜಿ.ಕೆ.ಮಹೇಶ್, ಧರ್ಮಸ್ಥಳ ಸಂಸ್ಥೆಯ ಬೂಕನಕೆರೆ ಹೋಬಳಿ ಮೇಲ್ವಿಚಾರಕ ರಾಜಪ್ಪ, ಕೆರೆ ಅಭಿವೃದ್ಧಿ ಸಮಿತಿಯ ಎಲ್ಲಾ ಗೌರವ ಸಲಹೆಗಾರರು, ಹಾಗೂ ಎಲ್ಲಾ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ-16.ಕೆ.ಆರ್.ಪಿ-01: ಕೆ.ಆರ್.ಪೇಟೆ: ತಾಲೂಕಿನ ಗಂಜಿಗೆರೆಕೊಪ್ಪಲು ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿ ಯೋಜನೆ ಬಿ.ಸಿ.ಟ್ರಸ್ಟ್, ದೇವಿಕೆರೆ ಅಭಿವೃದ್ಧಿ ಸಮಿತಿ, ಗಂಜಿಗೆರೆ ಗ್ರಾಮ ಪಂಚಾಯಿತಿ, ಹೇಮಾವತಿ ಜಲಾಶಯ ನೀರಾವರಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸುಮಾರು 16ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೂಳೆತ್ತಿ, ರಸ್ತೆ ಬದಿಯ ಕೆರೆ ದಡವನ್ನು ನಿರ್ಮಿಸಿ, ಪುನಶ್ಚೇತನಗೊಳಿಸಿ, ಹೇಮಾವತಿ ನೀರು ತುಂಬಿಸಿದ ದೇವೀಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಹಾಗೂ ಗಂಗಾ ಪೂಜೆ-ಕೆರೆಗೆ ಬಾಗೀನ ಅರ್ಪಣೆ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿದರು. ಯೋಜನೆಯ ಮೈಸೂರು ವಿಭಾಗೀಯ ನಿರ್ದೇಶಕರಾದ ಪಿ.ಗಂಗಾಧರರೈ, ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ತಹಸೀಲ್ದಾರ್ ಎಂ.ಶಿವಮೂರ್ತಿ ಇತರರು ಇದ್ದರು.