ಶ್ರವಣಬೆಳಗೊಳ: ನೀರಾವರಿ ಯೋಜನೆ ಅನುಷ್ಠಾನಗೊಂಡು ರೈತರ ಬದುಕು ಹಸನಾಗಲಿ ಎಂದು ಪ್ರತಿನಿತ್ಯ ದೇವರಲ್ಲಿ ಪ್ರಾರ್ಥಿಸುತ್ತೇನೆಯೇ ಹೊರತು, ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದಿಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಏತನೀರಾವರಿ ಯೋಜನೆಯಿಂದ ಹೋಬಳಿಯ ಹುಳಿಗೆರೆ ಕೆರೆ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಸಮರ್ಪಿಸಿ ಮಾತನಾಡಿದ ಅವರು, ಜನರಲ್ಲಿ ಇಷ್ಟು ದಿನ ನೀರು ಬರುತ್ತೋ ಇಲ್ಲವೋ ಎಂಬ ಅನುಮಾನವಿತ್ತು. ಆದರೆ ಈಗ ಹಲವಾರು ಕೆರೆಗಳು ತುಂಬುತ್ತಿರುವುದರಿಂದ ವಿಶ್ವಾಸ ಬಂದಂತಾಗಿದ್ದು, 25 ವರ್ಷದ ಕನಸು ನನಸಾಗಿದೆ ಎಂದರು.
ಏತನೀರಾವರಿ ಯೋಜನೆಯು ಸಮರ್ಥವಾಗಿ ಸಾಕಾರಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ. ಕೆಲವರ ಹೇಳಿಕೆಗಳಿಗೆ ಸಮಯ ಬಂದಾಗ ಉತ್ತರ ಕೊಡುತ್ತೇನೆ ಎಂದು ಕಾಂಗ್ರೆಸ್ ಮುಖಂಡರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಇನ್ನು ಒಂದು ವಾರದೊಳಗೆ ಚನ್ನೇನಹಳ್ಳಿ, ಕೆಂಪಿನಕೋಟೆ, ಮರಿಶೆಟ್ಟಿಹಳ್ಳಿ, ಎನ್.ಜಿ.ಕೊಪ್ಪಲು, ಪರಮ ಹಾಗೂ ಹಳೆಬೆಳಗೊಳ ಕೆರೆಗಳು ತುಂಬಲಿದೆ. ಈ ತಿಂಗಳ 25 ರ ಹೊತ್ತಿಗೆ ಮತಿಘಟ್ಟ ಕೆರೆಗೆ ನೀರು ಹರಿಯಲಿದ್ದು, ನಂತರ ಹಿರಿಸಾವೆ ಭಾಗದ ಕೆರೆಗಳು ತುಂಬಲಿವೆ. ಡಿ.31 ರ ವರೆಗೆ ನಾಲೆಯಲ್ಲಿ ನೀರು ಹರಿಯಲಿದ್ದು, ಈ ಭಾಗದ ಬಹುತೇಕ ಕೆರೆಗಳು ತುಂಬಲಿವೆ. ಮುಂದಿನ ಸಾಲಿನಲ್ಲಿ ಸುಂಡಹಳ್ಳಿ, ಕಂಡೇರಿಕಟ್ಟೆ, ಹೊಸಹಳ್ಳಿ, ಚಲ್ಯಾ, ಕುಂಭೇನಹಳ್ಳಿ ಕೆರೆಗಳಿಗೆ ನೀರು ಬರಲಿದೆ ಎಂದು ಹೇಳಿದರು.
ಜೆ.ಡಿ.ಎಸ್. ಮುಖಂಡ ಪರಮ ದೇವರಾಜೇಗೌಡ, ಕೃಷ್ಣೇಗೌಡ, ನಿಂಗೇಗೌಡ, ಹೊಸಹಳ್ಳಿ ಕಿರಣ್, ಜುಟ್ಟನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸವರಾಜ್, ಪುಟ್ಟೆಗೌಡ, ಶ್ರೀಕಂಠ, ನಂಜೇಗೌಡ, ಮಂಜೇಗೌಡ ಹಾಗೂ ಹುಳಿಗೆರೆ, ಬೊಮ್ಮೇನಹಳ್ಳಿ, ಕೆಂಪಿನಕೋಟೆ, ಚನ್ನೇನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.