ಹಾಸನ : ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ನಾಯಕರು ಕಾಣುತ್ತಿದ್ದ ಕನಸು ಈ ಬಾರಿಯ ಗ್ರಾ.ಪಂ. ಚುನಾವಣೆ ಫಲಿತಾಂಶ ನಂತರ ನುಚ್ಚು ನೂರಾಗಿದೆ ಎಂದು ಶಾಸಕ ಪ್ರೀತಂಗೌಡ ಟಾಂಗ್ ನೀಡಿದ್ದಾರೆ.
ಹಾಸನ ಕ್ಷೇತ್ರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಕಸ್ಮಿಕವಾಗಿ ಕೈ ತಪ್ಪಿದೆ ಎಂದು ಹೇಳುತ್ತಿದ್ದರು. ಆದರೆ ಅದು ಆಕಸ್ಮಿಕ ಅಲ್ಲ ಜನರೇ ಮಾಡಿರುವ ತೀರ್ಮಾನ ಎಂಬುದು ಸಾಬೀತಾಗಿದೆ ಎಂದರು.
ಕಳೆದ 20 ವರ್ಷದಿಂದ ಸಾಲಗಾಮೆ ಹೋಬಳಿ ಜೆಡಿಎಸ್ ಭದ್ರಕೋಟೆಯಾಗಿತ್ತು. ಆದರೆ ಈ ಬಾರಿ ಸಾಲಗಾಮೆ ಸೇರಿದಂತೆ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚಾಯ್ತಿಗಳಲ್ಲಿ ನಮ್ಮ ಪಕ್ಷದ ಬೆಂಬಲಿಗರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ ಎಂದರು ಹೇಳಿದರು.
5 ಪಂಚಾಯ್ತಿಗಳಲ್ಲಿ 2/3 ಬಹುಮತದೊಂದಿಗೆ ಬಿಜೆಪಿ ಬೆಂಬಲಿಗರು ಗೆದ್ದಿದ್ದಾರೆ ನಿಟ್ಟೂರು ಪಂಚಾಯ್ತಿ ಅರ್ಧ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವುದರಿಂದ ಅದು ನಮ್ಮ ಉಪ ಹಾಸನ ಕೈತಪ್ಪಿ ಹೋಗಿದೆ ಎಂದರು.
ನಾವು ಶಿರಾ ವಿಧಾನಸಭೆ ಚುನಾವಣೆ ಗೆದ್ದ ನಂತರ ಹಾಸನದಲ್ಲಿ ಗ್ರಾ.ಪಂ.ಚುನಾವಣೆಯಲ್ಲಿ ನಾವೂ ಏನು ಎಂಬುದನ್ನು ತೋರಿಸುತ್ತೇವೆ ಎಂದು ಸಂಸದರಾದ ಪ್ರಜ್ವಲ್ ರೇವಣ್ಣ ಮಾಧ್ಯಮ ಗಳಿಗೆ ಹೇಳಿಕೆ ನೀಡಿದ್ದರು . ಅವರು ಏನೇ ಮಾಡಿದರೂ ವಿಧಾನಸಭಾ ಕ್ಷೇತ್ರದಲ್ಲಿ ಅವರ ಆಟ ಇನ್ನು ಮುಂದೆ ನಡೆಯೋದಿಲ್ಲ ಎಂದು ತಿರುಗೇಟು ನೀಡಿದರು.
ಅವರ ಆಟ ಏನಿದ್ದರೂ ಹೊಳೆನರಸೀಪುರ ಕ್ಷೇತ್ರಕ್ಕೆ ಮಾತ್ರ ಎಂದ ಪ್ರೀತಂಗೌಡ , ಕಳೆದ ಲೋಕಸಭೆ ಚುನಾವಣೆಯಲ್ಲಿ ಯಾವುದೋ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಅವರ ಕೈಕಾಲು ಹಿಡಿದು ಗೆದ್ದಿದ್ದಾರೆ . ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಏನಾಗಲಿದೆ ಎಂದು ಕಾದು ನೋಡಿ . ಇದನ್ನು ನಾನು ಹೇಳುತ್ತಿಲ್ಲ . ಲೋಕಸಭಾ ಕ್ಷೇತ್ರದ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಕೈ ಶೂನ್ಯ ಸಾಧನೆಗೆ ಗೇಲಿ
ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಹೆಚ್ಚು ಕಡಿಮೆ ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆದರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 6 ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಒಂದೇ ಒಂದು ಸ್ಥಾನದಲ್ಲೂ ಗೆಲ್ಲಲಾಗದೆ ಶೂನ್ಯ ಸಾಧನೆ ಮಾಡಿದೆ ಎಂದು ಪ್ರೀತಂಗೌಡ ವ್ಯಂಗ್ಯವಾಡಿದರು. ಎಂಎಲ್‌ಎ ಆಗೋದಕ್ಕೆ ಸುಮಾರು ಮಂದಿ ಆಕಾಂಕ್ಷಿಗಳಿದ್ದಾರೆ . ಆದರೆ ಗ್ರಾ.ಪಂ.ನಲ್ಲಿ ಒಬ್ಬರೇ ಸದಸ್ಯರು ಗೆದ್ದಿಲ್ಲ ಯಾವುದಾದರೂ ಒಂದು ಪಂಚಾಯ್ತಿ ಗೆಲ್ಲುವುದಿರಲಿ. ಒಬ್ಬರೇ ಸದಸ್ಯರೂ ನಾವು ಕಾಂಗ್ರೆಸ್ ಕಡೆಯವರು ಎಂದು ಹೇಳಿಲ್ಲ. ಕೆಲವು ಕಡೆಗಳಲ್ಲಿ ಅಭ್ಯರ್ಥಿಗಳನ್ನು ಹುಡುಕಿ ಹಾಕಿದರು. ಅದರಿಂದಲೂ ಕಿಂಚಿತ್ ಲಾಭವಾಗಿಲ್ಲ ಎಂದು ಪ್ರೀತಂಗೌಡ ಮುಖಂಡರ ಬಗ್ಗೆ ಗೇಲಿ ಮಾಡಿದರು.
Tags
ಹಾಸನ