ಕೆರೆಗಳಿಗೆ ನೀರು ಹರಿಸಲು ಆಗ್ರಹ

ಅರಕಲಗೂಡು: ತಾಲ್ಲೂಕಿನ ಬರಗೂರು, ಮಾದಿಹಳ್ಳಿ ಭಾಗದ ಕೆರೆ ಕಟ್ಟೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಈ ಭಾಗದ ರೈತರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಸುತ್ತಮುತ್ತಲಿನ ಹಳ್ಳಿಗಳ ರೈತರು ಮಾದಿಹಳ್ಳಿ ಬಳಿ ನಡೆಯುತ್ತಿರುವ ಕೆರೆಗಳಿಗೆ ಅಳವಡಿಸುವ ಪೈಪ್‌ಲೈನ್ ಕಾಮಗಾರಿ ನಡೆದ ಸ್ಥಳದಲ್ಲಿ ಜಮಾಯಿಸಿ ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ ಮೂಲಕ ಈ ಭಾಗದ ಕೆರೆ ಕಟ್ಟೆಗಳಿಗೆ ನೀರು ಹರಿಸದ ಕಾರಣ ಜನ ಜಾನುವಾರುಗಳಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿ.ಪಂ ಸದಸ್ಯ ಬಿ.ಎಂ. ರವಿ ಮಾತನಾಡಿ, 'ಈ ಭಾಗದ ಹಲವಾರು ಕೆರೆ ಕಟ್ಟೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುತ್ತಿಲ್ಲ. ಹೇಮಾವತಿ ಜಲಾಶಯ ಯೋಜನೆ ಮೇಲಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಮಾದಿಹಳ್ಳಿ ಬಳಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕುಂಟುತ್ತಾ ಸಾಗಿದೆ. ಪರಿಣಾಮವಾಗಿ ಬರಗೂರು ಸುತ್ತಮುತ್ತಲಿನ ಕೆರೆ, ಕಟ್ಟೆಗಳಿಗೆ ನೀರು ಹರಿಯದೆ ತೊಂದರೆಯಾಗಿದೆ' ಅಸಮಾಧಾನ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ದೊಡ್ಡಮಗ್ಗೆ ಹೇಮಾವತಿ ಉಪ ವಿಭಾಗದ ಸಹಾಯಕ ಎಂಜಿನಿಯರ್‌ ಕೇಶವಮೂರ್ತಿ ಅವರ ವಿರುದ್ಧ ರೈತರು ಹರಿಹಾಯ್ದರು.

'ಕೊರೊನಾ ಕಾರಣದಿಂದಾಗಿ ಪೈಪ್‌ಲೈನ್ ಅಳವಡಿಸುವುದು ತಡವಾಗಿದೆ. 130 ಮೀ ಉದ್ದದವರೆಗೆ ಕಲ್ಲು ಬಂಡೆಗಳಿಂದ ಕೂಡಿದ್ದು ಸದ್ಯದಲ್ಲೇ ಕಾಮಗಾರಿ ಮುಗಿಸಿ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ' ಸಹಾಯಕ ಎಂಜಿನಿಯರ್‌ ಕೇಶವಮೂರ್ತಿ ಭರವಸೆ ನೀಡಿದ ಬಳಿಕ ರೈತರ ಪ್ರತಿಭಟನೆ ಕೈಬಿಟ್ಟರು.

Post a Comment

Previous Post Next Post