ರಾಮನಾಥಪುರ: ಇಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಎಲ್ಲಾ ಸೌಕರ್ಯಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಅದರ ಸದ್ಭಳಕೆಮಾಡಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ ಸಲಹೆ ನೀಡಿದರು.
ಕೊಣನೂರು ಪಟ್ಟಣದ ಶ್ರೀ ಭವಾನಿಶಂಕರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಭವಾನಿಶಂಕರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲೆಯ ಕೊರೊನಾ ವಾರಿಯರ್ಸ ಪರವಾಗಿ ಗೌರವ ಸ್ವೀಕರಿಸಿ ಮಾತನಾಡುತ್ತಾ ಅವರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತರಲು ಶ್ರಮಿಸಿದ ವೈದ್ಯರು, ಶುಶ್ರೂಷಕಿಯರ ಸೇವೆಯನ್ನು ಶ್ಲಾಘಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನಿಯರ್ ಕುಳ್ಳೇಗೌಡ ಮತ್ತು ಪ್ರಗತಿಪರ ರೈತ ಕೆ.ಎಸ್.ಕೃಷ್ಣಮೂರ್ತಿ, ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್.ಬಿ. ಮುದ್ದಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ಭವಾನಿಶಂಕರಿ ಟ್ರಸ್ಟ್ ನ ಸಮಾಜ ಸೇವಾ ಕಾರ್ಯವನ್ನು ಪ್ರಶಂಸಿಸಿದರು.
2019-20 ನೇ ಶೈಕ್ಷಣಿಕ ವರ್ಷದಲ್ಲಿ ಹೋಬಳಿಯ ವ್ಯಾಪ್ತಿಯ 7ನೇ ತರಗತಿ, 10 ನೇ ತರಗತಿ, ದ್ವಿತೀಯ ಪಿ ಯು ಸಿ ಮತ್ತು ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕಗಳಿಸಿದ 70 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗೌರವಿಸಿ ಸ್ಮರಣಿಕೆಯನ್ನು ನೀಡಲಾಯಿತು. 10 ನೇ ತರಗತಿಯ ಪರೀಕ್ಷೆಯಲ್ಲಿ ಹೆಚ್ಚು ‘ಎ’ ಶ್ರೇಣಿಯನ್ನು ಗಳಿಸಿರುವ, ಎಂ.ಕೆ.ಎಸ್.ಲಯನ್ಸ್ ಶಾಲೆ ಮತ್ತು ನಳಂದ ಪಬ್ಲಿಕ್ ಶಾಲೆಗಳಿಗೆ ಸ್ಮರಣಿಕೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಕೆ.ಬಿ.ರಮೇಶ್, ಶ್ರೀ ಭವಾನಿ ಶಂಕರಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಕೆ.ಕೆ. ಗಣೇಶ್, ಕಾರ್ಯದರ್ಶಿ ಸುಬ್ಬರಾಜು, ಖಜಾಂಚಿ ಅಣ್ಣಯ್ಯ, ಡಿ ಸಿ ಸಿ ಬ್ಯಾಂಕ್ ಶಾಖಾಧಿಕಾರಿ ಬಸವರಾಜು, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ಮತ್ತಿತರರಿದ್ದರು,