ಹಾಸನ: ಪ್ರಸ್ತುತ ದಿನಗಳಲ್ಲಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಸ್ಪಂದಿಸದಿದ್ದರೇ ತೀವ್ರತರವಾದ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿನ ಏರುಪೇರು ಕಾಫಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. 2015 ರಿಂದ ಇತ್ತೀಚೆಗೆ ನಿರಂತರವಾಗಿ ಆಶೀವೃಷ್ಟಿ ಮತ್ತು ಅನಾವೃಷ್ಟಿಯು ಕಾಫಿಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ಗುರಿಮಾಡಿ, ರೋಗಭಾದೆ, ಬೆಲೆಕುಸಿತ, ಕಾರ್ಮಿಕರ ಕೊರತೆ ಕಾಡುಪ್ರಾಣಿಗಳ ಹಾವಳಿಯ ಜೊತೆಗೆ ಹವಾಮಾನದ ವೈಪರೀತ್ಯವು ಬೆಳೆಗಾರರಿಗೆ ಕಷ್ಟವಾಗಿ ಪರಿಣಮಿಸಿದೆ. ಗಿಡದಲ್ಲಿದ್ದ ಕಾಫಿಯು ನೆಲಕಚ್ಚಿದೆ. ಕಣದಲ್ಲಿ ಒಣಗಳು ಹಾಕಿದ್ದೆ ಕಾಫಿಯು ಕೊಚ್ಚಿ ಹೋಗಿದೆ. ಈ ನಷ್ಟದ ಜೊತೆಗೆ ಅಕಾಲಿಕ ಮಳೆಯಿಂದ ಕಾಫಿ ಮೊಗ್ಗಾಗಿದ್ದು, ಕಾಫಿಯ ಕಟಾವು ಸಂಪೂರ್ಣಗೊಳ್ಳದೇ ಇದ್ದು ಮುಂದಿನ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಟಾವಿನ ಸಂದರ್ಭದಲ್ಲಿ ಅರಳಿರುವ ಮೊಗ್ಗು ಮತ್ತು ಹೂ ಉದುರಲಿದೆ. ಅಕಾಲಿಕ ಮಳೆಯಿಂದ ಆಗುತ್ತಿರುವ ನಷ್ಟವನ್ನು ಕಾಫಿ ಮಂಡಳಿ ಸಮೀಕ್ಷೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರವು ಸಂಕಷ್ಟದಲ್ಲಿರುವ ಕಾಫಿಬೆಳೆಗಾರರಿಗೆ ವಿಶೇಷ ಪ್ಯಾಕೇಜ್‍ವೊಂದನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬೇಕೆಂದು ಸರ್ಕಾರವನ್ನು ಈ ಮೂಲಕ ಒತ್ತಾಯಿಸುವುದಾಗಿ ಹೇಳಿದರು.
ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಳೆದ ಕೆಲ ವರ್ಷಗಳಿಂದ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಾ ಬಂದಿದ್ದು, ಬೆಳೆಗಾರರ ಫಸಲು ನಾಶದ ಜೊತೆಗೆ ಪ್ರಾಣಭಯದಿಂದ ಜೀವನ ಪರಿಸುವಂತಾಗಿದೆ. ಕೆಲಸ ಮಾಡುವ ಜನರ ಪ್ರಾಣಹಾನಿ ಹೆಚ್ಚಾಗುತ್ತಿದ್ದು, ಅಪಾರ ಪ್ರಮಾಣದ ಕಾಫಿ, ಕಾಳುಮೆಣಸು, ಬಾಳೆ, ಭತ್ತ, ಹಾಗೂ ಅಡಿಕೆ ಬೆಳೆಗಳ ನಾಶದಿಂದ ಹೃತಬೆಳೆಗಾರರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ದಿನನಿತ್ಯ ತೋಟಗಳಲ್ಲಿ ನೀರಿನ ಟ್ಯಾಂಕ್, ಮೋಟರ್, ಪಂಪ್ಸೆಟ್, ಪೈಪ್ಲೈನ್, ಬೇಲಿ ಇವುಗಳ ಅಪಾರ ಹಾನಿಯಾಗಿದೆ ಎಂದರು. ಶಾಲಾಮಕ್ಕಳು ಹಳ್ಳಿಯಿಂದ ಶಾಲೆಗಳಿಗೆ ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಹಾಗೂ ಕಾಫಿ ತೋಟಗಳಲ್ಲಿ ಕಾಡುಪ್ರಾಣಿಗಳಾದ ಮಂಗಗಳು, ಕಾಟಿಗಳು, ಕಾಡು ಹಂದಿಗಳು, ಹಾವಳಿ ಹೆಚ್ಚಾಗಿದ್ದು, ಕಾಫಿ ಗಿಡದ ರೆಕ್ಕೆಗಳನ್ನು, ಗದ್ದೆಗಳನ್ನು ಸಂಪೂರ್ಣ ನಾಶಮಾಡುತ್ತಿದೆ ಎಂದು ದೂರಿದರು. ಬೆಳೆಗಾರರಿಗೆ ಸೂಕ್ತ ರಕ್ಷಣೆ ಒದಗಿಸಿಕೊಡುವ ನಿಟ್ಟಿನಲ್ಲಿ ಕಾಡಾನೆಗಳನ್ನು ಸ್ಥಳಾಂತರ ಮಾಡುವಲ್ಲಿ ಕ್ರಮ ವಹಿಸಬೇಕು. ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಿ, ಆನೆ ಕಾಲುವೆ ನಿರ್ಮಾಣ ಸಾಮೂಹಿಕವಾಗಿ ಶೇ.90 ರ ಸಹಾಯಧನದಲ್ಲಿ ಸೋಲಾರ್ ಬೇಲಿ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಬೇಕು. ಕಾಡಾನೆ ಹಾಗೂ ಇತರೆ ಕಾಡುಪ್ರಾಣಿಗಳ ಹಾವಳಿ ಇರುವ ಹಳ್ಳಿಗಳಲ್ಲಿ ಸಮರ್ಪಕವಾಗಿ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸುವುದು, ಕಾಡಾನೆ ದಾಳಿಯಿಂದ ಹಾನಿಯಾದ ಬೆಳೆ ಮತ್ತು ಗಿಡ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. 2020 ನೇ ಸಾಲಿನಲ್ಲಿ ಅತೀವೃಷ್ಟಿಯಿಂದ ಕಾಫಿ ತೋಟಗಳಲ್ಲಿ ಹಾನಿ ಸಂಭವಿಸಿದ್ದು, ಹಾನಿಯ ಸಂಬಂಧ ಬೆಳೆಗಾರರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಬೆಳೆಗಾರರಿಗೆ ಪರಿಹಾರ ಬಂದಿರುವುದು ಎಂದ ಅವರು ಅರ್ಜಿ ಸಲ್ಲಿಸಿದ ಎಲ್ಲಾ ಬೆಳೆಗಾರರಿಗೆ ಪರಿಹಾರ ದೊರೆತಿರುವುದಿಲ್ಲ. ಹವಾಮಾನ ವೈಪರೀತ್ಯ ಬೆಲೆ ಕುಸಿತ, ಕಾಡುಪ್ರಾಣಿಗಳ ಹಾವಳಿ ಇನ್ನಿತರ ಸಮಸ್ಯೆಗಳಿಂದ ಬೆಳೆಗಾರರು ಸಂಕಷ್ಟದಲ್ಲಿದ್ದು, ದಯಮಾಡಿ 2020 ನೇ ಸಾಲಿನಲ್ಲಿ ಆಶೀವೃಷ್ಟಿಯಿಂದ ಹಾನಿಗೊಳಗಾಗಿ ಪರಿಹಾರ ದೊರೆಯದೇ ಇರುವ ಬೆಳೆಗಾರರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಶೀಘ್ರದಲ್ಲೇ ಪರಿಹಾರ ನೀಡಬೇಕಾಗಿ ಮನವಿ ಮಾಡಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಿದ ಕೆಲ ಬೆಳೆಗಾರರಿಗೆ ವಿಮೆ ಹಣ ದೊರೆತಿದ್ದು, ಇನ್ನೂ ಕೆಲ ಬೆಳೆಗಾರರಿಗೆ ಹಣ ಪಾವತಿಯಾಗಿರುವುದಿಲ್ಲ. ಆದ್ದರಿಂದ ಶೀಘ್ರದಲ್ಲೇ ವಿಮಾಹಣವನ್ನು ದೊರಕಿಸಿಕೊಡಬೇಕು. ಯಾವ ರಾಜ್ಯದಲ್ಲಿ ಹೆಚ್ಚು ಕಾರ್ಮಿಕರು ಲಭ್ಯವಿರುತ್ತಾರೋ, ಆ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಕಾರ್ಮಿಕರನ್ನು ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಬೆಳೆಗಾರರಿಗೆ ಸಹಾಯ ಮಾಡಬೇಕು. ನರೇಗಾ ಯೋಜನೆಯಲ್ಲಿ ದೊರಕುವ ಅನುಕೂಲಗಳನ್ನು ಕಾಫಿ ಉಧ್ಯಮಕ್ಕೂ ಸಹಾ ವಿಸ್ತರಿಸಬೇಕಾಗಿ ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ, ಜಿಲ್ಲಾಧ್ಯಕ್ಷ ತೋ.ಚ. ಅನಂತಸುಬ್ಬರಾಯ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ