ಹೊನ್ನವಳ್ಳಿ ಭಾಗದ ಜನರು ನೀರು ಬೇಡಿಕೆಯಿಟ್ಟು ಏಳು ದಶಕವೇ ಸಂದಿದೆ. ಕೆಳಗಿನ ಚಿತ್ರ 1951 ನೇ ಇಸವಿಯಲ್ಲಿ ಹೊನ್ನವಳ್ಳಿ ಭಾಗಕ್ಕೆ ನೀರು ಬೇಕೆಂದು ಅಂದಿನ ಮೈಸೂರು ಮಹರಾಜರಿಗೆ ಸಲ್ಲಿಸಿದ ಮನವಿ ಪತ್ರ. ಅಂದು ಹಚ್ಚಿದ ಹೋರಾಟದ ಹಣತೆ ಇಂದಿಗೂ ಈ ಭಾಗದ ಜನರು ಹಾರದಂತೆ ಉಳಿಸಿಕೊಂಡು ಬಂದಿದ್ದಾರೆ. ಭಾರತದ ಇತಿಹಾಸದಲ್ಲೇ ಅತ್ಯಂತ ಧೀರ್ಘ ನೀರು ಬೇಡಿಕೆಯ ಹೋರಾಟವಾಗಿದ್ದು ಅಂದಿನಿಂದ ಇಂದಿನವರೆಗೂ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಈ ವಿಜ್ಞಾಪನ ಪತ್ರಿಕೆ ಕನ್ನಡಿ ಹಿಡಿದಿದೆ.
ಆತ್ಮೀಯ ನಾಗರಿಕ ಬಂಧುಗಳೆ,
ಕಳೆದ ಎಪತ್ತು ವರ್ಷಗಳಿಂದ ತಾಲ್ಲೂಕಿನಲ್ಲಿ ಸರಿಯಾಗಿ ಮಳೆಯಾಗದೆ ಕೆರೆಕಟ್ಟೆಗಳು ತುಂಬದೆ ಕುಡಿಯಲೂ ನೀರಿಲ್ಲದಂತಾಗಿದೆ. ಅದರಲ್ಲೂ ಹೊನ್ನವಳ್ಳಿ ಮತ್ತು ಕಸಬಾ ಹೋಬಳಿಗಳಲ್ಲಿ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಜನ ಜಾನುವಾರುಗಳು, ಪ್ರಾಣಿ ಪಕ್ಷಿಗಳು ಅತೀವ ನೀರಿನ ಕೊರತೆಯಿಂದ ಬವಣೆಪಡುತ್ತಿರುವುದು ಈ ಪ್ರಾಂತ್ಯದ ತಮಗೆಲ್ಲರಿಗೂ ತಿಳಿದೆ ಇದೆ.
.
ಈ ತಾಲ್ಲೂಕಿನ ಮೂಲಕವೆ ಹಾಯ್ದು ಹೋಗುತ್ತಿರುವ ಎತ್ತಿನಹೊಳೆ ಯೋಜನೆ ಹಾಗೂ ಹೊನ್ನವಳ್ಳಿ ಹೇಮಾವತಿ ಏತ ನೀರಾವರಿ ಯೋಜನೆಗಳಿಂದ ನಮ್ಮ ಹೋಬಳಿಯ ಕೆರೆಗಳಿಗೆ ಸರಿಯಾಗಿ ನೀರು ಹಂಚಿಕೆ ಮಾಡಿ ಹರಿಸದಿರುವುದು ನಗ್ನಸತ್ಯ.
ಇಂತಹ ಕಷ್ಟ ಹಾಗೂ ಅಂಧಕಾರ ಸನ್ನಿವೇಶದಲ್ಲಿ ನಾವುಗಳು ನಮ್ಮ ಪಾಲಿನ ನೀರನ್ನು ಹಾಲಿ ಎತ್ತಿನಹೊಳೆ ಯೋಜನೆ ಹಾಗು ಹೊನ್ನವಳ್ಳಿ ಹೇಮಾವತಿ ಏತ ನೀರಾವರಿ ಯೋಜನೆಗಳಿಂದ ನಮ್ಮ ಭಾಗದ ಕೆರೆಕಟ್ಟೆಗಳಿಗೆ ನೀರು ಹಂಚಿಕೆ ಮಾಡಿಸಿಕೊಳ್ಳದಿದ್ದಲ್ಲಿ ನಮ್ಮ ಮುಂದಿನ ತಲೆಮಾರುಗಳು ನಮ್ಮನ್ನು ಕ್ಷಮಿಸುವುದಿಲ್ಲ.
ಆದ್ದರಿಂದ, ಈಗಲೇ ಎಚ್ಚೆತ್ತುಕೊಂಡು ಹೋರಾಟದ ಮೂಲಕ ನಮ್ಮ ಹೋಬಳಿಯಲ್ಲಿ ಹಾಯ್ದು ಹೋಗುತ್ತಿರುವ ನೀರಾವರಿ ಯೋಜನೆಗಳಿಂದ ನಮ್ಮ ಕೆರೆಗಳಿಗೆ ನೀರು ತುಂಬಿಸಿಕೊಳ್ಳಲು ಹಾಗೂ ನಮ್ಮ ನೀರಿನ ಬವಣೆಯನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ಈಗಾಗಲೆ ನಮ್ಮ ಸುತ್ತಲಿನ ಎಲ್ಲಾ ತಾಲ್ಲೂಕಿನ ಬಂಧುಗಳು ಆಯಾ ತಾಲ್ಲೂಕಿನ ಜನಪ್ರತಿನಿಧಿಗಳ ಕಾಳಜಿಯಿಂದ ಅವರವರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಿಕೊಂಡು ಸಂತೃಪ್ತ ಜೀವನ ನಡೆಸುವತ್ತ ಹೆಜ್ಜೆ ಹಾಕಿರುವುದು ನಮ್ಮೆಲರಿಗೂ ತಿಳಿದಿದೆ. ಇದು ನಮಗೂ ಸಹ ಖುಷಿ ತಂದಿದೆ.
ಅದರಂತೆ, ನಾವು ಸಹ ನಮ್ಮ ಹೋಬಳಿ ಮೂಲಕ ಹಾಯ್ದು ಹೋಗುತ್ತಿರುವ ಈ ನೀರಾವರಿ ಯೋಜನೆಗಳಿಂದ ನಮ್ಮ ಹೋಬಳಿಯ ಕೆರೆಗಳಿಗೆ ನೀರು ಹರಿಸಿಕೊಳ್ಳಲು ನಮ್ಮಗಳ ಬದುಕು ಹಸನು ಮಾಡಿಕೊಳ್ಳಲು ಮತ್ತು ಈ ದಿಕ್ಕಿನಲ್ಲಿ ಹೋರಾಟ ಮಾಡಲು ಘನ ಸರ್ಕಾರವನ್ನು ಕೋರಲು ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪಣ ತೊಡಲು ಕಲ್ಪತರು ನಾಡಿನ ಸಮಸ್ತ ನಾಗರೀಕ ಬಂಧುಗಳಲ್ಲಿ ಈ ಮೂಲಕ ಕೋರುತ್ತಿದ್ದೆವೆ.
ತಮ ವಿಧೇಯ,
ಹೆಚ್.ಎನ್. ಚಂದ್ರೆಗೌಡ
(ಪರವಾಗಿ)
Tags
ಕೃಷಿ