2020-21 ನೇ ಸಾಲಿನಲ್ಲಿ, ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯವು ಪ್ರಧಾನ ಮಂತ್ರಿಗಳ (Scheme For Formalization of Micro Food Processing Enterprises: PMFME) ಮಹತ್ತರವಾದ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸಿರುತ್ತದೆ. ಈ ಹೊಸ ಯೋಜನೆಯನ್ನು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಅನುಷ್ಟಾನಗೊಳಿಸಲಾಗುತ್ತಿದೆ.
ಯೋಜನೆಯ ಮುಖ್ಯ ಉದ್ದೇಶವು, ಅಸಂಘಟಿತ ವಲಯದಲ್ಲಿರುವ ಸೂಕ್ಷ್ಮ/ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸಿ, ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಹಾಗೂ ಉತ್ಪಾದಕ ಸಹಕಾರಿ ಸಂಘಗಳಿಗೆ ಅವುಗಳ ಸರಪಳಿಕೊಂಡಿಯೊಂದಿಗೆ ಉತ್ತೇಜನ ನೀಡುವುದಾಗಿರುತ್ತದೆ.
ಈಗಾಗಲೇ ಯೋಜನೆ ಅನುಷ್ಟಾನ ಸಂಬಂಧ, ಹಾಸನ ಜಿಲ್ಲೆಗೆ “ತೆಂಗು” ನ್ನು ಒಂದು ಬೆಳೆಯಾಗಿ ಆಯ್ಕೆ ಮಾಡಲಾಗಿದ್ದು, ಇದರಿಂದ ಆಹಾರ ಸಂಸ್ಕರಣಾ ಉತ್ಪನಗಳಾದ ವರ್ಜಿನ್ ತೆಂಗಿನ ಎಣ್ಣೆ, ಕೊಬ್ಬರಿ ಪೌಡರ್, ತೆಂಗಿನ ಹಾಲು, ತೆಂಗಿನ ಕೆನೆ ತೆಗೆದ ಹಾಲು, ತೆಂಗಿನ ಕ್ರೀಮ್, ತೆಂಗಿನ ಚಿಪ್ಸ್, ತೆಂಗಿನ ಎಣ್ಣೆ, ಕೊಬ್ಬರಿ, ತೆಂಗಿನ ಎಳನೀರು ಆಧಾರಿತ ಉತ್ಪನಗಳಾದ ನೀರಾ, ವಿನೇಗರ್, ಸ್ಕ್ವಾಷ್, ತೆಂಗಿನ ಬೆಲ್ಲ, ತೆಂಗಿನ ಬಿಸ್ಕೆಟ್ಸ್, ತೆಂಗಿನ ಬರ್ಫಿ ಹಾಗೂ ತೆಂಗು ಆಧಾರಿತ ಇತರೆ ಸಿಹಿ ತಿನಿಸುಗಳ ತಯಾರಿಕೆಯಡಿ ಕ್ರೀಯಾಶೀಲವಾಗಿರುವ ಸಣ್ಣ ಉದ್ಯಮಿಗಳು, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಘಗಳು, ಸಹಕಾರಿ ಸಂಘಗಳಿಂದ ಕಿರು ಉದ್ಯಮಗಳನ್ನು ಕೈಗೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಯೋಜನಾ ವೆಚ್ಚದ ಶೇ.35 ರಷ್ಟನ್ನು ( ಗರಿಷ್ಠ ರೂ. 10.00 ಲಕ್ಷ ) ಸರ್ಕಾರವು ಸಹಾಯಧನವಾಗಿ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

