ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಎರಡು ಆಂಬುಲೆನ್ಸ್ ವಾಹನಗಳು ರೋಗಿಗಳ ಉಪಯೋಗಕ್ಕೆ ಬಾರದೆ ರೋಗಿಗಳು ಪರದಾಡುವ ಸ್ಥಿತಿ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ನಿರ್ಮಾಣವಾಗಿದೆ. ಹೌದು ಕಳೆದ 20 ವರ್ಷ ಹಳೆಯದಾದ ಇಲ್ಲಿಯ ಆಂಬುಲೆನ್ಸ್ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ ಜೊತೆಗೆ ಉದಯಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಂದಿರುವ ಇನ್ನೊಂದು ಆಂಬುಲೆನ್ಸ್ ಬ್ರೇಕ್‌ಡೌನ್ ಆಗಿದ್ದು. ಖಾಸಗಿ ಸಂಸ್ಥೆಯಿಂದ ಒಂದು ಆಂಬುಲೆನ್ಸ್ ವಾಹನವನ್ನು ಬಾಡಿಗೆ ಆಧಾರದಲ್ಲಿ ಪಡೆದು ಸದ್ಯಕ್ಕೆ ಕಾರ್ಯಾಚರಣೆ ಮಾಡುತ್ತಿದೆ.
ಜಿಲ್ಲೆಯಲ್ಲಿ ಈಗಾಲೇ ಕೋವಿಡ್‌ನ 2ನೇ ಅಲೆ ಆರಂಭವಾಗಿರುವ ಈ ಸಂದರ್ಭದಲ್ಲಿ ಸೋಂಕಿತರನ್ನು ಕರೆತರಲು ಸುಸಜ್ಜಿತ ಆಂಬುಲೆನ್ಸ್ ಅಗತ್ಯವಿದೆ. ಸರ್ಕಾರವು ಕೂಡಲೇ ಎರಡು ಆಂಬುಲೆನ್ಸ್ ವಾಹನಗಳನ್ನು ತಾಲ್ಲೂಕು ಆರೋಗ್ಯ ಕೇಂದ್ರಕ್ಕೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೋವಿಡ್‌ನ 2ನೇ ಅಲೆ ಪ್ರಾರಂಭ ವಾಗಿರುವುದು ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗಿರುವ ಆಂಬುಲೆನ್ಸ್ ದಾರಿ ಮಧ್ಯೆ ಕೆಟ್ಟು ನಿಂತರೆ ರೋಗಿಗಳ ಪರಿಣಾಮ ಏನಾಗಬಹುದು? ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್ ಸೌಲಭ್ಯ ಸಕಾಲಕ್ಕೆ ಸಿಗಬೇಕು. ಹೀಗಾಗಿ ಅಗತ್ಯವಿರುವಷ್ಟು ಆಂಬುಲೆನ್ಸ್‌ಗಳನ್ನು ಕೂಡಲೇ ಒದಗಿಸಬೇಕು
ಕೆ.ಜಿ. ನಾಗರಾಜು, ವಕೀಲ
ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಎರಡು ಆಂಬುಲೆನ್ಸ್‌ಗಳಿದ್ದರೂ ಪ್ರಯೋಜನಕ್ಕೆ ಬಾರದಾಗಿವೆ. ಖಾಸಗಿ ಸಂಸ್ಥೆಯಿಂದ ಪಡೆದಿರುವ ಆಂಬುಲೆನ್ಸ್ ಅನ್ನು ತುರ್ತು ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹಳೆಯ ಆಂಬುಲೆನ್ಸ್ ವಾಹನವನ್ನು ಬದಲಾಯಿಸುವಂತೆ ಕೋರಿ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ
ಡಾ.ಎಚ್. ಆರ್. ತಿಮ್ಮಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ
Tags
ಆಲೂರು
