ಹಾಸನ:ಉತ್ತಮ ಸಮಾಜ ನಿರ್ಮಾಣ ಹಾಗೂ ಸದೃಢ ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರ ಅತಿ ಮುಖ್ಯವಾಗಿದೆ ಎಂದು ಸಮಾಜ ಸೇವಕ ಡಾ. ಗುರುರಾಜ್ ಹೆಬ್ಬಾರ್ ಹೇಳಿದರು.
ನಗರದ ರೆಡ್ ಕ್ರಾಸ್ ಭವನದಲ್ಲಿ ಈಚೆಗೆ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಗರ್ಭ ಕೊರಳ ಕ್ಯಾನ್ಸರ್ ತಡೆಗಟ್ಟುವ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ದಿನ ಒಂದು ದಿನದ ಆಚರಣೆಗೆ ಸೀಮಿತವಲ್ಲ. ಪ್ರತಿ ದಿನವೂ ಹೆಣ್ಣು ಮಕ್ಕಳ ದಿನವೇ ಆಗಿದೆ. ನಾವು ದುರ್ಗೆಯಂಥ ಹೆಣ್ಣು ದೇವತೆಗಳನ್ನು ಪೂಜಿಸುತ್ತೇವೆ. ಏಕೆಂದರೆ ಅವರು ಸ್ತ್ರೀಯರು ತುಂಬ ಬಲಶಾಲಿಯಾಗಿದ್ದಾರೆ. ಕುಟುಂಬ ನಿರ್ವಹಣೆಯಂತಹ ಮಹತ್ತರ ಜವಾಬ್ದಾರಿಯನ್ನು ಎಲ್ಲರೂ ಗೌರವಿಸಬೇಕು. ಸದಾ ಒತ್ತಡದಲ್ಲೇ ಇರುವ ಸ್ತ್ರೀಯರು ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಎಚ್.ಪಿ. ಮೋಹನ್ ಮಾತನಾಡಿ, ಹಿಂದಿನ ದಿನಗಳಿಗೆ ಹೋಲಸಿದರೆ ಪ್ರಸ್ತುತ ಸಕಾರಾತ್ಮಕ ಬದಲಾವಣೆ ಕಾಣಬಹುದಾಗಿದ್ದು ಮಹಿಳೆಯರು ಸಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಗುರುತು ಮೂಡಿಸಿದ್ದಾರೆ. ಸ್ವಾವಲಂಬನೆಯ ಜೀವನ ಕಟ್ಟಿಕೊಂಡಿರುವ ಅನೇಕ ಸ್ತ್ರೀಯರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ರಾಜ್ ನೂತನ್ ದೋಶೆಟ್ಟಿ ಮಾತನಾಡಿ, ಕ್ಲಾರಾ ಜೆಟ್ಕಾನ್ ಅವರ ಹೋರಾಟದ ಫಲವಾಗಿ ಮಹಿಳೆಯರಿಗೆ ಎಲ್ಲ ಸೌಲಭ್ಯ ದೊರೆಯುವಂತಾಯಿತು. ೨೦ನೇ ಶತಮಾನದ ಅಂತ್ಯ ಭಾರತದಲ್ಲಿ ಮಹಿಳೆಯರ ಪಾಲಿಗೆ ಸುವರ್ಣಯುಗ ಎಂದು ಹೇಳಬಹುದು. ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂದೆ ಬಂದಿದ್ದಾರೆ ಎಂದು ಹೇಳಿದರು.
ರೆಡ್ ಕ್ರಾಸ್ ನಿರ್ದೇಶಕಿ ಕೆ.ಟಿ. ಜಯಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ಎ. ಸಾವಿತ್ರಿ ಅವರು ಗರ್ಭ ಕೊರಳ ಕ್ಯಾನ್ಸರ್ ತಡೆ ಕುರಿತು ಉಪನ್ಯಾಸ ನೀಡಿದರು.
ರೆಡ್ ಕ್ರಾಸ್ ಜಿಲ್ಲಾ ಖಜಾಂಚಿ ಜಯೇಂದ್ರಕುಮಾರ್, ನಿರ್ದೇಶಕರಾದ ಶಬೀರ್ ಅಹಮದ್, ಅಮ್ಜದ್ ಖಾನ್, ಮಂಜಪ್ಪಗೌಡ, ವೆಂಕಟರಾಮು, ಚಂದನ್, ಹರ್ಷಿತ್, ಚೇತನ್, ಸಕಲೇಶಪುರ ತಾಲೂಕು ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಲತಾ ಹಾಗೂ ಇತರರಿದ್ದರು.
