ಅರಸೀಕೆರೆ :- ಹೌಸಿಂಗ್ ಫಾರ್ ಆಲ್ ಯೋಜನೆಯಡಿ ನಗರದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿಗೃಹಗಳನ್ನು ಮನೆ ಇಲ್ಲದ ಬಡ ಹಾಗೂ ನಿರ್ಗತಿಕ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಅಭಯ ನೀಡಿದರು.
ನಗರಸಭೆಯ ಸಭಾಂಗಣದಲ್ಲಿ ನಡೆದ ಹೌಸಿಂಗ್ ಫಾರ್ ಆಲ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಗರಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಒಡಗೂಡಿ ಸ್ವತಃ ನಾನೇ ವಾರ್ಡ್ ವಾರು ಸಭೆಮಾಡಿ ಸಾರ್ವಜನಿಕರ ಸಮ್ಮುಖದಲ್ಲೇ ಫಲಾನುಭವಿಗಳ ಆಯ್ಕೆ ಮಾಡಿದ್ದು ಇದರಲ್ಲೂ ವ್ಯತ್ಯಾಸವಾಗಿದ್ದರೆ ಯಾವುದೇ ಕ್ಷಣದಲ್ಲಾದರೂ ಅಂತ ಫಲಾನುಭವಿಗಳ ಹೆಸರನ್ನು ಕೈಬಿಟ್ಟು ಅರ್ಹ ರಿಗೆ ಮನೆ ವಿತರಿಸಲಾಗುವುದು ಎಂದರು.
ಈಗಾಗಲೇ ಆಯ್ಕೆಗೊಂಡಿರುವ ಫಲಾನುಭವಿಗಳ ಪೈಕಿ ಬಹುತೇಕರು ಬ್ಯಾಂಕ್ ನಲ್ಲಿ ಖಾತೆ ಹೊಂದಿಲ್ಲ ಇನ್ನೂ ಕೆಲವರು ಅಗತ್ಯ ದಾಖಲೆಗಳನ್ನು ಒದಗಿಸಿಲ್ಲ ಎಂದು ನಗರಸಭೆಯಿಂದ ನಿಯೋಜನೆಗೊಂಡಿರುವ ಹೌಸಿಂಗ್ ಫಾರ್ ಆಲ್ ಯೋಜನೆ ಕಾರ್ಯ ನಿರ್ವಾಹಕ ಅಧಿಕಾರಿ ಸುನಿಲ್ ಸಭೆಯ ಗಮನಕ್ಕೆ ತಂದರು.
ಈ ಕುರಿತು ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯಿಸಿ ಬ್ಯಾಂಕ್ ಖಾತೆ ತೆರೆಯಲು ಹಣಕಾಸಿನ ತೊಂದರೆ ಇದ್ದರೆ ಅಂತಹ ಫಲಾನುಭವಿಗಳಿಗೆ ವೈಯಕ್ತಿಕವಾಗಿ ನಾನೇ ಒಂದು ಸಾವಿರ ನೀಡುತ್ತೇನೆ ಉಳಿದಂತೆ ಫಲಾನುಭವಿಗಳಿಂದ ಅಗತ್ಯ ದಾಖಲಾತಿಗಳನ್ನು ಮುತುವರ್ಜಿ ವಹಿಸಿ ಅಧಿಕಾರಿಗಳೇ ಪಡೆಯುವಂತೆ ಸೂಚನೆ ನೀಡಿದರು.
ಭರವಸೆ :-ಅದೇ ರೀತಿ ನಗರಸಭೆ ಗೆ ಸೇರಿದ ಜಾಗದಲ್ಲಿ ಸಣ್ಣ ಪುಟ್ಟ ಮನೆ ಕಟ್ಟಿಕೊಂಡು ಹತ್ತಾರು ವರ್ಷಗಳಿಂದ ವಾಸಿಸುತ್ತಿರುವವರ ಗುರುತಿನ ಚೀಟಿ ಪಡೆದು ಸಕ್ರಮಗೊಳಿಸಿ ಕೊಡುವ ನಿಟ್ಟಿನಲ್ಲಿ ನಗರಸಭೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆಯ ಪೌರಾಯುಕ್ತ ಚಲಪತಿ ಮತ್ತು ಅಧಿಕಾರಿಗಳ ತಿಳಿಸಿದರು.
ನಗರಸಭೆಯ ಪೌರಾಯುಕ್ತ ಚಲಪತಿ ಮಾತನಾಡಿ ಶಾಸಕರ ಅವಿರತ ಹೋರಾಟ ಮತ್ತು ಸರ್ಕಾರದ ಆಶಯದಂತೆ ನಿರ್ಮಾಣಗೊಳ್ಳುತ್ತಿರುವ ಹೌಸಿಂಗ್ ಫಾರ್ ಆಲ್ ಯೋಜನೆಯು ಬಡ ಹಾಗೂ ನಿರ್ಗತಿಕರ ಬದುಕಿಗೆ ಭದ್ರತೆ ಯಾಗಿದ್ದು ನಗರಸಭೆ ಕೂಡ ಈ ಯೋಜನೆಯ ಅನುಷ್ಠಾನಕ್ಕೆ ಉತ್ಸುಕತೆ ಹೊಂದಿದೆ ಈಗಾಗಲೇ ಆಯ್ಕೆಯಾಗಿರುವ ಫಲಾನುಭವಿಗಳು ಸರ್ಕಾರದ ನಿರ್ದೇಶನದಂತೆ ಅಗತ್ಯ ದಾಖಲೆಗಳನ್ನು ಒದಗಿಸಿ ಕೊಡುವ ಮೂಲಕ ಸ್ವಂತ ಮನೆ ಮಾಡಿಕೊಳ್ಳುವ ಕನಸನ್ನ ನನಸು ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಾನಂದ್.ನಗರಸಭೆಯ ಸಹಾಯಕ ಅಭಿಯಂತರ ಆನಂದ್.ನಗರಸಭೆ ಸದಸ್ಯರಾದ ಗಿರೀಶ್.ಕಾಂತೇಶ್.ಜಿಟಿ ಗಣೇಶ್.ಅನ್ನಪೂರ್ಣ.ಭಾಸ್ಕರ್.ಮುಖಂಡರಾದ ಜಿ ಎನ್ ಮನೋಜ್ ಕುಮಾರ್.ಶಿವನ್ ರಾಜ್.ರಘು ಹಾಗೂ ನಗರಸಭೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು
Tags
ಅರಸೀಕೆರೆ