ಹಾಸನ: ಮಾಜಿ ಶಾಸಕ ದಿವಂಗತ ಹೆಚ್.ಎಸ್. ಪ್ರಕಾಶ್ ರವರ ಪುತ್ರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಹೆಚ್.ಪಿ. ಸ್ವರೂಪ್ ರವರ 38ನೇ ವರ್ಷದ ಜನ್ಮದಿನದಂದು ಜೆಡಿಎಸ್ ಪಕ್ಷದ ಸಂಘಟನೆಗೆ ಚಾಲನೆ ಕೊಡಲಾಯಿತು
.
ನಗರದ ಕುವೆಂಪು ರಸ್ತೆ, ಬಡಾವಣೆ ಪೊಲೀಸ್ ಠಾಣೆ ಬಳಿಯಿಂದ ನೂರಾರು ಜನ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಒಂದೆಡೆ ಸೇರಿ ಕಾರಿನ ರ‍್ಯಾಲಿ ಮೂಲಕ ಹೆಚ್.ಪಿ. ಸ್ವರೂಪ್ ಮನೆಗೆ ತೆರಳಿ ಹುಟ್ಟು ಹಬ್ಬದ ಶುಭ ಕೋರಿದರು
.
ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ನಗರಸಭೆ ಸದಸ್ಯರಾದ ವಾಸುದೇವ್ ರವರು, ಹಾಸನ ಕ್ಷೇತ್ರದಲ್ಲಿ ಶಾಸಕರಾಗಿದ್ದ ದಿವಂಗತ ಹೆಚ್.ಎಸ್. ಪ್ರಕಾಶ್ ರವರ ಪುತ್ರ ಜಿಪಂ ಉಪಾಧ್ಯಕ್ಷರಾದ ಹೆಚ್.ಪಿ. ಸ್ವರೂಪ್ ರವರ ಜನ್ಮದಿನದ ಅಂಗವಾಗಿ ಶುಭ ಕೋರಲು ಹೊರಟಿದ್ದೇವೆ ಎಂದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಆಶೀರ್ವಾದದೊಂದಿಗೆ, ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಮಾರ್ಗದರ್ಶನದಲ್ಲಿ ಹಾಸನ ನಗರದಲ್ಲಿ ಶನಿವಾರದಂದು ಪಕ್ಷ ಸಂಘಟನೆಗೆ ಚಾಲನೆ ಕೊಡುತ್ತಿದ್ದೇವೆ. ಎಲ್ಲಾ ಒಮ್ಮತದಿಂದ ಇನ್ನು ಮುಂದೆ ಪಕ್ಷ ಸಂಘಟಿಸುವುದರ ಜೊತೆಗೆ ಸ್ವರೂಪರವರ ಹುಟ್ಟು ಹಬ್ಬಕ್ಕೆ ಶುಭ ಕೋರಲು ಒಟ್ಟಿಗೆ ಹೊರಟಿದ್ದೇವೆ. ಯುವಕನಿಗೆ ಆರ್ಶೀರ್ವದಿಸಿ ಪಕ್ಷದ ಬಲವರ್ಧನೆಗೆ ಮುಂದಾಗುತ್ತೇವೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಮುಖಂಡರಾದ ನಗರಸಭೆ ಮಾಜಿ ಸದಸ್ಯ ರವಿಶಂಕರ್ ಮಾತನಾಡಿ, ಮುಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಎಂದು ಬಿಂಬಿಸಲು, ಭ್ರಷ್ಟಚಾರದಿಂದು ತುಂಬಿ ತುಳುಕುತ್ತಿರುವ ಬಿಜೆಪಿ ಸರಕಾರದ ವಿರುದ್ಧವಾಗಿ ಜೆಡಿಎಸ್ ಸಂಘಟನೆಯನ್ನು ನಮ್ಮ ನಾಯಕರಾದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ರವರ ಹುಟ್ಟು ಹಬ್ಬ ಆಚರಣೆಯೊಂದಿಗೆ ಪ್ರಾರಂಭಿಸುತ್ತಿದ್ದೇವೆ. ಪ್ರತಿ ಮನೆ ಮನೆಗೂ ತಿಳಿಸಿ ೨೦೨೩ರ ಮುಂದಿನ ವಿಧಾನಸಭಾ ಚುನಾವಣೆಗೆ ಹೆಚ್.ಡಿ. ಕುಮಾರಸ್ವಾಮಿಯವರನ್ನು ಸಿಎಂ ಆಗಿ ನೋಡಲಿದ್ದೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವುದಕ್ಕಾಗಿ ಪಕ್ಷ ಸಂಘಟಿಸುವ ಮೂಲಕ ಬಲವರ್ಧನೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.