ರಾಜ್ಯಾದ್ಯಂತ ವೀಕೆಂಡ್​ ಕರ್ಫ್ಯೂ: ಬಹುತೇಕ ವ್ಯಾಪಾರ ವಹಿವಾಟು ಬಂದ್​, ವಾಹನ ಸಂಚಾರ ವಿರಳ

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ನಿನ್ನೆ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ತುರ್ತು ಚಟುವಟಿಕೆಗಳು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ‌ ಹಿನ್ನೆಲೆ ಬಹುತೇಕ ಕಡೆ ರಸ್ತೆಗಳು ಖಾಲಿ ಹೊಡೆಯುತ್ತಿವೆ. ಬಸ್​ ಹಾಗೂ ವಾಹನ ಸಂಚಾರ ವಿರಳವಾಗಿದೆ.


ಹಲವೆಡೆ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ತುರ್ತು ಸೇವೆ ಬಿಟ್ಟು ಉಳಿದ ವಾಹನಗಳಿಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಎರಡು ದಿನಗಳ ಕಾಲ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿರಲಿದೆ. ಶಾಪಿಂಗ್ ಮಾಲ್, ಸಿನಿಮಾ ಹಾಲ್, ಯೋಗಾ ಸೆಂಟರ್, ​ಸ್ವಿಮ್ಮಿಂಗ್ ಪೂಲ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ಪಾ, ಜಿಮ್ ಎಲ್ಲವೂ ಕೂಡ ಈಗಾಗ್ಲೆ ಬಂದ್​ ಆಗಿವೆ.

ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ವ್ಯಾಪಾರ ನಡೆಸಿದ ಮಾರಾಟಗಾರರು ಮನೆಗಳಿಗೆ ವಾಪಸ್ಸಾಗ್ತಿದ್ದು, ನಿಧಾನಗತಿಯಲ್ಲಿ ಮಾರ್ಕೆಟ್​ ಮುಚ್ಚಲ್ಪಡ್ತಿದೆ. ಬೆಳಗ್ಗೆ ಮಾರ್ಕೆಟ್​​ನಲ್ಲಿ ಜನ ಸಂದಣಿ ಹೆಚ್ಚಿದ್ದ ಹಿನ್ನೆಲೆ ಮಾರ್ಷಲ್ಸ್ ಜೊತೆಗೆ ಬಿಬಿಎಂಪಿ ಅಧಿಕಾರಿಗಳು ಫೀಲ್ಡ್​​​ಗೆ  ಇಳಿದಿದ್ದರು. ಇದರ ಬೆನ್ನಲ್ಲೇ ಒಂದೊಂದಾಗಿ ವ್ಯಾಪಾರಸ್ಥರು ಅಂಗಡಿಗಳನ್ನ ಮುಚ್ಚುತ್ತಿದ್ದಾರೆ. ಸದ್ಯಕ್ಕೆ ಮುಕ್ಕಾಲು ಭಾಗ ಕೆ.ಆರ್ ಮಾರುಕಟ್ಟೆ ಖಾಲಿಯಾಗಿದೆ. ಈ ಮಧ್ಯೆ ಮಾರ್ಕೆಟ್​ನಲ್ಲಿ ಮಾಸ್ಕ್ ಹಾಕದಿರುವವರಿಗೆ ಮಾರ್ಷಲ್​ಗಳು ಫೈನ್ ಹಾಕಿದ್ದಾರೆ. 10 ಗಂಟೆಗೆ ತನಕ ಮಾರ್ಕೆಟ್​​ನಲ್ಲಿ ಹಣ್ಣು ತರಕಾರಿ ಖರೀದಿಗೆ ಅವಕಾಶವಿದೆ. ಬಳಿಕ ಪೊಲೀಸರು ಫೀಲ್ಡಿಗಿಳಿಯಲಿದ್ದಾರೆ.

ಇನ್ನು ಶಿವಾಜಿನಗರ ಸೇರಿದಂತೆ ನಗರದ ಬಹುತೇಕ ರೋಡ್ ಗಳು ಖಾಲಿ ಹೊಡೆಯುತ್ತಿವೆ. ಯಶವಂತಪುರ ,ಮಲ್ಲೇಶ್ವರಂ, ಆನಂದ್ ರಾವ್ ಸರ್ಕಲ್ ಬಳಿ ಪೊಲೀಸರು ವಾಹನಗಳನ್ನ ತಪಾಸಣೆ ಮಾಡಿ ಬಿಡುತ್ತಿದ್ದಾರೆ. ಅಗತ್ಯ ವಸ್ತುಗಳ ಅಂಗಡಿ‌ ಬಿಟ್ಟು ಮಿಕ್ಕ ಎಲ್ಲಾ ವ್ಯಾಪಾರ ವಹಿವಾಟುಗಳು ಬಂದ್​ ಆಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಸಾರ್ವಜನಿಕರು ಹೊರ‌ ಬರ್ತಿದ್ದಾರೆ.

ಬೆಳಗಾವಿ, ಮೈಸೂರು, ಹಾಸನ ಸೇರಿದಂತೆ ಕೆಲವೆಡೆ 10 ಗಂಟೆಯಾದ್ರೂ ಜನರು ತರಕಾರಿ ಖರೀದಿಗೆ ಓಡಾಟ ನಡೆಸುತ್ತಿರೋದು ಕಂಡುಬಂದಿದೆ.

Post a Comment

Previous Post Next Post