ಹಾಸನ ಏ.೦೯ :-ಕೋವಿಡ್ ಎರಡನೇ ಅಲೆಯು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇದರ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳು ಜಿಲ್ಲಾಡಳಿತದೊಂದಿಗೆ ಕಡ್ಡಾಯವಾಗಿ ಸಹಕರಿಸಲೇ ಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿAದು ಭಾರತೀಯ ವೈದ್ಯಕೀಯ ಸಂಸ್ಥೆ ಪ್ರತಿನಿಧಿಗಳು, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದÀ ಅವರು ಕೋವಿಡ್ ಮೊದಲ ಹಂತದ ಅಲೆಯ ಸಂದರ್ಭ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಂದ ನಿರೀಕ್ಷಿತ ಸಹಕಾರ ದೊರೆತಿಲ್ಲ ಈಗ ಎರಡನೇ ಅಲೆ ಮೂರುಪಟ್ಟು ವೇಗವಾಗಿ ವ್ಯಾಪಿಸುತ್ತಿದ್ದು ಮುಂದಿನ ೧೫ ದಿನಗಳಲ್ಲಿ ಪ್ರತಿನಿತ್ಯ ೩೦೦ ಕ್ಕೂ ಅಧಿಕ ಮಂದಿ ಸೋಂಕಿತರಾಗುವ ಸಂಭವವಿದೆ ಹಾಗಾಗಿ ಈ ಬಾರಿಯು ನಿರಾಸಕ್ತಿ ತೋರಿದರೆ ಅಂತಹ ಆಸ್ಪತ್ರೆಗಳಲ್ಲಿ ಹೊರರೋಗಿ ಪರೀಕ್ಷಾ ವ್ಯವಸ್ಥೆಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಇದೊಂದು ಸಂದಿಗ್ದ ಪರಿಸ್ಥಿತಿ ಖಾಸಗಿ ಆಸ್ಪತ್ರೆಗಳು ಸಾಮಾಜಿಕ ಜವಾಬ್ದಾರಿ ಅರಿಯಬೇಕು ಕೇವಲ ಲಾಭದ ಉದ್ದೇಶಕ್ಕೆ ಮಾತ್ರ ಆಧ್ಯತೆ ನೀಡದೆ, ಮಾನವೀಯ ನೆಲೆಗಟ್ಟಿನಲ್ಲಿಯೂ ಸೇವೆ ಒದಗಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.
ಕೋವಿಡ್ ೧೯ ಅನ್ನು ವಿಕೋಪ ನಿರ್ವಹಣಾ ಕಾಯ್ದೆ ವ್ಯಾಪ್ತಿಗೆ ತಂದು ಸರ್ಕಾರ ಆದೇಶ ಹೊರಡಿಸಿದ್ದು, ಅದರಂತೆ ಎಲ್ಲಾ ಆಸ್ಪತ್ರೆಗಳು ಕನಿಷ್ಠ ಶೇ.೫೦ ರಷ್ಟು ಹಾಸಿಗೆಗಳನ್ನು ಕೋವಿಡ್-೧೯ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಬೇಕು ಹಾಗೂ ಸರ್ಕಾರದಿಂದ ರೆಫರ್ ಮಾಡಲಾಗುವ ಸೋಂಕಿತರಿಗೆ ಸರ್ಕಾರದಿಂದ ಈಗಾಗಲೇ ನಿಗದಿಪಡಿಸಿರುವ ದರ ಪಾವತಿಯಾಗಲಿದೆ.
ಖಾಸಗಿ ಆಸ್ಪತ್ರೆಗೆ ನೇರವಾಗಿ ದಾಖಲಿಸಿಕೊಳ್ಳುವ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸರ್ಕಾರವೇ ಪ್ರತ್ಯೇಕ ದರ ನಿಗಧಿಪಡಿಸಿದ್ದು, ಅದನ್ನು ಮೀರಿ ಬಿಲ್ ಪಡೆಯುವಂತಿಲ್ಲ ಎಂದು ಆರ್.ಗಿರೀಶ್ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್ ಅವರು ಮಾತನಾಡಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಆಗಮಿಸುವ ಹೊರರೋಗಿಗಳ ಹಾಗೂ ಅವರೊಂದಿಗೆ ಬರುವವರಿಗೆ ಆರೋಗ್ಯ ಇಲಾಖೆ ವತಿಯಿಂದ ಪ್ರತಿದಿನ ಉಚಿತ ಆರ್.ಟಿ.ಪಿ.ಸಿ.ಆರ್ ತಪಾಸಣೆ ಮಾಡಲಾಗುವುದು. ಅದಕ್ಕಾಗಿ ಸಮಯ ಹಾಗೂ ಸ್ಥಳ ನಿಗದಿಮಾಡಿಕೊಡಬೇಕು ಅಲ್ಲದೇ ಖಾಸಗಿ ಆಸ್ಪತ್ರೆಗಳ ಗಮನಕ್ಕೆ ಬರುವ ಸಾರಿ ಮತ್ತು ಐ.ಎಲ್.ಐ ಪ್ರಕರಣಗಳ ವಿವರಗಳನ್ನು ನಿರ್ದಿಷ್ಟ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ೨೪ ಗಂಟೆಯೊಳಗೆ ಪ್ರತಿ ಕೋವಿಡ್ ಸಾವಿನ ಆಡಿಟ್ ವರದಿ ಸರ್ಕಾರಕ್ಕೆ ನೀಡಬೇಕಾಗಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಕೋವಿಡ್ ಸಾವಿನ ಬಗ್ಗೆ ಮೃತಪಟ್ಟ ಅರ್ಧ ಗಂಟೆಯಲ್ಲಿ ಜಿಲ್ಲಾಡಳಿತದೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು ಎಂದರು.
ಭಾರತೀಯ ವೈದ್ಯಕೀಯ ಮಂಡಳಿ ಜಿಲ್ಲಾಧ್ಯಕ್ಷರಾದ ಡಾ|| ರಮೇಶ್ ಮಾತನಾಡಿ ಸರ್ಕಾರ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಸುಶ್ರೂಷಕರ ಆರೋಗ್ಯ ಹಾಗೂ ಜೀವನ ಭದ್ರತೆಯ ಹಿತಸಂರಕ್ಷಿಸಬೇಕು ಈ ಹಿಂದೆ ಕೋವಿಡ್‌ನಿಂದ ಮೃತಪಟ್ಟ ಇಬ್ಬರು ಖಾಸಗಿ ಆಸ್ಪತ್ರೆ ವೈದ್ಯರಿಗೆ ವಿಮಾ ಹಣ ಒದಗಿಸಿಕೊಡಬೇಕು ಹಾಗೂ ಮುಂದೆ ಖಾಸಗಿ ಆಸ್ಪತ್ರೆಗಳ ವೈದ್ಯರ ಮತ್ತು ಸುಶ್ರೂಷಕರಿಗೂ ಉಚಿತವಾಗಿ ಕೋವಿಡ್ ಚಿಕಿತ್ಸೆ ಒದಗಿಸಿ ಎಂದು ಮನವಿ ಮಾಡಿದರು.
ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ವಿಮೆ ಹಣ ಒದಗಿಸುವ ಬಗ್ಗೆ ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.
ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷರಾದ ಡಾ|| ಅಬ್ದುಲ್ ಬಷೀರ್ ಹಾಗೂ ಜಿಲ್ಲಾ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು, ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
