ಸರ್ ನಮಸ್ಕಾರ,
ಹಾಸನದ ಸಮಗ್ರ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಒಂದು ವಿಶೇಷವಾದ ಸುದ್ದಿ ಜಾಲ ಈ ನಮ್ಮ 'ಹಾಸನ ಸೀಮೆ.ಇನ್', ಈ ನಮ್ಮ ಸುದ್ದಿ ಜಾಲದ ಮೂಲಕ ತಮಗೊಂದು ಪತ್ರ ಬರೆಯುತ್ತಿದ್ದೇವೆ.
ಮೊದಲಿಗೆ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಘನ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಗೆ ಪೂರಕವಾಗಿ ಜಿಲ್ಲೆಯಲ್ಲಿಯೂ ಶಿಸ್ತಿನ ಕ್ರಮಗಳನ್ನು ತಾವು ಕೈಗೊಂಡು ಕೊರೋನಾ ತಡೆಗಟ್ಟುವ ಪ್ರಯತ್ನದಲ್ಲಿ ತೊಡಗಿರುವಿರಿ ಅದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಹಾಸನ ಸೀಮೆಯ ಜನತೆಯ ಪರವಾಗಿ ಅಭಿನಂದನೆಗಳು..!!
ಸರ್ ಈ ಪತ್ರ ಬರೆಯಲು ಕಾರಣ ಇಷ್ಟೇ, ಜಿಲ್ಲೆಯ ಜನತೆಯ ಪರವಾಗಿ ಒಂದು ವಿನಂತಿ ಮಾಡಬೇಕಿತ್ತು.
ಕೊರೋನಾ ಎಂಬ ಮಹಾಮಾರಿ ಕಳೆದ ಒಂದು ವರ್ಷದಿಂದ ಪ್ರತಿಯೊಬ್ಬರ ಜೀವದ ಜೊತೆ, ಜೀವನದ ಜೊತೆ, ಭಾವನೆಗಳ ಜೊತೆಗೆ ಅಟ್ಟಹಾಸ ಮಾಡುತ್ತಿದ್ದು, 'ಏಲವೋ ಹುಲುಮಾನವ' ಎಂದು ಕೇಕೆ ಹಾಕುತ್ತಿದೆ. ಅದರ ಆರ್ಭಟಕ್ಕೆ ಅದೆಷ್ಟೇ ಗಟ್ಟಿತನದವರಾದರೂ ಒಂದು ಕ್ಷಣ ವಿಚಲಿತರಾಗುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಪ್ರತಿಯೊಬ್ಬರ ಜೀವನದಲ್ಲಿ, ಪ್ರತಿಯೊಂದು ಕ್ಷೇತ್ರದಲ್ಲಿ ಅಸ್ತವ್ಯಸ್ತತೆ ಉಂಟಾಗಿದೆ, ಕಲಿಯುವ ವಯಸ್ಸಿನಲ್ಲಿರುವವರಿಗರ ಶಿಕ್ಷಣ ಸಿಗುತ್ತಿಲ್ಲ, ಹೊಸ ಪ್ರಯತ್ನಗಳಿಗೆ ಹುಮ್ಮಸ್ಸಿನಿಂದ ಮುನ್ನುಗ್ಗುವ ಯುವಕರಿಗೆ ಅವಕಾಶಗಳಿಲ್ಲ, ಸಂಸಾರದ ಜವಾಬ್ದಾರಿಯನ್ನೊತ್ತು ದುಡಿಯವ ಕೈಗಳಿಗೆ ದುಡಿಮೆಯೇ ಇಲ್ಲ, ಹೊಸ ಆವಿಷ್ಕಾರಗಳಿಲ್ಲ, ಸಂತಸ ಸಂಭ್ರಮ ಸಡಗರಗಳಿಲ್ಲ, ಸಿನಿಮಾ ಕ್ರೀಡೆ ಮನರಂಜನೆ ಸೇರಿದಂತೆ ಯಾವುದೇ ಮನರಂಜನೆಗಳು ಜನರಿಗೆ ಸಿಗುತ್ತಿಲ್ಲ.
ಇಂತಹ ಸಾವಿರಾರು ಸಮಸ್ಯೆಗಳನ್ನು ಒಂದು ವರ್ಷದಿಂದ ನಿರಂತರವಾಗಿ ಅನುಭವಿಸುತ್ತಿದ್ದರು ಅದ್ಯಾವುದಕ್ಕೂ ಎದೆಗುಂದದೆ, ಕಿಂಚಿತ್ತೂ ಕುಗ್ಗದೆ 'ಜೀವ ಇದ್ದರೆ ಜೀವನ' ಎಂದು ತಮಗೆ ತಾವೇ ಹೇಳಿಕೊಂಡು ಎಲ್ಲವನ್ನೂ ಸಹಿಸಿಕೊಂಡು ಮುನ್ನಡೆಯುತ್ತಿದ್ದಾರೆ.
ಜನರು ಹೀಗೆ ಮುನ್ನಡೆಯಲು ಕಾರಣ ಇಷ್ಟೇ ಅವರೊಳಗಿನ ಆತ್ಮಸ್ಥೈರ್ಯ. ಈಗ ಒಂದು ವರ್ಷ ವ್ಯರ್ಥವಾಗಿದೆ ಮತ್ತೊಂದು ವರ್ಷ ಹೋದರೆನಂತೆ ನಾವು ಮತ್ತೆ ಪುಟಿದೇಳುತ್ತೇವೆ ಎಂಬ ಆಗಾಧ ಆತ್ಮವಿಶ್ವಾಸ.
ಸರ್ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಗೆ ಪೂರಕವಾಗಿ ನೀವು ಶಿಸ್ತಿನ ಕ್ರಮ ಕೈಗೊಂಡಿರುವಿರಿ ಈಗ ಜನರ ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯಕ್ಕೆ ಪೂರಕವಾಗಿ ಒಂದು ಹೆಜ್ಜೆ ಮುಂದಿಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ
ಆರೋಗ್ಯ ಇಲಾಖೆ ಪ್ರತಿನಿತ್ಯವೂ ಕೋವಿಡ್ ವರದಿ ನೀಡುತ್ತಿದೆ, ಅದರ ಪ್ರಕಾರ ಹೇಳುವುದಾದರೆ ದಿನಕ್ಕೆ 3000-4000 ಜನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ ಅದರಲ್ಲಿ 300-400 ಜನಕ್ಕೆ ಪಾಸಿಟಿವ್ ಬರುತ್ತಿದೆ 5-8 ಜನ ಸಾವನ್ನಪ್ಪುತ್ತಿದ್ದಾರೆ. ಒಂದು ವೇಳೆ ಒಂದು ಸಾವು ಆಗದಿದ್ದರೆ ನಮಗೆ ಅದು ಸಮಾಧಾನದ ಸುದ್ದಿ. ಹಾಗಂತ ಅದೇ ಸಂತಸದ ಸುದ್ದಿ ಅಲ್ಲ ಯಾಕೆಂದರೆ ನಾಳೆ ಹೇಗೋ ಏನೋ ಅನ್ನುವ ಭಯ ಇದ್ದೆ ಇದಿಯಲ್ಲಾ..!
ಸರ್ ಹಾಗೆಯೇ ಒಮ್ಮೆ ಅವಲೋಕಿಸಿಕೊಳ್ಳಿ, ಮುಂಜಾಗ್ರತಾ ಕ್ರಮವಾಗಿಯೋ ಅಥವಾ ಚಳಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲೋ ಅಥವಾ ಕೆಮ್ಮ ಶೀತ ಉಸಿರಾಟ ಸಮಸ್ಯೆಯಿಂದಲೋ ಕೊರೋನಾ ಪರೀಕ್ಷೆ ಮಾಡಿಸಲು ಸಾವಿರಾರು ಜನ ಆಸ್ಪತ್ರೆಯ ಮೆಟ್ಟಿಲೇರುತ್ತಿದ್ದಾರೆ ನೆಗಿಟೀವ್ ಬಂದರೆ ಸಮಾಧಾನದಿಂದಿರೋಣಾ, ಒಂದ್ವೇಳೆ ಪಾಸಿಟಿವ್ ಬಂದರೆ ಧೈರ್ಯದಿಂದ ಎದುರಿಸೋಣಾ ಎನ್ನುವ ಆತ್ಮವಿಶ್ವಾದ ಜೊತೆಗೆ ಪರೀಕ್ಷೆಗಾಗಿ ಸಾಲಿನಲ್ಲಿ ನಿಂತಿರುತ್ತಾರೆ.
ಹೀಗಿರುವಾಗ ಬದುಕಬೇಕು ಬಾಳಬೇಕು ಎನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಸಾವಿರಾರು ಜನರ ಕಣ್ಣೆದುರಿಗೆ ವಿಧಿಯಾಟಕ್ಕೆ ಬಲಿಯಾದ ಬೆರಳೆಣಿಕೆಯಷ್ಟು ಶವಗಳನ್ನು ಹತ್ತಿಂದಿತ್ತ ಇತ್ತಿಂದತ್ತ ಸಾಗಿಸುತ್ತಿದ್ದರೆ ಪರಿಸ್ಥಿತಿ ಏನಾಗಬಹುದು..?? ಅವರ ಆತ್ಮಸ್ಥೈರ್ಯಕ್ಕೆ ಏನನಿಸಬಹುದು...??
ಸರ್ ಹಾಸನ ಸೀಮೆಯ ಪ್ರತಿಯೊಬ್ಬ ನಾಗರೀಕನ ಪರವಾಗಿ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವುದಿಷ್ಟೆ ನಮ್ಮ ಹಾಸನದ ಸರ್ಕಾರಿ ಆಸ್ಪತ್ರೆ ವಿಶಾಲವಾಗಿದೆ, ನಾಲ್ಕೈದು ದ್ವಾರಗಳು ಆ ಆಸ್ಪತ್ರೆಗೆ ಇದೆ.
ಈಗಾಗಲೇ ಆರೋಗ್ಯ ಇಲಾಖೆ ಕೊರೋನಾ ಪರೀಕ್ಷೆಗೆ ಬರುವವರಿಗೆ, ಸಾಲಿನಲ್ಲಿ ಒಳಗೆ ಬರಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ ಆದರೆ ಕೊರೋನಾದಿಂದ ಬಲಿಯಾದವರ ಶವಗಳನ್ನು ಸಾಲಿನಲ್ಲಿ ನಿಂತಿರುವವರ ಮುಂದೆಯೇ ಸಾಗಿಸುತ್ತಿದ್ದಾರೆ.
ಸರ್ ತಾವು ಈ ಸಂಧರ್ಭದಲ್ಲಿ ಜನರ ಆತ್ಮಸ್ಥೈರ್ಯಕ್ಕೆ ಪೂರಕವಾಗಿ ಕ್ರಮ ತೆಗೆದುಕೊಳ್ಳುವ ಅಗತ್ಯತೆ ಇದೆ, ಆದ ಕಾರಣ ದಯವಿಟ್ಟು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳನ್ನು ಸಾಗಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆಗೆ ಈ ಕೂಡಲೇ ಆದೇಶ ರವಾನಿಸಬೇಕಾಗಿ ಈ ಮೂಲಕ ಕೋರಿಕೊಳ್ಳುತ್ತೇವೆ.
ಪತ್ರ ಬರೆದವರು - ಯದೀಶ್, ನಿರೂಪಕ