ಹಾಸನ ಏ.೨೮ –ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲಿ ೩೦ಕ್ಕೂ ಹೆಚ್ಚು ಬೆಡ್ ಹೊಂದಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಶೇ ೮೦% ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಬೇಕು ಹಾಗೂ ಶೇ ೫೦ರಷ್ಟು ಬೆಡ್‌ಗಳನ್ನು ನಾಳೆಯಿಂದಲೇ ಸರ್ಕಾರದ ಬಳಕೆಗೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರಿಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು ಈವರೆಗೆ ಕೇವಲ ಆರು ಆಸ್ಪತ್ರೆಗಳು ಮಾತ್ರ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿ ನೋಂದಣಿಯಾಗಿವೆ. ಉಳಿದವು ನಾಳೆಯೊಳಗೆ ನೊಂದಾಯಿಸಿಕೊಳ್ಳಬೇಕು. ಆಗ ಜಿಲ್ಲಾಡಳಿತದಿಂದ ವಿಕೋಪ ನಿರ್ವಹಣೆ ಕಾಯಿದೆಯಡಿ ಕಳಿಸಲಾಗುವ ಸೋಂಕಿತರ ನಿಗಧಿತ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಮರುಪಾವತಿಯಾಗಲಿದೆ ಇಲ್ಲದಿದ್ದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.
ಕೋವಿಡ್ ಚಿಕಿತ್ಸೆಗೆ ಸರ್ಕಾರಕ್ಕೆ ಬೆಡ್‌ಗಳನ್ನು ಒದಗಿಸದ ಆಸ್ಪತ್ರೆಗಳ ಹೊರರೋಗಿಗಳ ತಪಾಸಣಾ ಅನುಮತಿಯನ್ನು ಕೂಡಲೇ ರದ್ದುಪಡಿಸಲಾಗುವುದು ಇದು ಅಂತಿಮ ಸೂಚನೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವರ್ ಚುಚ್ಚುಮದ್ದು ಪೂರೈಕೆಯಲ್ಲಿ ಕೊರತೆ ಇದ್ದು ಅದನ್ನು ಸರಿಪಡಿಸುವಂತೆ ಸಕಾರಣಗಳೊಂದಿಗೆ ರಾಜ್ಯ ಔಷಧಿ ನಿಯಂತ್ರಣಾಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡಲಾಗಿದೆ. ಒಂದೆರೆಡು ದಿನಗಳಲ್ಲಿ ಇದು ಬಗೆಹರಿಯಲಿದೆ ಸರ್ಕಾರದಿಂದ ಕಳಿಸುವ ಸೋಂಕಿತರಿಗೆ ಅಗತ್ಯ ಚುಚ್ಚುಮದ್ದನ್ನು ಜಿಲ್ಲಾಡಳಿತದಿಂದಲೇ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ರೆಮ್‌ಡಿಸಿವರ್ ಚುಚ್ಚುಮದ್ದು ಅನಗತ್ಯವಾಗಿ ಬಳಸುವಂತಿಲ್ಲ ಅದೇ ರೀತಿ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಜೂಮ್ ಸಭೆಯಲ್ಲಿ ನಿರಂತರವಾಗಿ ಕೋವಿಡ್ ಚಿಕಿತ್ಸಾ ಕ್ರಮಗಳ ಬಗ್ಗೆ ತಜ್ಞರು ಪ್ರತಿದಿನ ಮಾಹಿತಿ ನೀಡಲಿದ್ದಾರೆ. ಅಲ್ಲದೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯನ್ನು ಜಿಲ್ಲೆಯ ಕೋವಿಡ್ ಚಿಕಿತ್ಸಾ ಸಲಹೆಗೆ ನೋಡಲ್ ಆಸ್ಪತ್ರೆಯನ್ನಾಗಿ ನೇಮಿಸಿದ್ದು, ಅಲ್ಲಿನ ವೈದ್ಯರಿಂದಲೂ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದರು.
ಎಲ್ಲಾ ಆಸ್ಪತ್ರೆಗಳು ಕೋವಿಡ್ ಸಂದಿಗ್ದ ಪರಿಸ್ಥಿತಿ ನಿಭಾಯಿಸಲು ಕೈಜೋಡಿಸಬೇಕು .ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ ಕಡಿಮೆಯಾಗಬೇಕು ಎಂದ ಅವರು ಸೋಂಕಿನ ಪ್ರಮಾಣ ತುಂಬಾ ಇರುವುದರಿಂದ ಖಾಸಗಿ ಆಸ್ಪತ್ರೆಗಳು ಬೆಡ್‌ಗಳ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಹಾಜರಿದ್ದರು. ಎಲ್ಲರೂ ತಮ್ಮ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲು, ಹಾಗೂ ಶೇ ೫೦ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಬಿಟ್ಟು ಕೊಡಲು ಸಿದ್ದವಿರುವುದಾಗಿ ತಿಳಿಸಿದರು. ಅಲ್ಲದೆ ಸುವರ್ಣ ಆರೋಗ್ಯ ಸೇವಾ ಯೋಜನೆಯಡಿ ನೋಂದಣಿ ಆಗಿರದ ಆಸ್ಪತ್ರೆಗಳು ಈಗಾಗಲೆ ಹೊಸದಾಗಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.
ಈ ಅರ್ಜಿ ಪರಿಶೀಲಿಸಿ ತಕ್ಷಣವೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಸುವರ್ಣ ಆರೋಗ್ಯ ಟ್ರಸ್ಟ್ನ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್,ಭಾರತೀಯ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಡಾ|| ರಮೇಶ್, ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷರಾದ ಡಾ|| ಬಷೀರ್ ಅಹಮದ್, ಡಾ|| ವೇಣುಗೋಪಾಲ್ ಮತ್ತಿತರರು ಹಾಜರಿದ್ದರು