ಸಾರಿಗೆ ನೌಕರರು 6 ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸುತ್ತಿದ್ದಾರೆ. ಡಿಸೆಂಬರ್ ನಲ್ಲಿ ನಡೆದ ಮುಷ್ಕರದ ವೇಳೆ ಶಿಫಾರಸು ಜಾರಿಗೆ 3 ತಿಂಗಳ ಗಡುವು ನೀಡಿದ್ದರು. ಮಾರ್ಚ್ 15 ಕ್ಕೆ ಗಡುವಿನ ಅವಧಿ ಮುಕ್ತಾಯಗೊಂಡು ಮತ್ತೆ ಮುಷ್ಕರ ನಡೆಸಲು ಮಾರ್ಚ್ 16 ಕ್ಕೆ 22 ದಿನಗಳ ನೋಟಿಸ್ ನೀಡಿದ್ದರು. ಅದರಂತೆ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.
ಇನ್ನು ರಾಜ್ಯಾದ್ಯಂತ ಸಾರಿಗೆ ನೌಕರರು ಇಂದಿನಿಂದ ಮುಷ್ಕರ ಹೂಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನನುಕೂಲ ಉಂಟಾಗದಂತೆ ರಾಜ್ಯ ಸರ್ಕಾರವು ಸಾಲು ಸಾಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದು, ಖಾಸಗಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿದೆ.
ಸಾರಿಗೆ ನೌಕರರ ಬೇಡಿಕೆಗಳೇನು?
ಸಾರಿಗೆ ನೌಕರರು ಕಳೆದ ವರ್ಷದ ಡಿಸೆಂಬರ್ ನಲ್ಲಿ 10 ಬೇಡಿಕೆಗಳಿಗಾಗಿ ಮುಷ್ಕರ ನಡೆಸಿದ್ದರು. ಅದರಲ್ಲಿ ಸರ್ಕಾರಿ ನೌಕರರನ್ನಾಗಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಉಳಿದ 9 ಬೇಡಿಕೆಗಳಿಗೆ 3 ತಿಂಗಳ ಕಾಲಾವಕಾಶ ಕೇಳಿತ್ತು. ಕೊರೊನಾದಿಂದ ಮೃತಪ್ಟಟ ನೌಕರರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ, ವಿವಿಧ ಭತ್ಯೆ ಸೇರಿ 8 ಬೇಡಿಕೆಗಳನ್ನು ಈಗಾಗಲೇ ಸರ್ಕಾರ ಈಡೇರಿಸಿದೆ
ಖಾಸಗಿ ಬಸ್ ಗಳು ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ಸು ನಿಲ್ದಾಣಗಳಿಂದ ಕಾರ್ಯನಿರ್ವಹಿಸಲು ರಾಜ್ಯಾದ್ಯಂತ ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.