ಜಿಲ್ಲೆಯಲ್ಲಿ ಕೊರೋನಾ ಸೋಂಕು ಉಚ್ಛ್ರಾಯ ಸ್ಥಿತಿ ತಲುಪಿರುವ ಹೊತ್ತಿನಲ್ಲಿ ,ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ ಕೃಷ್ಣಮೂರ್ತಿಯವರನ್ನು ವರ್ಗಾಯಿಸ ಲಾಗಿದೆ. ಈ ಬೆಳವಣಿಗೆಯಿಂದ ಸಿಟ್ಟಿಗೆದ್ದಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ ಸರ್ಕಾರ ತಕ್ಷಣವೇ ಅವರ ವರ್ಗಾವಣೆ ರದ್ದುಗೊಳಿಸದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ ಡಿ ರೇವಣ್ಣ, ಜಿಲ್ಲೆಯಲ್ಲಿ ರೆಮಿಡಿಸಿವರ್ ಲಸಿಕೆ ಕೊರತೆ ಇದೆ. ಹಾಸ್ಟೆಲ್ ಗಳನ್ನು ವಶಕ್ಕೆ ಪಡೆದು ಕೋವಿಡ್ ಕೇರ್ ಕೇಂದ್ರಗಳನ್ನು ತೆರೆದಿಲ್ಲ. ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಜಿಲ್ಲಾಧಿಕಾರಿ ವಿಫಲರಾಗಿದ್ದಾರೆ. ಅವರಿಗೆ ಪ್ರಾಕ್ಟಿಕಲ್ ಅನುಭವ ಇಲ್ಲ. ನಾನು 22 ವರ್ಷಗಳಿಂದ ಶಾಸಕನಾಗಿದ್ದೇನೆ. ಆದರೂ ನನ್ನ ಸಲಹೆ ಪಡೆಯುತ್ತಿಲ್ಲ. ಈ ಹೊತ್ತಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಸರ್ಜನ್ ಡಾ ಕೃಷ್ಣಮೂರ್ತಿಯವರನ್ನು ವರ್ಗಾಯಿಸಲಾಗಿದೆ.
ಮಡಿಕೇರಿಯಿಂದ ಅದ್ಯಾವುದೋ ಅನುಭವ ಇಲ್ಲದ ಹುಡುಗನನ್ನು ಜಿಲ್ಲಾ ಸರ್ಜನ್ ಹುದ್ದೆಗೆ ತಂದಿದ್ದಾರಂತೆ. ಅವನು ತರಲೆ ಗಿರಾಕಿ. ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅನುಭವಿ ಸರ್ಜನ್ ರ ವರ್ಗಾವಣೆ ಜಿಲ್ಲೆಯ ಜನತೆಗೆ ಬಗೆದ ದ್ರೋಹವಾಗಿದೆ. ಸರ್ಕಾರದ ನಿಲುವು ಖಂಡನೀಯವಾಗಿದೆ. ಜಿಲ್ಲೆಗೆ ಅಗತ್ಯವಿರುವ ಲಸಿಕೆಗಳನ್ನು ಕೊಡಬೇಕು, ಡಾ ಕೃಷ್ಣಮೂರ್ತಿಯವರ ವರ್ಗಾವಣೆ ರದ್ದು ಪಡಿಸಿ, ಜಿಲ್ಲಾ ಸರ್ಜನ್ ಹುದ್ದೆಯಲ್ಲಿ ಮುಂದುವರೆಸ ಬೇಕು. ಇಲ್ಲದಿದ್ದರೆ ನಾಳೆ ಸಿಎಂ ಮನೆ ಮುಂದೆ ಧರಣಿ ಪ್ರತಿಭಟನೆ ಮಾಡುತ್ತೇನೆ ಎಂದು ಹೆಚ್ ಡಿ ರೇವಣ್ಣ ಎಚ್ಚರಿಸಿದ್ದಾರೆ.
Tags
ಹಾಸನ