ಹಾಸನ: ಕೊರೊನಾ ಆರಂಭವಾದ ನಂತರ ಸಾವು, ನೋವು, ಸಂಕಟದ ಘಟನೆಗಳಿಗೆ ಕೊನೆಯೇ ಇಲ್ಲವೆಂಬಂತಾಗಿದೆ. ಸೋಂಕು ತಗುಲಿದವರು ಹೇಗೆ ಪಡಬಾರದ ಪಾಡು ಅನುಭವಿಸುತ್ತಾರೋ ಅದೇ ರೀತಿ ಕೊರೊನಾ ಅಲ್ಲದೇ ಬೇರೆ ಕಾಯಿಲೆಗೆ ತುತ್ತಾದವರೂ ಕಷ್ಟವನ್ನು ಅನುಭವಿಸುವುದು ತಪ್ಪಿದ್ದಲ್ಲ. ಒಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದರೆ ಎಲ್ಲಿ ಕೊರೊನಾ ತಗುಲುತ್ತದೋ ಎಂಬ ಭಯ, ಇನ್ನೊಂದೆಡೆ ಇದೇ ಕೊರೊನಾ ಉಂಟು ಮಾಡಿರುವ ಆರ್ಥಿಕ ಸಂಕಷ್ಟ ಎಂತಹವರನ್ನೂ ನಲುಗಿಸುತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೆಂಬಂತೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಯುವಕ ಪವನ್ ಎಂಬುವವರು ತನ್ನ ತಂದೆಯನ್ನು ಉಳಿಸಿಕೊಡುವಂತೆ ಕಣ್ಣೀರಿಡುತ್ತಾ, ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸುವ ವಿಡಿಯೋವೊಂದನ್ನು ಮಾಡಿದ್ದಾರೆ.
ಹೃದಯಾಘಾತ, ಸ್ಟ್ರೋಕ್ ಸಮಸ್ಯೆಗೆ ಒಳಗಾಗಿರುವ ಪವನ್ ಅವರ ತಂದೆ ಹಾಸನದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಚಿಕಿತ್ಸೆ ವೆಚ್ಚವನ್ನು ಭರಿಸುವುದು ಕಷ್ಟವಾಗಿದ್ದು, ಹೇಗಾದರೂ ಮಾಡಿ ತಂದೆಯನ್ನು ಉಳಿಸಿಕೊಡಿ ಎಂದು ಯುವಕ ಪವನ್ ಕಣ್ಣೀರಿಟ್ಟಿದ್ದಾರೆ. ವಿಡಿಯೋ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸೇರಿದಂತೆ ಎಲ್ಲರಲ್ಲೂ ಮನವಿ ಮಾಡಿರುವ ಪವನ್, ಆಸ್ಪತ್ರೆಯ ಬಿಲ್ ಪಾವತಿಸಲು ನಮ್ಮ ಬಳಿ ಹಣವಿಲ್ಲ. ದಯವಿಟ್ಟು ನಮ್ಮ ತಂದೆಗೆ ಚಿಕಿತ್ಸೆ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ.
ನಮ್ಮ ತಂದೆ ನಮ್ಮನ್ನು ಕಷ್ಟಪಟ್ಟು ಸಾಕಿದ್ದಾರೆ. ಈಗ ಆರೋಗ್ಯ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕು. ಆದರೆ, ಅದಕ್ಕೆ ಬೇಕಾದ ಚಿಕಿತ್ಸೆಗೆ ನೀಡುವಷ್ಟು ಹಣ ನಮ್ಮ ಬಳಿ ಇಲ್ಲ. ದಯವಿಟ್ಟು ನೀವು ಸಹಾಯ ಮಾಡಿ. ತಂದೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ. ಆ ಮೂಲಕ ನಮ್ಮ ತಂದೆಯ ಜೀವ ಉಳಿಸಿ ಎಂದು ಪವನ್ ಪರಿಪರಿಯಾಗಿ ವಿನಂತಿಸಿಕೊಂಡಿದ್ದಾರೆ.