ಹಾಸನ: ಸಾಗುವಳಿ ಮಾಡುತ್ತಿರುವ ದಲಿತರನ್ನು ಒಕ್ಕಲೆಬ್ಬಿಸಿ ಏನಾದರೂ ಬಲವಂತವಾಗಿ ಭೂಮಿಯಿಂದ ತೆರವುಗೊಳಿಸಿದರೇ ಗಂಗೂರಿನ ಜೀತವಿಮುಕ್ತ ದಲಿತರು ಎಲ್ಲಾ ಸೇರಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಅನಿರ್ಧಿಷ್ಟವಧಿ ಧರಣಿ ಮಾಡಬೇಕಾಗುತ್ತದೆ ಎಂದು ದಲಿತ ಹಿರಿಯ ಮುಖಂಡರಾದ ಹೆಚ್.ಕೆ. ಸಂದೇಶ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರದAದು ಮಾತನಾಡಿ, ಅರಕಲಗೂಡು ತಾಲ್ಲೂಕು ಗಂಗೂರು ಗ್ರಾಮದ ಜೀತವಿಮುಕ್ತರು ಸಾಗುವಳಿ ಮಾಡುತ್ತಿರುವ ಭೂಮಿಯಿಂದ ಅರಣ್ಯ ಇಲಾಖೆಯು ಬಲವಂತವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ದಲಿತ ಹಾಗೂ ಜನಪರ ಸಂಘಟನೆಗಳು ಖಂಡಿಸುತ್ತವೆ. ಕಳೆದ ೩೫-೪೦ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜೀತವಿಮುಕ್ತರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಅವರನ್ನು ಏಕಾಏಕಿಯಾಗಿ ಒಕ್ಕಲೆಬ್ಬಿಸುತ್ತಿರುವುದು ದೌರ್ಜನ್ಯದ ಪರಮಾವಧಿಯಾಗಿದೆ ಎಂದು ದೂರಿದರು. ೧೯೯೪ ರಲ್ಲಿಯೇ ಜಿಲ್ಲಾಡಳಿತ ಗಂಗೂರು ಗ್ರಾಮದಲ್ಲಿ ೯೧ ದಲಿತ ಕುಟುಂಬಗಳನ್ನು ಜೀತವಿಮುಕ್ತಗೊಳಿಸಿ ಅವರಿಗೆ ಕೃಷಿ ಭೂಮಿ ನೀಡಿ ಮತ್ತು ಇನ್ನಿತರೆ ಜೀವನೋಪಾಯ ವ್ಯವಸ್ಥೆಗಳನ್ನು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆ ಕಳುಹಿಸಿ ೨೭ ವರ್ಷ ಕಳೆದರೂ ಕೂಡ ಜೀತವಿಮುಕ್ತರಿಗೆ ಒಂದು ತುಂಡು ಭೂಮಿಯನ್ನೂ ನೀಡಲು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಜೀತ ಪದ್ದತಿಯಿಂದ ಹೊರಬಂದ ದಲಿತ ಕುಟುಂಬಗಳು ಕಳೆದ ೩೫-೪೦ ವರ್ಷಗಳಿಂದಲೂ ಸಾಗುವಳಿ ಮಾಡುತ್ತಿತುವ ಭೂಮಿಯಿಂದಲೂ ಕೂಡ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಅವರನ್ನು ತೆರವುಗೊಳಿಸಿರುವುದು ಅತ್ಯಂತ ಅಮಾನವೀಯವಾಗಿದೆ ಎಂದರು. ದಲಿತರ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿರುವ ಅರಣ್ಯ ಇಲಾಖೆಯ ಕ್ರಮವನ್ನು ಜಿಲ್ಲಾಧಿಕಾರಿಗಳು ತಡೆಯಬೇಕೆಂದು ಒತ್ತಾಯಿಸುತ್ತೇವೆ. ಇಲ್ಲದಿದ್ದರೆ ಜೀತವಿಮುಕ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಸಿದರು.
ಕಾಯ್ದೆಯನುಸಾರ ಕೃಷಿಭೂಮಿ ಸೇರಿದಂತೆ ವಿವಿಧ ಶಾಶ್ವತ ಪರಿಹಾರ ಸೌಲಭ್ಯಗಳನ್ನು ನೀಡುವ ಭರವಸೆ ನೀಡಲಾಗಿತ್ತು. ಆದರೆ ಜೀತವಿಮುಕ್ತಗೊಂಡು ೨೭ ವರ್ಷಗಳಾದರೂ ಎಲ್ಲಾ ಜೀತವಿಮುಕ್ತರಿಗೆ ಕೃಷಿಭೂಮಿಯನ್ನು ನೀಡಿಲ್ಲ. ಈ ಮೊದಲು ಕೆಲಸಕ್ಕೆ ಹೋಗುತ್ತಿದ್ದವರು ಈಗ ಕೆಲಸ ನೀಡುತ್ತಿಲ್ಲ. ಹೀಗಾಗಿ ಇದರಿಂದ ಅವರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಜೀತವಿಮುಕ್ತರು ಸಾಗುವಳಿ ಮಾಡುತ್ತಿದ್ದು, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಅದೇ ಭೂಮಿಯನ್ನು ಗಂಗೂರು ಜೀತವಿಮುಕ್ತರಿಗೆ ನೀಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ದಬ್ಬಾಳಿಕೆ ನಡೆಸಿ ಗಿಡ ನೆಡುವುದನ್ನು ಬಿಡಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.
ಬೇಡಿಕೆಗಳು: ಗಂಗೂರು ಜೀತವಿಮುಕ್ತ ಎಲ್ಲಾ ಕುಟುಂಬಗಳಿಗೆ ಅವರು ಇದುವರೆಗೂ ಸಾಗುವಳಿ ಮಾಡುತ್ತಿರುವ ಜಾಗದಲ್ಲಿಯೆರ ತಲಾ ೪ ಎಕರೆ ಕೃಷಿ ಭೂಮಿಯನ್ನು ಮಂಜೂರು ಮಾಡಬೇಕು. ಜೀತವಿಮುಕ್ತರ ಪಟ್ಟಿಯಲ್ಲಿರುವ ಹೆಸರಿನ ಕುಟುಂಬದ ನೇರ ತಲೆಮಾರನ್ನು ಜೀತವಿಮುಕ್ತ ಕುಟುಂಬ ಎಂದು ಪರಿಗಣಿಸಿ ಎಲ್ಲರಿಗೂ ಸೌಲಭ್ಯ ನೀಡಬೇಕು ಎಂದರು. ಗಂಗೂರಿನ ಜೀತ ವಿಮುಕ್ತ ದಲಿತ ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ಕನಿಷ್ಠ ತಲಾ ೧೦,೦೦೦ ರೂ. (ಪ್ರತಿ ತಿಂಗಳು) ಉಚಿತ ಪಡಿತರ ನೀಡಬೇಕು ಮತ್ತು ಗಂಗೂರು ಜೀತವಿಮುಕ್ತರನ್ನು ವಿಶೇಷ ಸಂತ್ರಸ್ತರೆAದು ಪರಿಗಣಿಸಿ ವಿಶೇಷ ಯೋಜನೆಗಳಡಿ ಪರಿಹಾರ, ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮತ್ತು ಜನಪರ ಸಂಘಟನೆಗಳ ಸಿಪಿಐಎಂ ಕಾರ್ಯದರ್ಶಿ ಧರ್ಮೇಶ್, ದಸಂಸ ಜಿಲ್ಲಾ ಸಂಚಾಲಕ ಕೃಷ್ಣದಾಸ್, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ಇತರರು ಪಾಲ್ಗೊಂಡಿದ್ದರು.