ಅವಧಿಗೂ ಮುನ್ನವೇ ಮುಂಗಾರು ಪ್ರವೇಶ; ಚಂಡಮಾರುತದ ಬೆನ್ನಲ್ಲೇ ಮಳೆಗಾಲ ಆಗಮನ

ಮಳೆಗಾಲದ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಮೇ 31ರಂದು ನೈರುತ್ಯ ಮುಂಗಾರು ಕೇರಳವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸಾಧಾರಣವಾಗಿ ಜೂನ್ 1ನೇ ತಾರೀಖು ಮುಂಗಾರು ಪ್ರವೇಶಿಸುವುದಾಗಿದ್ದು, ಈ ಬಾರಿಯೂ ಅಂದೇ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹವಾಮಾನ ಇಲಾಖೆ ನಿನ್ನೆ (ಮೇ 14) ಬಿಡುಗಡೆಗೊಳಿಸಿದ ವರದಿಯಲ್ಲಿ ಒಂದು ದಿನ ಮುಂಚಿತವಾಗಿಯೇ ಮುಂಗಾರು ಕೇರಳಕ್ಕೆ ಕಾಲಿಡಲಿದೆ ಎಂದು ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ರೂಪುಗೊಳ್ಳುತ್ತಿರುವ ಜತೆಗೆ ನೈರುತ್ಯ ಮಾರುತಗಳೂ ಪ್ರಬಲಗೊಳ್ಳುತ್ತಿವೆ. ಹೀಗಾಗಿ ಅವಧಿಗೂ ಮುನ್ನವೇ ಮುಂಗಾರು ಕೇರಳವನ್ನು ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ. ಮೇ 22ರಿಂದಲೇ ನೈರುತ್ಯ ಮುಂಗಾರು ಅಂಡಮಾನ್ ಪ್ರದೇಶದ ಮೂಲಕ ಹಾದುಬರಬಹುದು ಎಂದು ಅಂದಾಜಿಸಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಅಲ್ಲದೇ, ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮುಂಗಾರು ಮಳೆ ಆಗಲಿದೆ ಎಂಬ ನಿರೀಕ್ಷೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಕೇರಳ, ಕರ್ನಾಟಕದ ವಿವಿಧ ಪ್ರದೇಶಗಳು ಸೇರಿದಂತೆ ದೇಶದ ಕೆಲ ಭಾಗಗಳಿಗೆ ತೌಕ್ತ ಚಂಡಮಾರುತದಿಂದ ಮಳೆ ಸಿಗುವ ನಿರೀಕ್ಷೆ ಹೆಚ್ಚಿದ್ದು ಇದರ ಬೆನ್ನಲ್ಲೇ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ.

ಇನ್ನೊಂದೆಡೆ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಪ್ರೈಮೆಟ್ ಗುರುವಾರ (ಮೇ 13) ನೀಡಿದ ಪ್ರಕಟಣೆಯಲ್ಲಿ ಮೇ 30ರಂದೇ ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸಲಿದೆ ಎಂದು ತಿಳಿಸಿದೆ. ಅಲ್ಲದೇ ಮುಂಗಾರು ಅವಧಿಯಲ್ಲಿ ಸರಾಸರಿ ಶೇ.103ರಷ್ಟು ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.

Post a Comment

Previous Post Next Post