ರಾಜ್ಯದಲ್ಲಿ ಕೆಲ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಕೆಲ ಮಠಗಳನ್ನ ಕೋವಿಡ್ ಕೇರ್ ಸೆಂಟರ್ಗಳಾಗಿ ಮಾಡಲಾಗ್ತಿದೆ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. 80 ಹಾಸಿಗೆಯುಳ್ಳ ಈ ಕೇಂದ್ರದಲ್ಲಿ ಐಸೋಲೇಶನ್ ವ್ಯವಸ್ಥೆ, ಊಟ, ವಸತಿ ಹಾಗೂ ಔಷಧಿ ಸೇರಿದಂತೆ ಪ್ರತಿಯೊಂದು ಸೌಲಭ್ಯವೂ ಸಹ ಉಚಿತವಾಗಿ ನೀಡಲಾಗುತ್ತಿದೆ.
ಕೋವಿಡ್ ಸಂಬಂಧ ಪರಿಶೀಲನಾ ಸಭೆಗಾಗಿ ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ತೂಮಕೂರಿಗೆ ತೆರಳುತ್ತಿದ್ದಾರೆ. ಈ ವೇಳೆ ಅವರು ಸಿದ್ದಗಂಗಾ ಮಠದ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.45ಕ್ಕೆ ರಸ್ತೆ ಮೂಲಕ ತುಮಕೂರಿಗೆ ಆಗಮಿಸಲಿರೋ ಸಿಎಂ, 11 ಗಂಟೆಗೆ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಕೋವಿಡ್-19 ಪರಿಶೀಲನಾ ಸಭೆ ನಡೆಸಲಿದ್ದಾರೆ. ಬಳಿಕ 12.15 ಕ್ಕ ಸಿದ್ದಗಂಗಾ ಮಠದ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಅರ್ಧ ಗಂಟೆ ಇದ್ದು ನಂತರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಇತ್ತ ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳು ಇದೀಗ ಮಠದಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ. ಇದಕ್ಕೂ ಮೊದಲು ಮಠದ ಆವರಣದಲ್ಲಿನ ವೃದ್ಧಾಶ್ರಮವನ್ನ 100 ಹಾಸಿಗೆಗಳ ಕೋವಿಡ್ ಕೇರ್ ಆಸ್ಪತ್ರೆಗಾಗಿ ಜಿಲ್ಲಾಡಳಿತಕ್ಕೆ ನೀಡಿದ್ರು. ಈಗ ಮತ್ತೊಮ್ಮೆ ಮಠದ ವಿದ್ಯಾರ್ಥಿನಿಲಯದಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ.
ಚಿತ್ರದುರ್ಗದ ಮುರುಘ ರಾಜೇಂದ್ರ ಮಠದ ಶ್ರೀಗಳು ಕೂಡ ಕೊರೊನಾ ಸಂಕಷ್ಟದ ಹೊತ್ತಲ್ಲಿ, ಸಂಪೂರ್ಣ ಉಚಿತ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯುವ ಮೂಲಕ ಅನೇಕ ಬಡ ರೋಗಿಗಳಿಗೆ ನೆರವಾಗಿದ್ದಾರೆ.