ಬೇಲೂರು ಪುರಸಭೆ-ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ:ರಕ್ಷಣೆ ಇಲ್ಲದ ಟಿಸಿ ಜೋತುಬಿದ್ದ ಆನ್ & ಆಫ್ ತಂತಿಗಳು; ಅನಾಹುತಕ್ಕೆ ಮುಂಚೆ ಕ್ರಮ ಅಗತ್ಯ

ಅನಂತರಾಜೇಅರಸು ಬೇಲೂರು: 

ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗಳಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದ ಅನೇಕ ಟ್ರಾನ್ಸ್‍ಫಾರ್ಮರ್‍ಗಳು ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಹಲವು ಕಡೆ ಇದ್ದು ಸೆಸ್ಕ್ ಇಲಾಖೆಯಿಂದ ಸೂಕ್ತಕ್ರಮ ಕೈಗೊಳ್ಳಬೇಕಿದೆ.ರಕ್ಷಣೆಯಿಲ್ಲ ಇಂತಹ ಟ್ರಾನ್ಸ್‍ಫಾರ್ಮರ್ ಬಳಿ ಪ್ರಾಣಿಗಳು ತೆರಳಿದಾಗ ವಿದ್ಯುತ್ ಶಾಕ್‍ನಿಂದ ಮೃತಪಟ್ಟ ಘಟನೆಗಳು ಆಗಾಗ್ಗೆ ನಡೆಯುತ್ತಿದೆ. ಇದಕ್ಕೆ ಇಂಬು ಕೊಡುವಂತೆ ಎರಡು ದಿನದ ಹಿಂದೆ ಇಲ್ಲಿನ ಕವಾಡಿಗೇರಿ ಬೀದಿಯಲ್ಲಿ ಕೆರೆಯೊಳಗೆ ಅಳವಡಿಸಿರುವ ಟ್ರಾನ್ಸ್‍ಫಾರ್ಮರ್ ಬಳಿ ಹಾಲು ಕೊಡುವ ಹಸುವೊಂದು ವಿದ್ಯುತ್  ಶಾಕ್‍ನಿಂದ ಸತ್ತಿದೆ ಎಂಬ ಕೇಳಿಬಂದಿದೆ.

ಈ ಟ್ರಾನ್ಸ್‍ಫಾರ್ಮರ್ ಸಮೀಪದಲ್ಲೇ ಕೆರೆಬೀದಿಯ ನಡುವೆ ರಸ್ತೆಪಕ್ಕ ಅಳವಡಿಸಿರುವ ಟ್ರಾನ್ಸ್‍ಫಾರ್ಮರ್ ಬಳಿ ಕೆಲವು ತಿಂಗಳ ಹಿಂದೆ ಇದೆ ರೀತಿ ದನವೊಂದು ವಿದ್ಯುತ್ ಶಾಕ್ ಉಂಟಾಗಿ ಒದ್ದಾಡಿ ಬದುಕುಳಿದಿದ್ದು ನಡೆದಿತ್ತು. ಈ ಹಿಂದೆ ಪ್ರಾಣಿಗಳು ಹಾಗೂ‌ ಮಕ್ಕಳು ಓಡಾಡುವಾಗ ತಿಳಿಯದೆ ಟಿಸಿ ಸಮೀಪ ಬಂದರೆ ಅನಾಹುತ

ಸಂಭವಿಸುವುದೆಂಬ ಮುಂದಾಲೋಚನೆಯಿಂದ ಟ್ರಾನ್ಸ್‍ಫಾರ್ಮರ್ಸ ಸುತ್ತ ಮುಳ್ಳುತಂತಿಯ ಬೇಲಿ ಅಳವಡಿಸಲಾಗುತ್ತಿತ್ತು. ಇದೀಗ

ಇಂತಹ ಕ್ರಮದಿಂದ ದೂರವಾಗಿರುವ ವಿದ್ಯುತ್ ಇಲಾಖೆ ಅಧಿಕಾರಿಗಳು ಏಕಾಗಿ ತಂತಿಬೇಲಿ ಹಾಕುತ್ತಿಲ್ಲ ಎಂಬುದು

ತಿಳಿಯದಾಗಿದೆ.

ದುರ್ಗಮ್ಮ ದೇವಿ ದೇವಸ್ಥಾನಕ್ಕೆ ತೆರಳುವ

ಮಾರ್ಗದಲ್ಲಿ ಕೆರೆಯೊಳಗೆ ಟ್ರಾನ್ಸ್‍ಫಾರ್ಮರ್ ಅನ್ನು

ಅಳವಡಿಸಲಾಗಿದೆ. ಟಿಸಿಗೆ ಸಂಬಂಧಿಸಿದ ಯಾವುದಾದರೊಂದು ತಂತಿ ಕೆರೆಯ ನೀರಿನೊಳಗೆ ಬಿದ್ದು ನೀರಿನಲ್ಲಿ ವಿದ್ಯುತ್ ಸಂಚಾರ

ಉಂಟಾದರೆ ಮುಂದಾಗುವ ಅನಾಹುತ ಊಹಿಸಲಸಾಧ್ಯ. ಪಟ್ಟಣದ ಹಲವು ಕಡೆ ರಸ್ತೆಪಕ್ಕ, ಮನೆ ಮುಂಭಾಗ ಅಳವಡಿಸಿರುವ ಟ್ರಾನ್ಸ್‍ಫಾರ್ಮರ್‍ಗಳಲ್ಲಿನ ವಿದ್ಯುತ್ ತಂತಿಗಳು

ಕೆಳಮಟ್ಟದಲ್ಲಿದ್ದು ಆಟವಾಡು ಮಕ್ಕಳು ಏನಾದರೂ

ಮುಟ್ಟಿದರೆ ಸಂಭವಿಸಬಹುದಾದ ಅನಾಹುತಕ್ಕೆ ಯಾರು

ಹೊಣೆಯಾಗಬಲ್ಲರು. ಇದೇ ಕಾರಣಕ್ಕೆ ಟಿಸಿ ಸುತ್ತ ತಂತಿಬೇಲಿ

ಅಳವಡಿಕೆ ಮಾಡುತ್ತಿದ್ದದು. ತಾಲ್ಲೂಕಿನಾದ್ಯಂತ ಎಲ್ಲೆಲ್ಲಿ ಟ್ರಾನ್ಸ್‍ಫಾರ್ಮರ್  ಅಳವಡಿಸಲಾಗಿದೆಯೋ ಅದರ ಸುತ್ತ ತಂತಿಬೇಲಿ ಅಳವಡಿಸುವುದಕ್ಕೆ ಸೆಸ್ಕ್ ಅಧಿಕಾರಿಗಳು ಗಮನ ಹರಿಸಬೇಕಿದೆ.ಇಲ್ಲದಿದ್ದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮನುಷ್ಯ-ಪ್ರಾಣಿಗಳ ಪ್ರಾಣಹಾನಿ ನಡೆದೇ ಇರುತ್ತದೆ.

ಪುರಸಭೆ ನಿರ್ಲಕ್ಷ್ಯ: ಸೆಸ್ಕ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ

ಒಂದಾದರೆ, ಬೇಲೂರು ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ

ಮತ್ತೊಂದು ರೀತಿಯಾಗಿದೆ. ಪಟ್ಟಣದಲ್ಲಿನ ಬೀದಿದೀಪ ನಿರ್ವಹಣೆಯ

ಜವಾಬ್ದಾರಿ ಹೊತ್ತಿರುವ ಪುರಸಭೆಯ ಅಧಿಕಾರಿಗಳು, ವಿದ್ಯುತ್

ಕಂಬದ ಲೈಟ್ ಆನ್ ಅಂಡ್ ಆಫ್ ಮಾಡಲು ತಮ್ಮದೆ ತಂತ್ರಜ್ಞಾನ ಬಳಿ ಸುಚ್ಚುಗಳನ್ನು ಕಂಡುಹಿಡಿದುಕೊಂಡಿದ್ದಾರೆ.

ಇವರೇನು ಈ ನೂತನ ತಂತ್ರಜ್ಞಾನವನ್ನು

ವಿದೇಶದಿಂದ ಪಡೆದಿಲ್ಲ. ಸ್ವತಃ ಕಂಡು ಹಿಡಿದುಕೊಂಡಿದ್ದಾರೆ. ತುಂಬ ಸುಲಭವಾದ, ಸರಳವಾದ ವಿಧಾನ ಇದಾಗಿದೆ. ಅದೇನಪ್ಪ ಎಂದರೆ,ಸಂಜೆ ಆದೊಡನೆ ಬೀದಿದೀಪದ ಲೈಟ್ ಹತ್ತಿಸಲು ವಿದ್ಯುತ್ ಕಂಬದ ಬಳಿ ಕೈಗೆ ಎಟಕುವ ಹಾಗೆ ಎರಡು ತಂತಿಗಳನ್ನು ಬಿಟ್ಟಿದ್ದಾರೆ. 

ಈ ಎರಡು ತಂತಿಗಳನ್ನು ಒಂದಕ್ಕೊಂದು ಕೊಕ್ಕೆಯಾಗಿ

ಜೋಡಿಸಿದರೆ ಸಾಕು ಬೀದಿದೀಪ ಹತ್ತಿಕೊಳ್ಳುತ್ತದೆ. ಬೆಳಿಗ್ಗೆ

ಬೆಳಕಾದೊಡನೆ ಜೋಡಿಸಿದ ಕೊಕ್ಕೆಯಂತಿರುವ

ತಂತಿಗಳನ್ನು ಬಿಚ್ಚಿ ಬರುತ್ತಾರೆ, ಆಗ ಲೈಟ್ ಆಫ್ ಆಗುತ್ತದೆ.

ವಿಶೇಷ ಎಂದರೆ ಈ ಕೆಲಸಕ್ಕೆ ನೇಮಕವಾಗಿರುವ ನೌಕರರು,

ತಾವು ಬರುವ ವಾಹನದಲ್ಲೇ ಕುಳಿತು `ಆನ್ ಅಂಡ್ ಆಫ್' ಕೆಲಸ ನಿರ್ವಹಿಸಿ ತೆರಳುತ್ತಾರೆ. ಇದು ನಮ್ಮ ಬೇಲೂರು ಪುರಸಭೆಯ ನೂತನ ತಂತ್ರಜ್ಞಾನ ಎಂದರೆ ತಪ್ಪಾಗಲಾರದು.

ಪುರಸಭೆಯವರೇನೋ ಸುಲಭವಾಗಿ `ಆನ್ ಅಂಡ್ ಆಫ್'

ಗೆ ಈ ತಂತಿ ಜೋಡಿಸುವ ವಿಧಾನ ಕಂಡುಕೊಂಡಿದ್ದಾರೆ. ಆದರೆ ಸಣ್ಣ ಮಕ್ಕಳ ಕೈಗೆಟಕುವ ಅಳತೆಯಲ್ಲಿ ಈ ತಂತಿಗಳು

ಜೋತಾಡುತ್ತಿರುತ್ತವೆ. ಇದನ್ನು ತಿಳಿಯದೆ ಯಾರಾದರೂ

ಮುಟ್ಟಿದರೆ `ಶಿವನಪಾದವೇ ಗತಿ' ಇದರ ಅರಿವು ಇದೆಯೋ ಅಥವಾ ನಿರ್ಲಕ್ಷ್ಯವೋ ಗೊತ್ತಿಲ್ಲ. ಒಟ್ಟಾರೆ ತಮಗೆ ಅನುಕೂಲ

ಆಗುವಂತೆ ಮಾಡಿಕೊಂಡಿರುವ ಈ ವ್ಯವಸ್ಥೆಯಿಂದ ಅನಾಹುತವಾದರೆ

ಜವಾಬ್ದಾರರು ಯಾರಾಗುತ್ತಾರೆ? ಹೋದ ಜೀವ ಪುನಃ

ಬರುತ್ತದೆಯೇ? ಈ ಬಗ್ಗೆ ಅಧಿಕಾರಿಗಳು ಶೀಘ್ರ

ಗಮನಹರಿಸಬೇಕಿದೆ ಎಂಬುದು ಸಹ ಜನತೆಯ ಒತ್ತಾಯ.





ಬೇಲೂರು ಪಟ್ಟಣದಲ್ಲಿ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗಳಿಗೆ ರಕ್ಷಣಾ ತಂತಿಬೇಲಿ ಇಲ್ಲದಿರುವುದು



ಬೇಲೂರು ಪಟ್ಟಣದ ಬೀದಿದೀಪದ ವಿದ್ಯುತ್ ಕಂಬದಲ್ಲಿನ

ತಂತಿಯನ್ನು ಜೋಡಿಸುತ್ತಿರುವ ನೌಕರ




ಬೇಲೂರು ಪಟ್ಟಣದ ರಸ್ತೆಬದಿ ವಿದ್ಯುತ್ ಕಂಬದಲ್ಲಿ

ಕೈಗೆಟಕುವಷ್ಟು ಹಂತದಲ್ಲಿರುವ ಜೋತುಬಿದ್ದಿರುವ

ತಂತಿಗಳು


Post a Comment

Previous Post Next Post