ಚನ್ನರಾಯಪಟ್ಟಣ ಮೂಲದ ಬರಗೂರು ವಿಜಿ ಅಲಿಯಾಸ್ ವಿಜಯ್ ಕುಮಾರ್ ಮತ್ತು ಕಾಳೇನಹಳ್ಳಿ ಚೇತು ಅಲಿಯಾಸ್ ಚೇತನ್ ಕುಮಾರ್ ಎಂಬ ಇಬ್ಬರು ರೌಡಿಶೀಟರ್ ಮಧ್ಯೆ ಚನ್ನರಾಯಪಟ್ಟಣದ ಹೊರವಲಯದ ಹೊನ್ನಶೆಟ್ಟಿಹಳ್ಳಿ ರಸ್ತೆಯ ಆಲ್ಪೋನ್ಸ್ ನಗರದ ಸಮೀಪ ಗುಂಡಿನ ಕಾಳಗ ನಡೆದಿದೆ. ಚೇತು ಮತ್ತು ವಿಜಿ ಬದ್ದ ವೈರಿಗಳು. ಜಿಲ್ಲೆಯಲ್ಲಿ ನಡೆಯುವ ಹಫ್ತಾ ವಸೂಲಿ ಸೇರಿದಂತೆ ಹಲವಾರು ಕೃತ್ಯದಲ್ಲಿ ಇವರು ಭಾಗಿಯಾಗಿದ್ದಾರೆ. ಹಾಸನ ಭೂಗತ ಲೋಕದ ಸಾಮ್ರಾಜ್ಯದ ಅಧಿಪತಿಯಾಗಲು ಇಬ್ಬರ ಮಧ್ಯೆ ಮೊದಲಿನಿಂದಲೂ ಕಾಳಗ ನಡೆಯುತ್ತಿದೆ.
ಫೀಲ್ಡ್ನಲ್ಲಿ ಯಾರಾದ್ರು ಒಬ್ಬ ಮಾತ್ರ ಡಾನ್ ಇರಬೇಕು ಎಂದು ಇಬ್ಬರ ಕಡೆಯವರು ಸಂಚು ರೂಪಿಸುತ್ತಿದ್ದಾರೆ. ಆದ್ರೆ ಇಬ್ಬರಲ್ಲಿಯೂ ಯಾರೂ ಇದುವರೆಗೂ ಮಣಿದಿಲ್ಲ. ಚನ್ನರಾಯಪಟ್ಟಣದ ಕಡೆಯಿಂದ ಸ್ಕಾರ್ಪಿಯೋದಲ್ಲಿ ಬರುತ್ತಿದ್ದ ನಟೋರಿಯಸ್ ಚೇತುವಿನ ಚಲನ-ವಲನ ಕಲೆಹಾಕಿದ್ದ ಬರಗೂರು ವಿಜಿ ಹೊಳೆನರಸೀಪುರ- ಚನ್ನರಾಯಪಟ್ಟಣ ರಸ್ತೆಯ ಹೊನ್ನಶೆಟ್ಟಿಹಳ್ಳಿ ಗ್ರಾಮದ ಸಮೀಪದಲ್ಲಿ ಅಟ್ಯಾಕ್ ಮಾಡಿದ್ದಾನೆ ಎನ್ನಲಾಗಿದೆ. ಮಾರುತಿ ರಿಜ್ ಮತ್ತು ಟೊಯೋಟಾ ಇಟಿಯೋಸ್ನಲ್ಲಿ ಬಂದ ದುಷ್ಕರ್ಮಿಗಳು ಏಕಾ ಏಕಿ ಚೇತುವನ್ನು ಎರಡು ಕಾರಿನಿಂದ ಸುತ್ತುವರಿದಿದ್ದಾರೆ. ಮೊದಲು ಡಬಲ್ ಬ್ಯಾರಲ್ ಗನ್ನಿಂದ ಸ್ಕಾರ್ಪಿಯೋ ಕಾರಿನ ಚಕ್ರಕ್ಕೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಮತ್ತೊಂದು ಪಿಸ್ತೂಲಿನಿಂದ ಕಾರಿನೊಳಗಿದ್ದ ಚೇತುವಿನ ಮೇಲೆ ಗುಂಡು ಹಾರಿಸಿದ್ದಾರೆ. ಆದ್ರೆ ಹಾರಿಸಿದ ಗುಂಡಿನಿಂದ ತಪ್ಪಿಸಿಕೊಂಡ ಚೇತು ಕ್ಷಣಾರ್ಧದಲ್ಲಿ ಅಲ್ಲಿಂದ ಎಸ್ಕೇಪ್ ಆಗಿ ನಲ್ಲೂರಿನ ಕಡೆ ಪರಾರಿಯಾಗಿದ್ದಾನೆ.
ಬೆಂಗಳೂರಿನ ಭೂಗತ ಲೋಕದ ಮತ್ತೊಬ್ಬ ರೌಡಿ ಕುಣಿಗಲ್ ಗಿರಿಯ ಸೈಟ್ ಡೀಲಿಂಗ್ ವ್ಯವಹಾರದಲ್ಲಿ ಕಾಳೇನಹಳ್ಳಿ ಚೇತು ಅಡ್ಡಗಾಲು ಹಾಕಿ ಬೆದರಿಸಿದ್ದ ಎನ್ನಲಾಗಿದ್ದು, ಅದೇ ಕಾರಣಕ್ಕೆ ಕುಣಿಗಲ್ ಗಿರಿ ಮತ್ತು ಅವನ ಸಹಚರರು ಈತನನ್ನು ಮುಗಿಸಲು ಸ್ಕೆಚ್ ಹಾಕಿದ್ರು ಎನ್ನಲಾಗಿದೆ. ಅದಕ್ಕೆ ಕೈಜೋಡಿಸಿದ್ದು, ಇದೇ ಬರಗೂರು ವಿಜಿ ಎಂಬ ಆರೋಪ ಇದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಹಾಗೂ ಡಿವೈಎಸ್ಪಿ ಲಕ್ಷ್ಮೇಗೌಡ ಮತ್ತು ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಸಿಕ್ಕ ಎರಡು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ