ಕೊರೊನಾ ಅಂತ್ಯದ ಬಳಿಕ ಡಾ.ನಾ.ಸು.ಹರ್ಡೀಕರ್ ಕುರಿತು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ: ಶಾಂತಕುಮಾರ್

ಬೇಲೂರು: ಸಮಾಜಕ್ಕೆ ಶಿಸ್ತು, ಬದ್ಧತೆ ಕುರಿತು ಸಂದೇಶ ಕೊಟ್ಟಂತಹ ಸ್ವಾತಂತ್ರ್ಯ ಹೋರಾಟಗಾರರೂ ಆದ ಡಾ.ನಾ.ಸು.ಹರ್ಡೀಕರ್ ಅವರ ಜೀವನ ಶೈಲಿ, ವಿಚಾರ ಕುರಿತು ಕೊರೊನಾ ಹಾವಳಿ ಅಂತ್ಯಗೊಂಡ ನಂತರ ಶಾಲಾ ಮಕ್ಕಳಿಗೆ ಅರಿವು ಮೂಡಿಸುವಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಪುರಸಭೆಯ ಸದಸ್ಯ ಜಿ.ಶಾಂತಕುಮಾರ್ ತಿಳಿಸಿದರು.



ಡಾ.ನಾ.ಸು.ಹರ್ಡೀಕರ್ ಅವರ 132ನೇ ಜಯಂತಿ ಆಚರಣೆ ಸಂದರ್ಭ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತಸೇವಾದಳ ಸ್ಥಾಪನೆ ಬೇಲೂರಿನಲ್ಲಿ ಆಗಿರುವುದು ಸಂತೋಷದ ವಿಷಯ. ಅಂದು ಸದಸ್ಯರೆಲ್ಲರ ಸಹಕಾರದಿಂದ ವೃತ್ತ ನಿರ್ಮಾಣ ಮಾಡಲಾಗಿದೆ. ಕೊರೊನಾ ಹಾವಳಿ ಅಂತ್ಯಗೊಂಡನಂತರ ಡಾ.ನಾ.ಸು.ಹರ್ಡೀಕರ್ ಜೀವನ ಚರಿತ್ರೆ, ಬದುಕು ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗುವುದು. ಹರ್ಡಿಕರ್ ಅವರ ಮಾರ್ಗದರ್ಶನ ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎಂದು ತಿಳಿಸಿದರು.

ಆರಕ್ಷಕ ಉಪನಿರೀಕ್ಷಕ ಎಸ್.ಜಿ.ಪಾಟೀಲ್ ಡಾ.ನಾ.ಸು.ಹರ್ಡೀಕರ್ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ನಾವೆಲ್ಲರೂ ಅವರ ಧ್ಯೇಯೋದ್ದೇಶ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ನಾನೂ ಸಹ ಭಾರತಸೇವಾದಳದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಇದೊಂದು ದೇಶಭಕ್ತಿ ಹೊಂದಿರುವಂತ ಸಂಸ್ಥೆಯಾಗಿದೆ. ಕೊರೊನಾ ಹಾವಳಿ ಹೆಚ್ಚಿರುವುದರಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದೆಂದು ಮನವಿ ಮಾಡಿದರು.

ಜಿಲ್ಲಾ ಭಾರತಸೇವಾದಳ ಸಂಚಾಲಕಿ ರಾಣಿ ಮಾತನಾಡಿ, ಪುರಸಭೆಯಿಂದ ಲಕ್ಷಾಂತರ ರೂ. ವೆಚ್ಚಮಾಡಿ, ಡಾ.ನಾ.ಸು.ಹರ್ಡೀಕರ್ ವೃತ್ತವನ್ನು ಹೆಚ್.ಎಂ.ದಯಾನಂದ್ ಹಾಗೂ ಜಿ.ಶಾಂತಕುಮಾರ್ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದೀಗ ಭಾರತಸೇವಾದಳಕ್ಕೆ ತಾಲ್ಲೂಕಿನಲ್ಲಿ ಒಂದು ಕಚೇರಿಗೆ ಸ್ಥಳದ ಅಗತ್ಯವಿದೆ. ಆಗಸ್ಟ್ 26 ರಂದು ಡಾ.ನಾ.ಸು.ಹರ್ಡೀಕರ್ ಅವರ ಪುಣ್ಯ ಸ್ಮರಣೆ ದಿನ ಕಚೇರಿ ಉದ್ಘಾಟನೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್, ಮಾಜಿ ಪುರಸಭೆ ಅಧ್ಯಕ್ಷ ಹೆಚ್.ಎಂ.ದಯಾನಂದ್, ಕರವೇ ಅಧ್ಯಕ್ಷ ಚಂದ್ರಶೇಖರ್, ಶಿಕ್ಷಕ ನಾಗರಾಜು, ಸಮಾಜ ಸೇವಕ ಗೋಪಿನಾಥ್, ಜಿಲ್ಲಾ ಸಮಿತಿ ಸದಸ್ಯ ರಮೇಶ್, ಸುಬ್ಬು, ವಿ.ಎಸ್.ರಕ್ಷಿತ್ ಪ್ರಸಾದ್ ಉಪಸ್ಥಿತರಿದ್ದರು.

7 ಬಿಎಲ್‍ಆರ್‍ಪಿ-3

ಬೇಲೂರಿನಲ್ಲಿ ಡಾ.ನಾ.ಸು.ಹರ್ಡಿಕರ್ ಅವರ 132 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು 

Post a Comment

Previous Post Next Post